ರೂಪಕಗಳ ಮೂಲಕ ಮಹಾಭಾರತದ ಅನೇಕ ಪ್ರಸಂಗಗಳನ್ನು ತನ್ನ ಕಾವ್ಯಕುಸರಿಯಿಂದ ಕಲಾತ್ಮಕವಾಗಿ ಕುಮಾರವ್ಯಾಸ ಕಟ್ಟಿಕೊಟ್ಟಿದ್ದಾನೆ.

ಗದಗ: ಕುಮಾರವ್ಯಾಸನು ಹಾಡಿದನೆಂದರೆ ಕಲಿಯುವ ದ್ವಾಪರವಾಗುವುದು ಎಂಬ ಕುವೆಂಪು ಅವರ ಸಾಲುಗಳು ಗದುಗಿನ ಭಾರತ ಕಾವ್ಯದ ಹಿರಿಮೆಯನ್ನು ಸಾರುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ತಿಳಿಸಿದರು.

ನಗರದ ತೋಂಟದ ಸಿದ್ಧಲಿಂಗ ಶ್ರೀಗಳ ಕನ್ನಡ ಭವನ, ಕಸಾಪ ಕಾರ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌, ಕರ್ನಾಟಕ ಗಮಕ ಕಲಾ ಪರಿಷತ್‌ ಜಿಲ್ಲಾ ಘಟಕ, ಕುಮಾರವ್ಯಾಸ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜರುಗಿದ ಕುಮಾರವ್ಯಾಸ ಭಾರತದ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರೂಪಕಗಳ ಮೂಲಕ ಮಹಾಭಾರತದ ಅನೇಕ ಪ್ರಸಂಗಗಳನ್ನು ತನ್ನ ಕಾವ್ಯಕುಸರಿಯಿಂದ ಕಲಾತ್ಮಕವಾಗಿ ಕುಮಾರವ್ಯಾಸ ಕಟ್ಟಿಕೊಟ್ಟಿದ್ದಾನೆ. ಇಂತಹ ಕಾವ್ಯವನ್ನು ಹಾಡುವ ಮತ್ತು ವ್ಯಾಖ್ಯಾನಿಸುವ ಮೂಲಕ ಸಹೃದಯರಲ್ಲಿ ಅನಿರ್ವಚನೀಯ ಆನಂದವನ್ನು ಗಮಕಿಗಳು ಮಾಡುತ್ತಾ ಬಂದಿದ್ದಾರೆ. ಗಮಕ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯ ಸಮುದಾಯದಿಂದ ನಡೆಯಬೇಕೆಂದರು.

ಕುಮಾರವ್ಯಾಸ ಪರಿಸರದ ಈ ನೆಲದಲ್ಲಿ ಗಮಕಿಗಳನ್ನು ಹೆಚ್ಚು ರೂಪಿಸುವ ಹಿನ್ನೆಲೆ ಇಲ್ಲಿಯ ಸಂಗೀತ ಪಾಠಶಾಲೆಗಳು ಪ್ರಯತ್ನಿಸಬೇಕು. ಈ ದಿಸೆಯಲ್ಲಿ ಕುಮಾರವ್ಯಾಸ ಪ್ರತಿಷ್ಠಾನ ಪ್ರಮುಖ ಪಾತ್ರ ವಹಿಸಬೇಕೆಂದರು.

ಗಮಕ ಕಲಾ ಪರಿಷತ್‌ ಅಧ್ಯಕ್ಷ ಡಾ. ದತ್ತಪ್ರಸನ್ನ ಪಾಟೀಲ ಮಾತನಾಡಿ, ಕನ್ನಡದ ಶ್ರೇಷ್ಠ ಕವಿ ಕುಮಾರವ್ಯಾಸನನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಹಿನ್ನೆಲೆ ಪ್ರತಿಷ್ಠಾನ ಹಾಗೂ ಪರಿಷತ್ತಿನ ವತಿಯಿಂದ ಯೋಜನೆಯನ್ನು ರೂಪಿಸಲಾಗಿದೆ. ಹಳಗನ್ನಡ ಕಾವ್ಯದ ಬಗೆಗೆ ಆಸಕ್ತಿ ಮೂಡಿಸಲು ಇದು ಸಹಾಯಕವಾಗಲಿದೆ ಎಂದರು.ಈ ವೇಳೆ ಚಂದ್ರಶೇಖರ ವಸ್ತ್ರದ, ಅಂದಾನಪ್ಪ ವಿಭೂತಿ, ವಿ.ಎಸ್. ದಲಾಲಿ, ಎಸ್.ಪಿ. ಹೊಂಬಳ, ರವೀಂದ್ರ ಜೋಶಿ, ಈಶ್ವರಪ್ಪ ಕುಬುಸದ, ರಾಜೇಂದ್ರ ಕುಲಕರ್ಣಿ, ಜೆ.ಎ. ಪಾಟೀಲ, ಯಲ್ಲಪ್ಪ ಹಂದ್ರಾಳ, ಬೂದೇಶ ಮಜ್ಜಿಗುಡ್ಡ, ಮಲ್ಲಿಕಾರ್ಜುನ ಬಾರಕೇರ, ರತ್ನಕ್ಕ ಪಾಟೀಲ, ಶಾಂತಾಬಾಯಿ ಕುಲಕರ್ಣಿ, ಎನ್.ವಿ. ಪುರಾಣಿಕ, ಪ್ರಶಾಂತ ಪಾಟೀಲ, ಷಡಕ್ಷರಿ ಮೆಣಸಿನಕಾಯಿ, ಸಿ.ಎಂ. ಮಾರನಬಸರಿ, ದಯಾನಂದ ಮುಂಡರಗಿ, ದತ್ತಣ್ಣ ಜೋಶಿ, ಎಂ.ಎಫ್. ಡೋಣಿ, ಗುರುಪಾದ ಕಟ್ಟಿಮನಿ, ಅರವಿಂದ ಹುಯಿಲಗೋಳಕರ, ಚೆನ್ನಾರೆಡ್ಡಿ ಗೂಳರಡ್ಡಿ, ಗಜಾನನ ವೆರ್ಣೇಕರ, ಎಸ್.ಕೆ. ತೆಂಬದಮನಿ, ಎಸ್.ಎಸ್. ಹುನಗುಂದ, ಅಜಯ ಬಳಗಾನೂರ, ಶಶಿಕಾಂತ ಕೊರ್ಲಹಳ್ಳಿ, ಹೇಮಂತ ಕುಲಕರ್ಣಿ ಮೊದಲಾದವರುರಿದ್ದರು. ರಾಹುಲ ಗಿಡ್ನಂದಿ ನಿರೂಪಿಸಿದರು. ಡಿ.ಎಸ್. ಬಾಪುರಿ ಸ್ವಾಗತಿಸಿದರು. ಸುಮನ ಪಾಟೀಲ ವಂದಿಸಿದರು.