ತಮಿಳುನಾಡಿಗೆ ನೀರು ಹರಿಯಬಿಟ್ಟು ಅನ್ನದಾತರಿಗೆ ಖಾಲಿ ಚೊಂಬು

| Published : Apr 22 2024, 02:02 AM IST

ಸಾರಾಂಶ

ಕನ್ನಡಿಗರ ಬದುಕಿಗೆ ಕೊಳ್ಳಿ ಇಟ್ಟು ಈಗ ನಾವೆಲ್ಲಾ ನಿಮ್ಮ ಪರ ಇದ್ದೇವೆ ಎಂದು ಗೋಸುಂಬೆತನ ಪ್ರದರ್ಶನ ಮಾಡುತ್ತಿರುವ ಕಾಂಗ್ರೆಸ್ ಪಕ್ಷದವರೇ ಎಲ್ಲ ವರ್ಗದ ಜನರಿಗೆ ಚೊಂಬು ಕೊಟ್ಟಿದ್ದಾರೆ. ಅದನ್ನು ಮರೆಮಾಚಲು ಪತ್ರಿಕೆಗಳಲ್ಲಿ ಲಕ್ಷಾಂತರ ರು. ಖರ್ಚು ಮಾಡಿ ಜಾಹೀರಾತು ನೀಡಿ ಪುಕ್ಕಟ್ಟೆ ಪ್ರಚಾರ ಪಡೆಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರೈತರು, ಜನಸಾಮಾನ್ಯರ ಬದುಕಿಗೆ ಬೆಂಕಿ ಇಟ್ಟು ತಮಿಳುನಾಡಿಗೆ ಕಾವೇರಿ ನೀರು ಹರಿಯಬಿಟ್ಟು ಅನ್ನದಾತರ ಕೈಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಖಾಲಿ ಚೊಂಬು ಕೊಟ್ಟಿದೆ ಎಂದು ಬಿಜೆಪಿ ಕಾರ್ಯಕರ್ತರು ಕಿವಿಗೆ ಹೂವು ಮುಡಿದು ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

ನಗರದ ಆರ್.ಪಿ. ರಸ್ತೆಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಕಾಂಗ್ರೆಸ್ ವಿರುದ್ಧ ಚೊಂಬು ಪ್ರತಿಭಟನೆ ನಡೆಸಿ, ಮಹಾ ಘಟಬಂಧನ್ ಇಂಡಿಯಾ ಒಕ್ಕೂಟದ ಹಿತಕ್ಕಾಗಿ ಜಿಲ್ಲೆಯ ರೈತರಿಗೆ ಮೋಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್ ಮಾತನಾಡಿ, ಕನ್ನಡಿಗರ ಬದುಕಿಗೆ ಕೊಳ್ಳಿ ಇಟ್ಟು ಈಗ ನಾವೆಲ್ಲಾ ನಿಮ್ಮ ಪರ ಇದ್ದೇವೆ ಎಂದು ಗೋಸುಂಬೆತನ ಪ್ರದರ್ಶನ ಮಾಡುತ್ತಿರುವ ಕಾಂಗ್ರೆಸ್ ಪಕ್ಷದವರೇ ಎಲ್ಲ ವರ್ಗದ ಜನರಿಗೆ ಚೊಂಬು ಕೊಟ್ಟಿದ್ದಾರೆ. ಅದನ್ನು ಮರೆಮಾಚಲು ಪತ್ರಿಕೆಗಳಲ್ಲಿ ಲಕ್ಷಾಂತರ ರು. ಖರ್ಚು ಮಾಡಿ ಜಾಹೀರಾತು ನೀಡಿ ಪುಕ್ಕಟ್ಟೆ ಪ್ರಚಾರ ಪಡೆಯುತ್ತಿದ್ದಾರೆ ಎಂದು ಕಿಡಿಕಾರಿದರು.

ದಲಿತರಿಗೆ ಮೀಸಲಾಗಿದ್ದ 11 ಸಾವಿರ ಕೋಟಿಗೂ ಹೆಚ್ಚು ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗಾಗಿ ವಾಪಸ್ಸು ಪಡೆದು ಎಸ್ಸಿ, ಎಸ್ಟಿ ವರ್ಗದ ಜನರಿಗೆ ಚೊಂಬು ಕೊಟ್ಟುವರ್‍ಯಾರು ಎಂದು ಪ್ರಶ್ನಿಸಿದರು.

ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ 4 ಸಾವಿರ ರು. ಅನುದಾನ ನೀಡುತ್ತಿದ್ದುದ್ದನ್ನು ತಡೆಹಿಡಿಯಲಾಗಿದೆ. ಟ್ರಾನ್ಸ್‌ಫಾರ್‍ಮರ್ ಅಳವಡಿಕೆಗೆ ಲಕ್ಷಾಂತರ ರು. ರೈತರಿಗೆ ಹೆಚ್ಚುವರಿಯಾಗಿ ವಿಧಿಸಿ ರೈತರ ಕಿವಿಗಳಿಗೆ ಹೂ ಮುಡಿಸಿದವರು ಯಾರು ಎಂದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ವಿರುದ್ಧ ಕಿಡಿಕಾರಿದರು.

ಪ್ರತಿಭಾವಂತ ಬಡ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾಸಿರಿ ಯೋಜನೆ ಕೈ ಬಿಟ್ಟು ವಿದ್ಯಾರ್ಥಿಗಳ ಕೈಗೂ ಚೊಂಬು ಕೊಟ್ಟಿದ್ದಾರೆ. ವಿದ್ಯುತ್ ದರ ಹೆಚ್ಚಳ ಮಾಡಿ ಲಕ್ಷಾಂತರ ಕಾರ್ಖಾನೆಗಳು ಮುಚ್ಚಿಹೋಗಿವೆ. ರಾಜ್ಯದಿಂದ ಹೊರ ಹೋಗುತ್ತಿವೆ ಇದಕ್ಕೆ ರಾಜ್ಯಸರ್ಕಾರದ ಕಾರ್ಖಾನೆ ವಿರೋಧಿ ಧೋರಣೆಯೇ ಕಾರಣ ಎಂದು ದೂರಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ನಾಗಾನಂದ, ವಿವೇಕ್, ಬೇಕ್ರಿ ಮಂಜು, ಹೊಸಹಳ್ಳಿ ಶಿವು, ಮಹಂತಪ್ಪ, ಹರ್ಷ, ಚಂದ್ರು ಸೇರಿ ಹಲವರು ಭಾಗವಹಿಸಿದ್ದರು.