ಸಾರಾಂಶ
ಬಳ್ಳಾರಿ: ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಸೃಷ್ಟಿಸಬೇಕು. ಸ್ವತಂತ್ರವಾಗಿ ಯೋಚನೆ ಮಾಡುವ ಶಕ್ತಿ ರೂಪಿಸಬೇಕು. ಮಾಹಿತಿಯನ್ನು ತುಂಬುವುದಷ್ಟೇ ಶಿಕ್ಷಣ ಸಂಸ್ಥೆಗಳ ಕೆಲಸವಾಗಬಾರದು ಎಂದು ಗದುಗಿನ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಹೇಳಿದರು.
ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವವಿದ್ಯಾಲಯದ 15ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ವಿಶ್ವವಿದ್ಯಾಲಯಗಳು ವ್ಯಕ್ತಿತ್ವ ಬದಲಾಯಿಸಬೇಕು. ಪ್ರಜ್ಞೆಯನ್ನು ವಿಸ್ತಾರಗೊಳಿಸಬೇಕು. ಆದರೆ, ಇಂದಿನ ಶಿಕ್ಷಣ ವ್ಯವಸ್ಥೆ ಬರೀ ಮಾಹಿತಿಯನ್ನು ತುಂಬಿ ಮಕ್ಕಳನ್ನು ಮಾಹಿತಿಯ ಮೂಟೆ ಹೋರಿಸುವ ಕೆಲಸ ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಶಿಕ್ಷಣ ಇಲಾಖೆ ಯಾವುದೇ ಸರ್ಕಾರ ಅಥವಾ ರಾಜಕಾರಣಿಗಳ ಕಪಿಮುಷ್ಠಿಯಲ್ಲಿರಬಾರದು. ಯಾವುದೇ ಅಧಿಕಾರಿಗಳ ಕೈಯಲ್ಲೂ ಇರಬಾರದು. ಶಿಕ್ಷಣ ತಜ್ಞರದ್ದೇ ಒಂದು ಸಮಿತಿ ಸ್ಥಾಪಿಸಿ, ಆ ಸಮಿತಿಯೇ ನಿರ್ವಹಿಸುವಂತಾಗಬೇಕು. ಆಗ ಮಾತ್ರ ಶೈಕ್ಷಣಿಕ ಸುಧಾರಣೆ ಕಂಡುಕೊಳ್ಳಲು ಸಾಧ್ಯ ಎಂದು ಶ್ರೀಗಳು ಅಭಿಪ್ರಾಯಪಟ್ಟರು.ಭಾರತೀಯ ವಿದ್ಯಾರ್ಥಿ ಸೌಭಾಗ್ಯವಂತರು ಪ್ರಪಂಚದಲ್ಲಿ ಯಾರೂ ಇಲ್ಲ. ಒಂದು ಸಲಕ್ಕೆ ನಾಲ್ಕು ಕೋರ್ಸ್ ತೆಗೆದುಕೊಂಡು ಪಾಸ್ ಮಾಡುವ ಸಾಮರ್ಥ್ಯ ಭಾರತೀಯ ವಿದ್ಯಾರ್ಥಿಗಳಿಗಿದೆ. ಆದರೆ, ಅವರಲ್ಲಿರುವ ಕೀಳರಿಮೆಯಿಂದಾಗಿ ಅವರು ಹಿಂದೆ ಬೀಳುತ್ತಿದ್ದಾರೆ. ಮಕ್ಕಳಲ್ಲಿರುವ ಕೀಳರಿಮೆಯನ್ನು ಶಿಕ್ಷಕರಾದವರು ಹೋಗಲಾಡಿಸಬೇಕು. ನಿನ್ನಷ್ಟು ಅದ್ಭುತ ಯಾರೂ ಇಲ್ಲ. ನೀನು ಸಾಧಿಸಲೆಂದೇ ಭಾರತದಲ್ಲಿ ಹುಟ್ಟಿರುವೆ " ಎಂದು ಮಕ್ಕಳನ್ನು ಪ್ರೇರೇಪಿಸಬೇಕು ಎಂದರು.
