ಸಾರಾಂಶ
ಸಮುದಾಯದ ಶೈಕ್ಷಣಿಕ ಹಾಗೂ ಸಾಮಾಜಿಕ ಮುನ್ನಲೆಗೆ ಸಮಾಜವು ಒಗ್ಗೂಡಿ ಕಾರ್ಯನಿರ್ವಹಿಸುವಂತಾಗಬೇಕು
ವಾಲ್ಮೀಕಿ ನಾಯಕರ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣಕನ್ನಡಪ್ರಭವಾರ್ತೆ ಬಳ್ಳಾರಿ
ಮಹಾಜ್ಞಾನಿ ವಾಲ್ಮೀಕಿ ಮಹಿರ್ಷಿಗಳ ಜ್ಞಾನ ಹಾಗೂ ಶೋಷಿತ ಸಮುದಾಯಗಳ ಆಶಾಕಿರಣ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೋರಾಟದ ಕಿಚ್ಚನ್ನು ವಾಲ್ಮೀಕಿ ಸಮಾಜ ಮೈಗೂಡಿಸಿಕೊಳ್ಳಬೇಕು. ಸಮುದಾಯದ ಶೈಕ್ಷಣಿಕ ಹಾಗೂ ಸಾಮಾಜಿಕ ಮುನ್ನಲೆಗೆ ಸಮಾಜವು ಒಗ್ಗೂಡಿ ಕಾರ್ಯನಿರ್ವಹಿಸುವಂತಾಗಬೇಕು ಎಂದು ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟದ ರಾಜ್ಯಾಧ್ಯಕ್ಷ ತಿಮ್ಮಪ್ಪ ಜೋಳದರಾಶಿ ತಿಳಿಸಿದರು.ನಗರದ ಮೋಕಾ ರಸ್ತೆಯ ಎನ್.ವೈ. ಕಾಂಪ್ಲೆಕ್ಸ್ ನ ರಾಜ್ಯ ಕೇಂದ್ರ ಕಚೇರಿಯಲ್ಲಿ ಜರುಗಿದ ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟದ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಮಾತನಾಡಿದರು.
ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ವಾಲ್ಮೀಕಿ ಸಮಾಜವನ್ನು ಜಾಗೃತಗೊಳಿಸುವುದು ಹಾಗೂ ಸಮುದಾಯದ ವಿದ್ಯಾರ್ಥಿಗಳು ಶೈಕ್ಷಣಿಕ ಬೆಳವಣಿಗೆಗೆ ಸಹರಿಸಿ, ಪ್ರೋತ್ಸಾಹಿಸುವ ದಿಸೆಯಲ್ಲಿ ಒಕ್ಕೂಟವನ್ನು ಅಸ್ವಿತ್ವಕ್ಕೆ ತರಲಾಗಿದ್ದು, ಇಡೀ ರಾಜ್ಯಾದ್ಯಂತ ಸಮುದಾಯವನ್ನು ಸಂಘಟಿಸಲಾಗುವುದು.ವಾಲ್ಮೀಕಿ ಸಮಾಜದ ಆದರ್ಶನೀಯ ಬದುಕು ರೂಪಿಸಿಕೊಳ್ಳಬೇಕು. ಸಮುದಾಯಕ್ಕೆ ಅನ್ಯಾಯವಾದಾಗ ಧ್ವನಿ ಎತ್ತುವಂತಾಗಬೇಕು. ರಾಜಕೀಯ ಕ್ಷೇತ್ರವಷ್ಟೇ ಅಲ್ಲ; ಉಳಿದ ಎಲ್ಲ ಕ್ಷೇತ್ರಗಳಲ್ಲೂ ಶೋಷಿತ ಸಮುದಾಯ ಪ್ರಗತಿಕಂಡುಕೊಳ್ಳಬೇಕು ಎಂದರು.
ಕಾನೂನು ಸಲಹೆಗಾರ ಹಿರಿಯ ವಕೀಲರಾದ ಜಯರಾಮ್, ಒಕ್ಕೂಟದ ರಾಜ್ಯ ಜಂಟಿ ಕಾರ್ಯದರ್ಶಿ ಸಂಗನಕಲ್ಲು ವಿಜಯಕುಮಾರ್, ಜೋಳದರಾಶಿ ಬಿ. ಚಂದ್ರಶೇಖರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ವೈ. ಸತ್ಯನಾರಾಯಣ, ರಾಜ್ಯ ಉಪಾಧ್ಯಕ್ಷ ಪಿ.ಡಿ. ಹಳ್ಳಿ ಜನಾರ್ದನ ನಾಯಕ, ಜಿಲ್ಲಾಧ್ಯಕ್ಷ ಯರ್ರಗುಡಿ ಮುದಿ ಮಲ್ಲಯ್ಯ, ಜಿಲ್ಲಾ ಉಪಾಧ್ಯಕ್ಷ ರೂಪನಗುಡಿ ವೆಂಕಟೇಶ್, ಎಸ್ಪಿ ಸರ್ಕಲ್ ಮಲ್ಲಿಕಾರ್ಜುನ, ಭಾಸ್ಕರ್, ತಾಲೂಕು ಅಧ್ಯಕ್ಷ ನಾರಾಯಣಸ್ವಾಮಿ, ರೂಪನಗುಡಿ ದೊಡ್ಡ ಗೋವಿಂದ, ವಿ.ಕೆ. ಬಸಪ್ಪ, ಪಾಲಿಕೆ ಮಾಜಿ ಸದಸ್ಯ ಕೃಷ್ಣಪ್ಪ, ಗುಮ್ಮನೂರು ಜಗನ್, ಕಾಯಿಪಲ್ಲೆ ಬಸವರಾಜ್ ಸೇರಿದಂತೆ ಒಕ್ಕೂಟದ ರಾಜ್ಯ ಹಾಗೂ ಜಿಲ್ಲಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.ಯು.ಶಿವಾನಂದ ಹಾಗೂ ಸಂಗನಕಲ್ಲು ವಿಜಯಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ಇದೇ ವೇಳೆ ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟದ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳಿಗೆ ಆದೇಶ ಪ್ರತಿಗಳನ್ನು ರಾಜ್ಯಾಧ್ಯಕ್ಷ ಜೋಳದರಾಶಿ ತಿಮ್ಮಪ್ಪ ವಿತರಣೆ ಮಾಡಿದರು.