ಸಾರಾಂಶ
ಶಿರಹಟ್ಟಿ: ೧೨ನೇ ಶತಮಾನದ ಬಸವಾದಿ ಶರಣರು ಬರೆದ ವಚನಗಳು ಪ್ರತಿಯೊಬ್ಬರ ಬದುಕಿಗೆ ಮೌಲ್ಯಯುತ ಕೊಡುಗೆಗಳು. ವಚನಗಳಲ್ಲಿಯ ಆದರ್ಶ ತತ್ವಗಳನ್ನು ಅರಿತುಕೊಳ್ಳಬೇಕು. ನಡೆ ನುಡಿ ಒಂದಾದ ಅವರ ಎಲ್ಲ ವಚನಗಳು ನಮ್ಮೆಲ್ಲರ ಅಂತರಂಗ ಬಹಿರಂಗ ಶುದ್ಧಿಗೆ ಬೇಕಾದ ಎಲ್ಲ ತತ್ವ ಚಿಂತನೆ ನೀಡಿವೆ ಎಂದು ನಿವೃತ್ತ ಉಪನಿರ್ದೇಶಕ ಐ.ಬಿ. ಬೆನಕೋಪ್ಪ ಹೇಳಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆಯ ಸಹಯೋಗದಲ್ಲಿ ವಿದ್ಯಾನಗರದ ಕೆ.ಎ. ಬಳಿಗೇರವರ ಮಹಾ ಮನೆಯಲ್ಲಿ ಶ್ರಾವಣ ಮಾಸದ ನಿಮಿತ್ತ ನಡೆದ ಶ್ರಾವಣ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಉದ್ಘಾಟಿಸಿ ಮಾತನಾಡಿದರು.ಕಾಯಕ ತತ್ವವನ್ನೇ ಇಡೀ ಜಗತ್ತಿಗೆ ಸಾರಿದ ಶರಣರು ಮೇಲು ಕೀಳು ಎನ್ನದೆ ಸರ್ವ ಸಮಾನತೆ ಸಾರಿದ್ದಾರೆ, ಅವರೆಲ್ಲ ವಿಚಾರಧಾರೆ ಅನ್ವಯ ಮಾಡಿಕೊಂಡಾಗ ಮಾತ್ರ ಅದು ಸಮಾಜದಲ್ಲಿ ಬಹುದೊಡ್ಡ ಬದಲಾವಣೆ ತರಬಲ್ಲದು ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಎಫ್.ಎಂ. ಡಬಾಲಿ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಸುಧಾ ಹುಚ್ಚಣ್ಣವರ ಮಾತನಾಡಿ, ಅರಿವು ಆಚಾರ ಒಂದಾದ ಶರಣರ ವಚನಗಳು ಪದ್ಯ ಹಾಗೂ ಗದ್ಯ ರೂಪದಲ್ಲಿವೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಅನುಭವ ತಂದು ಕೊಡುವ ಹಾಗೂ ಅನುಭಾವ ಉಂಟುಮಾಡುವ ವೈಚಾರಿಕ ನೆಲೆಗಟ್ಟಿನಲ್ಲಿ ಬಹುತೇಕ ವಚನಗಳು ಬಿಂಬಿತವಾಗಿವೆ.ಯಾವುದೇ ಜಾತಿ ಮತ ಪಂಥ ಲಿಂಗ ಭೇದವಿಲ್ಲದೆ ನಾವೆಲ್ಲರೂ ಒಂದು ಎನ್ನುವ ಮಾನವತೆಯ ಸಂದೇಶ ಸಾರಿವೆ. ಎಲ್ಲ ಶರಣರು ನೀಡಿದ ವಚನಗಳು ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಿವೆ. ಮನಸ್ಸು ವಿಕಾರಗಳಿಂದ ಹೊರಬಂದು ವಿಕಾಸಗೊಳ್ಳುವುದಕ್ಕೆ ಶರಣರ ವಚನಗಳು ಸೋಪಾನವಾಗಿ ಕಾರ್ಯ ನಿರ್ವಹಿಸುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿರಹಟ್ಟಿ ಪೊಲೀಸ್ ಠಾಣೆಯ ಸಿಪಿಐ ನಾಗರಾಜ್ ಮಾಡಳ್ಳಿ ಮಾತನಾಡಿ, ಸರಳ ಜೀವನ ಉನ್ನತ ವಿಚಾರ ಒಳಗೊಂಡ ಶರಣರ ಬದುಕು ಒಂದು ಮಾದರಿಯಾಗಿದೆ. ಸದೃಢ ಸಮಾಜ ನಿರ್ಮಾಣದಲ್ಲಿ ಇಂತಹ ಮೌಲ್ಯಯುತವಾದ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿರಹಟ್ಟಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿ, ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಇಂತಹ ಶ್ರಾವಣ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಎಲ್ಲರ ಮನೆ ಮನಗಳಿಗೆ ಶರಣರ ಅಂತರಂಗದ ನುಡಿಗಳು ತಲುಪುವಂತಾಗಬೇಕು. ವ್ಯಕ್ತಿ ಸಮಾಜದ ಅಭಿವೃದ್ಧಿಗೆ ಬೇಕಾದ ಎಲ್ಲ ಮೌಲ್ಯ ವಚನ ಸಾಹಿತ್ಯ ನೀಡಿದೆ, ಅವುಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾರ್ಥಕ ಬದುಕಿನ ಕ್ಷಣ ಅನುಭವಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಶಿಕ್ಷಕ ಸುರೇಶ್ ಕಟ್ಟಿಮನಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಸಿಸಿಎನ್ ವಿದ್ಯಾ ಪ್ರಸಾರ ಸಂಸ್ಥೆಯ ಸಂಸ್ಥಾಪಕ ಚಂದ್ರಣ್ಣ ನೂರಶೆಟ್ಟರ್, ಕದಳಿ ವೇದಿಕೆ ತಾಲೂಕು ಅಧ್ಯಕ್ಷ ನಂದಾ ಕಪ್ಪತನವರ್, ರೇಣುಕಾ ಜಗಂಡಬಾವಿ ನಿರೂಪಿಸಿದರು. ದೈಹಿಕ ಶಿಕ್ಷಣ ಉಪನ್ಯಾಸಕ ಎಂ.ಕೆ. ಲಮಾಣಿ ವಂದಿಸಿದರು. ಎಸ್.ಡಿ. ಸರಕವಾಸ್, ಸಿ.ಪಿ. ಕಾಳಗಿ, ಸಿದ್ದು ಹಲಸುರ, ಬಸಣ್ಣ ಬೋರಶೆಟ್ಟರ್, ವೀರೇಶ್ ಬಾದಾಮಿ, ಅಶ್ವಿನಿ ಬಾದಾಮಿ, ರವಿ ಬೇಂದ್ರೆ, ಹಳ್ಳೆಮ್ಮನವರ, ಗೀತಾ ಹಲಸುರ್ ಇದ್ದರು. ಕಾರ್ಯಕ್ರಮದಲ್ಲಿ ವಚನ ಗಾಯನವನ್ನು ಕುಮಾರ ಚಿನ್ಮಯ್ ಬದಾಮಿ, ನೀಲಮ್ಮ ನಿಟ್ಟಾಲಿ, ಶಾಂತಾ ಪಾಟೀಲ್ ನೆರವೇರಿಸಿದರು.