ಸಾರಾಂಶ
ವಿಶ್ವದ ಪ್ರತಿ ಜೀವಿಗೂ ಅಗತ್ಯವಾದ ಆಮ್ಲಜನಕ ನೀಡುವ ಅರಣ್ಯ ಉಳಿಸಿ ಬೆಳೆಸುವ ಕಾರ್ಯ ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಯಲ್ಲಾಪುರ: ಪ್ರತಿ ವರ್ಷ ಸಾಮಾನ್ಯವಾಗಿ ಎಲ್ಲೆಡೆ ಆಚರಿಸುವ ವನಮಹೋತ್ಸವ ಅಥವಾ ವೃಕ್ಷಾರೋಪಣ ಆ ದಿನಕ್ಕೆ ಮಾತ್ರ ಸೀಮಿತಗೊಳ್ಳದೇ ಅಭಿಯಾನದ ರೂಪದಲ್ಲಿ ನಿರಂತರ ನಡೆಯುವಂತಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.
ಅವರು ಮಂಗಳವಾರ ತಾಲೂಕಿನ ಗಡಿಭಾಗದ ಚಿಪಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ''''ವನಮಹೋತ್ಸವದಲ್ಲಿ ಶಾಲಾ ಆವರಣದಲ್ಲಿ ಗಿಡನೆಟ್ಟು ನಂತರ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಮನುಷ್ಯನ ಆರೋಗ್ಯಕರ ಬದುಕಿಗೆ ಪರಿಸರ ಅತ್ಯಗತ್ಯವಾಗಿದ್ದು, ಪ್ರಾಣಿ ಮತ್ತು ಸಸ್ಯ ಸಂಕುಲಗಳ ಸಮತೋಲನದ ಸಮೃದ್ಧತೆ ಇಂದಿನ ಅನಿವಾರ್ಯವಾಗಿದೆ. ಪ್ರತಿಯೊಬ್ಬರೂ ಪ್ರತಿ ವರ್ಷ ಕನಿಷ್ಠ ೩ ಗಿಡನೆಟ್ಟು ಪರಿಪಾಲನೆ ಮಾಡುವ ಮೂಲಕ ಪರಿಸರ ಸಂರಕ್ಷಣೆಯ ಕಾಳಜಿ ತೋರಬೇಕು ಎಂದರು.
ಮುಂಡಗೋಡು ಎಸಿಎಫ್ ರವಿ ಹುಲಕೋಟಿ ಮಾತನಾಡಿ, ವಿಶ್ವದ ಪ್ರತಿ ಜೀವಿಗೂ ಅಗತ್ಯವಾದ ಆಮ್ಲಜನಕ ನೀಡುವ ಅರಣ್ಯ ಉಳಿಸಿ ಬೆಳೆಸುವ ಕಾರ್ಯ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕ್ಷೀಣಗೊಳ್ಳುತ್ತಿರುವ ಅರಣ್ಯ ಬೆಳೆಸಬೇಕಾಗಿರುವ ನಾವು ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸಿ ತ್ಯಾಜ್ಯದಿಂದ ಪರಿಸರ ವಿನಾಶ ತಡೆಗಟ್ಟಬೇಕು ಎಂದರು.ಕಾತೂರು ಆರ್.ಎಫ್.ಓ. ವೀರೇಶ ಮಾತನಾಡಿ, ಮನುಷ್ಯ ಹುಟ್ಟಿನಿಂದ ಸಾವಿನವರೆಗೂ ಅವಲಂಬನೆಯಾಗುವ ಅರಣ್ಯದ ಉಳಿವು ನಮ್ಮ ಪ್ರತಿಜ್ಞೆಯಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ.ಸಿ.ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ಹಿರಿಯರಾದ ಎಂ.ಕೆ. ಹೆಗಡೆ ಮಾತನಾಡಿದರು. ಶ್ರೀರಾಮ ವನವಾಸಿ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಮಂಜುನಾಥ ಶಾಸ್ತ್ರೀ, ಡಿ.ಆರ್.ಎಫ್.ಓ.ಮಂಜುನಾಥ ಆನಿಯವರ್, ಅರಣ್ಯ ಇಲಾಖೆ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮುಖ್ಯಾಧ್ಯಾಪಕಿ ಗೀತಾ ಭಟ್ಟ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಹಶಿಕ್ಷಕರಾದ ವಾಣಿಶ್ರೀ ನಿರ್ವಹಿಸಿದರು. ಅನ್ನಪೂರ್ಣ ಸಿದ್ದಿ ವಂದಿಸಿದರು.