ಸಾರಾಂಶ
ಉತ್ತರ ಕರ್ನಾಟಕದ ಬಹುದೊಡ್ಡ ನೀರಾವರಿ ಯೋಜನೆಯಾದ ಕೃಷ್ಣಾ ಮೇಲ್ದಂಡೆಯ 3ನೇ ಹಂತದ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಭೂ-ಸ್ವಾಧೀನ ಮತ್ತು ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಭೂ-ಪರಿಹಾರ ಹಾಗೂ ನ್ಯಾಯಾಲಯಗಳಲ್ಲಿ ಹೆಚ್ಚುವರಿ ಪರಿಹಾರ ಕೋರಿ ಸಲ್ಲಿಸುತ್ತಿರುವ ಪ್ರಕರಣಗಳ ಕುರಿತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸೆ.೧೦ ರಂದು ಸಂಜೆ ೫ ಗಂಟೆಗೆ ಬೆಂಗಳೂರಿನಲ್ಲಿ ಸಭೆ ಕರೆದಿರುವುದು ಸ್ವಾಗತಾರ್ಹ. ಆದರೆ, ಕೇವಲ ಆಡಳಿತ ಪಕ್ಷದ ಕೆಲ ಸಚಿವರು ಮತ್ತು ಶಾಸಕರನ್ನು ಮಾತ್ರ ಸಭೆಗೆ ಕರೆದಿರುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಅಸಮಧಾನ ಹೊರಹಾಕಿದರು.
ಕನ್ನಡಪ್ರಭ ವಾರ್ತೆ ಬೀಳಗಿ
ಉತ್ತರ ಕರ್ನಾಟಕದ ಬಹುದೊಡ್ಡ ನೀರಾವರಿ ಯೋಜನೆಯಾದ ಕೃಷ್ಣಾ ಮೇಲ್ದಂಡೆಯ 3ನೇ ಹಂತದ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಭೂ-ಸ್ವಾಧೀನ ಮತ್ತು ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಭೂ-ಪರಿಹಾರ ಹಾಗೂ ನ್ಯಾಯಾಲಯಗಳಲ್ಲಿ ಹೆಚ್ಚುವರಿ ಪರಿಹಾರ ಕೋರಿ ಸಲ್ಲಿಸುತ್ತಿರುವ ಪ್ರಕರಣಗಳ ಕುರಿತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸೆ.೧೦ ರಂದು ಸಂಜೆ ೫ ಗಂಟೆಗೆ ಬೆಂಗಳೂರಿನಲ್ಲಿ ಸಭೆ ಕರೆದಿರುವುದು ಸ್ವಾಗತಾರ್ಹ. ಆದರೆ, ಕೇವಲ ಆಡಳಿತ ಪಕ್ಷದ ಕೆಲ ಸಚಿವರು ಮತ್ತು ಶಾಸಕರನ್ನು ಮಾತ್ರ ಸಭೆಗೆ ಕರೆದಿರುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಅಸಮಧಾನ ಹೊರಹಾಕಿದರು.ಮಂಗಳವಾರ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಇದೇ ತಿಂಗಳು ದಿನ ೩ ರಂದು ಉಪಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಡಿಸಿಎಂ ಅವರೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಎಲ್ಲ ಪಕ್ಷದ ಶಾಸಕರುಗಳ ಸಭೆಯನ್ನು ಕರೆಯುತ್ತೇವೆ ಎಂದು ಸಭೆಯಲ್ಲಿ ತಿಳಿಸಿದ್ದರು.
ಆದರೆ, ಈಗ ಧಿಡೀರ್‌ನೇ ಕೇವಲ ಆಡಳಿತ ಪಕ್ಷದ ಸಚಿವರನ್ನು, ಶಾಸಕರನ್ನು ಮಾತ್ರ ಸಭೆಗೆ ಕರೆದಿರುವುದು ಸರ್ಕಾರದ ಸರಿಯಾದ ಕ್ರಮವಲ್ಲವೆಂದು ಸಂತ್ರಸ್ತರು ಮಾತನಾಡುತ್ತಿದ್ದಾರೆ. ಆದರೂ ಸಂತ್ರಸ್ತ ಸ್ನೇಹಿಯಾದ ಭೂಮಿಗೆ ಅವರ ಆಶಯ ಬೆಲೆ ನಿಗದಿ ಪಡಿಸಬೇಕೆಂದ ಅವರು ಈ ನೀರಾವರಿ ಯೋಜನೆಗೆ ಆಡಳಿತ ಮತ್ತು ವಿರೋಧ ಪಕ್ಷಗಳ ಸಲಹೆ ಸೂಚನೆ ಅವಶ್ಯಕವಾಗಿದೆ. ಈ ಭಾಗದ ಎಲ್ಲ ಜನಪ್ರತಿನಿಧಿಗಳು ಸಂತ್ರಸ್ತ ಹೋರಾಟಗಾರರನ್ನು ಸಭೆಗೆ ಆಹ್ವಾನಿಸಿ ನಿಜವಾದ ನೋವು ಕೇಳುವ ಕೆಲಸ ಆಗಬೇಕಿತ್ತು. ಇಂದು ನಡೆಯುವ ಸಭೆಯಲ್ಲಿ ಭೂಮಿ ಕಳೆದುಕೊಂಡಿರುವ ಸಂತ್ರಸ್ತ ರೈತರ ಪರವಾಗಿ ಹೆಚ್ಚಿನ ಭೂ ಪರಿಹಾರದ ಕುರಿತು ನಿರ್ಣಯ ತೆಗೆದುಕೊಳ್ಳಬೇಕು. ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಎಕರೆಗೆ ₹50 ಲಕ್ಷ ಪರಿಹಾರ ನಿಗದಿ ಮಾಡಬೇಕು ಹಾಗೂ ಕಾಲಕಾಲಕ್ಕೆ ಪ್ರತಿ ವರ್ಷ ಶೇ.10 ದರವನ್ನು ರೈತರು ಈಗ ಪೋಷಿಸಿದ ಪರಿಹಾರ ಯೋಜನೆ ಮುಕ್ತಾಯ ಆಗುವವರಿಗೂ ಹೆಚ್ಚಿಸಬೇಕು. ಯೋಜನೆ ವಿಳಂಬವಾದರೇ ಸಂತ್ರಸ್ತರಿಗೆ ಮತ್ತೆ ಅನ್ಯಾಯ ಆಗಬಾರದೆಂಬ ನಿರ್ಣಯ ಕೈಗೊಳ್ಳಬೇಕು. ಸರ್ಕಾರ ಸಂತ್ರಸ್ತರಿಗೆ ನ್ಯಾಯ ಒದಗಿಸುವ ನಿರ್ಣಯ ತೆಗೆದುಕೊಂಡು ಬರುವ 3 ವರ್ಷದ ಅವಧಿಯೊಳಗೆ ಪೂರ್ಣಗೊಳಿಸಿ ಸಂತ್ರಸ್ತ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.