ಇದು ಬರೀ ಉತ್ಪ್ರೇಕ್ಷೆಯ ಮಾತಲ್ಲ. ಭಾರತೀಯರ ಬೌದ್ಧಿಕ ಸಾಮರ್ಥ್ಯವನ್ನು ಸಾಬೀತುಪಡಿಸಲೆಂದೇ ಸ್ವಾಮಿ ವಿವೇಕಾನಂದರು ಹುಟ್ಟಿದರು. ಇಲ್ಲಿ ಹುಟ್ಟುವ ಪ್ರತಿ ಮಗುವಿನಲ್ಲೂ ಅತ್ಯದ್ಭುತ ಸಾಧನೆ ಮಾಡುವ ಸಾಮರ್ಥ್ಯವಿದೆ ಎಂದ ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮಿಗಳು, ಇನ್ನು 10 ವರ್ಷದಲ್ಲಿ ಯುರೋಪ್, ಅಮೆರಿಕದಿಂದ ಕಲಿಯಲು ಬಳ್ಳಾರಿ ವಿಶ್ವವಿದ್ಯಾಲಯಕ್ಕೆ ಬರಬೇಕು. ಇದನ್ನು ಸವಾಲಾಗಿ ಸ್ವೀಕರಿಸಬೇಕು. ಖಂಡಿತ ಇದು ಸಾಧ್ಯವಿದೆ ಎಂದು ತಿಳಿಸಿದರು.ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ, ವಿಜಯಪುರ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ತುಳಸಿಮಾಲಾ, ಹಾವೇರಿಯ ಕರ್ನಾಟಕ ಜನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ.ಭಾಸ್ಕರ್ ಮಾತನಾಡಿದರು.
ವಿಎಸ್‌ಕೆ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಜೆ.ತಿಪ್ಪೇರುದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಪ್ರಾಸ್ತಾವಿಕ ಮಾತನಾಡಿದ ವಿಎಸ್‌ಕೆ ವಿಶ್ವವಿದ್ಯಾಲಯದ ಕುಲಸಚಿವ ರುದ್ರೇಶ್.ಎಸ್.ಎನ್. ಕಳೆದ 14 ವರ್ಷಗಳಲ್ಲಿ ವಿಶ್ವವಿದ್ಯಾಲಯದ ಕಂಡುಕೊಂಡ ಪ್ರಗತಿ ಹಾಗೂ ವಿವಿಯ ಮುನ್ನೋಟ ಕುರಿತು ತಿಳಿಸಿದರು. ಕುಲಸಚಿವ(ಮೌಲ್ಯಮಾಪನ) ಪ್ರೊ.ರಮೇಶ್ ಓ.ಓಲೇಕಾರ, ವಿತ್ತಾಧಿಕಾರಿ ನಾಗರಾಜ ಸೇರಿದಂತೆ ವಿಶ್ವವಿದ್ಯಾಲಯದ ಮಾಜಿ ಕುಲಸಚಿವರುಗಳು, ಕುಲಸಚಿವರು(ಮೌಲ್ಯಮಾಪನ), ಹಣಕಾಸು ಅಧಿಕಾರಿಗಳು ಹಾಗೂ ವಿವಿಯ ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ತಿನ ಸದಸ್ಯರುಗಳು ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮ ಮುನ್ನ ವಿಶ್ವವಿದ್ಯಾಲಯದ ಆವರಣದಲ್ಲಿರುವ ಸ್ವಾಮಿ ವಿವೇಕಾನಂದರ ಪುತ್ಥಳಿಗೆ ಅತಿಥಿಗಳು ಪುಷ್ಪಾರ್ಪಣೆ ಮಾಡಿದರು. ಬಳಿಕ ಅಲ್ಲಿಂದ ಕಾರ್ಯಕ್ರಮದ ವೇದಿಕೆವರೆಗೆ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಆಗಮಿಸಿದರು. ವಿವಿಯ ಕುಲಸಚಿವ ರುದ್ರೇಶ್ ಅವರು ಸಮಾಳ ಬಾರಿಸಿ ವಿದ್ಯಾರ್ಥಿಗಳ ನೃತ್ಯಕ್ಕೆ ಸಾಥ್ ನೀಡಿ ಗಮನ ಸೆಳೆದರು.