ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು

ಒಳ ಪಂಗಡ ಕೈ ಬಿಟ್ಟು ಸಂಘಟಿತರಾದಲ್ಲಿ ನೇಕಾರ ಸಮುದಾಯದ ಅಭಿವೃದ್ಧಿ ಸಾಧ್ಯವಿದೆ ಎಂದು ಚಲನಚಿತ್ರ ಗೀತೆ ರಚನಾಕಾರ ಡಾ.ವಿ.ನಾಗೇಂದ್ರ ಪ್ರಸಾದ್ ಹೇಳಿದರು.

ತಾಲೂಕಿನ ಕೊಂಡ್ಲಹಳ್ಳಿ ಸಾಲೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಹಿಂದುಳಿದ ವರ್ಗಗಳಲ್ಲಿ ಅತಿ ಹಿಂದುಳಿದ ಜನಾಂಗವಾಗಿರುವ ನೇಕಾರ ಸಮುದಾಯ ಒಳ ಪಂಗಡದ ಹೆಸರಲ್ಲಿ ಹರಿದು ಹಂಚಿಹೋಗಿದೆ. ಒಳಪಂಗಡ ಬಿಟ್ಟು ಒಟ್ಟಾಗಬೇಕು. ಸಮುದಾಯ ಜಾಗೃತರಾಗಬೇಕು. ಬಿನ್ನಾಭಿಪ್ರಾಯಗಳು ದೂರ ಸರಿಸಿ ಎಲ್ಲಾ ಪಂಗಡಗಳು ಒಂದಾಗಬೇಕು. ಇದರಿಂದ ಸಮುದಾಯದ ಶಕ್ತಿ ಇಮ್ಮಡಿಯಾಗಲಿದೆ ಎಂದರು.

ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ನೇಕಾರ ಸಮುದಾಯದ ಮಕ್ಕಳನ್ನು ವಿದ್ಯಾವಂತರನ್ನಾಗಿಸಬೇಕು. ಆಡಳಿತಾತ್ಮಕ ಹುದ್ದೆಗಳನ್ನು ಪಡೆಯಬೇಕು. ಇದರಿಂದ ಸಮುದಾಯ ಸಮಾಜದಲ್ಲಿ ಸಬಲತೆ ಹೊಂದಲು ಸಾಧ್ಯವಾಗುತ್ತದೆ ಎಂದರು.


ನೇಕಾರ ಒಕ್ಕೂಟದ ತಾಲೂಕು ಅಧ್ಯಕ್ಷ ಕೆ.ಸಿ.ಮಂಜುನಾಥ ಮಾತನಾಡಿ, ನೇಕಾರ ಸಮುದಾಯ ಸಾಮಾಜಿಕವಾಗಿ ಅಭಿವೃದ್ಧಿಯಾಗಲು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಅಲ್ಲದೆ ದೇವರ ದಾಸಿಮಯ್ಯ ಜನ್ಮಸ್ಥಳದ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು. ಇದಕ್ಕೆ ಸಮುದಾಯದ ಜನಪ್ರತಿನಿಧಿಗಳು ಒತ್ತಡ ತರಬೇಕು ಎಂದರು.

ಈ ಸಂದರ್ಭದಲ್ಲಿ ದಾವಣಗೆಗೆ ಜಿಲ್ಲಾ ನೇಕಾರ ವೇದಿಕೆ ಉಪಾಧ್ಯಕ್ಷ ವಿ.ಪಿ.ಲಕ್ಷ್ಮೀ ನಾರಾಯಣ, ಕಿರುತೆರೆ ಕಲಾವಿದೆ ಸ್ವಪ್ನ ದೀಕ್ಷಿತ್, ನಿವೃತ್ತ ತಹಸೀಲ್ದಾರ್ ಗರುಮೂರ್ತಿ, ಪಿಎಸ್ಐ ರವಿಕುಮಾರ್, ಅಣ್ಣಪ್ಪ, ವಿ.ಪಿ.ರಾಜು ಸೇರಿದಂತೆ ಹಲವರು ಇದ್ದರು.

ಇದೇ ವೇಳೆ ದೇವರ ದಾಸಿಮಯ್ಯ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಭರ್ಜರಿ ಮೆರವಣಿಗೆ ನಡೆಯಿತು. ಡಿಜೆ ಸಂಗೀತಕ್ಕೆ ಯುವಕರು ಕುಣಿದು ಕುಪ್ಪಳಿಸಿದರು.