ಸಂತ್ರಸ್ತರ ಕಣ್ಣೀರು ಒರಿಸುವ ಕೆಲಸವಾಗಲಿ

| Published : Dec 16 2024, 12:46 AM IST

ಸಾರಾಂಶ

ಸಂತ್ರಸ್ತರ ಬೇಡಿಕೆಗಳು ಇಂದಿನ ದಿನಮಾನದಲ್ಲಿ ನ್ಯಾಯಬದ್ಧವಾಗಿವೆ. ಅವುಗಳನ್ನು ಶೀಘ್ರವಾಗಿ ಕಾರ್ಯರೂಪಕ್ಕೆ ತರಲು ಪಕ್ಷಾತೀತವಾಗಿ ಎಲ್ಲಾ ನಾಯಕರು ಮುಖ್ಯಮಂತ್ರಿಗಳ ಮನವೊಲಿಸಿ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಉತ್ತರ ಕರ್ನಾಟಕದ ರೈತರಿಗೆ ಬದುಕು ಬೆಳಗಿರುವ ಜೀವನದಿಯಾದ ಕೃಷ್ಣೆ ಒಡಲೊಳಗಿರುವ ಸಂತ್ರಸ್ತರ ಕಣ್ಣೀರು ಒರಿಸುವ ಕೆಲಸವನ್ನು ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವ ಹೋರಾಟಗಾರರ ಬೇಡಿಕೆಗಳನ್ನು ಸರ್ಕಾರಗಳು ಶೀಘ್ರವಾಗಿ ಮಾಡಬೇಕು ಎಂದು ಹಿರಿಯ ಸಾಹಿತಿ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ತಾತಾಸಾಹೇಬ ಬಾಂಗಿ ಹೇಳಿದರು.

ಬಾಗಲಕೋಟೆ ಜಿಲ್ಲಾ ಆಡಳಿತ ಭವನದ ಎದುರು ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವಂತೆ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡುತ್ತಿರುವ ಕೃಷ್ಣಾ ಮೇಲ್ದಂಡೆ ಬಾಧಿತ ಸಂತ್ರಸ್ತರ ಹೋರಾಟ ಸಮಿತಿಯವರು ನಡೆಸುತ್ತಿರುವ 14ನೇ ದಿನದ ಹೋರಾಟದಲ್ಲಿ ಪಾಲ್ಗೊಂಡು ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ಜಾನಪದ ಪರಿಷತ್ತು ಅವರ ಜೊತೆಗೂಡಿ ಕೃಷ್ಣಾ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಅದೃಶ್ಯಪ್ಪ ದೇಸಾಯಿ ಅವರಿಗೆ ಬೆಂಬಲ ಪತ್ರ ನೀಡಿ ಮಾತನಾಡಿ, ಸಂತ್ರಸ್ತರ ಬೇಡಿಕೆಗಳು ಇಂದಿನ ದಿನಮಾನದಲ್ಲಿ ನ್ಯಾಯಬದ್ಧವಾಗಿವೆ. ಅವುಗಳನ್ನು ಶೀಘ್ರವಾಗಿ ಕಾರ್ಯರೂಪಕ್ಕೆ ತರಲು ಪಕ್ಷಾತೀತವಾಗಿ ಎಲ್ಲಾ ನಾಯಕರು ಮುಖ್ಯಮಂತ್ರಿಗಳ ಮನವೊಲಿಸಿ, ರೈತರಿಗೆ ಮತ್ತು ಸಂತ್ರಸ್ತರ ಬೇಡಿಕೆ ಸಕಾರಗೊಳಿಸಬೇಕೆಂದು ಹೇಳಿದರು.

ಹೋರಾಟದಲ್ಲಿ ಪಾಲ್ಗೊಂಡಿದ್ದ ಬಾಗಲಕೋಟೆ ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, 6 ದಶಕಗಳಿಂದ ನೆನಗುದಿಗೆ ಬಿದ್ದ ಕೃಷ್ಣಾ ಸಂತ್ರಸ್ತರ ಯೋಜನೆಯನ್ನು ಸರ್ಕಾರವು ತಕ್ಷಣವೇ ಪೂರ್ಣಗೊಳಿಸುವ ಇಚ್ಛಾಶಕ್ತಿ ತೋರಿಸಬೇಕು ಎಂದರು. ಹೋರಾಟ ಸಮಿತಿ ಅಧ್ಯಕ್ಷ ಅದೃಶ್ಯಪ್ಪ ದೇಸಾಯಿ ಹಾಗೂ ಎಚ್.ಎಸ್.ಕೊರಡ್ಡಿ ಬೆಂಬಲ ಪತ್ರ ಸ್ವೀಕರಿಸಿದರು. ಹಿರಿಯ ಸಹಕಾರಿ ಧುರಿಣ ಅಪ್ಪುಗೌಡ ಪಾಟೀಲ ಮನಗೂಳಿ, ವಿಜಯಪೂರ ಜಿ.ಪಂ ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ಹಿರಿಯರಾದ ಸಿದ್ದಣ್ಣ ಮಲ್ಲಪ್ಪ ದೇಸಾಯಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಚಂದ್ರಶೇಖರ ಕಾಳನ್ನವರ, ಪ್ರೊ.ಸಂಗಮೇಶ ಬ್ಯಾಳಿ, ಬಿ.ವಿ.ಕುಲಕರ್ಣಿ, ವಿ.ವಿ.ಗೋವಿಂದಪ್ಪನವರ, ಕಜಾಪ ಕೋಶಾಧ್ಯಕ್ಷ ಆರ್.ಸಿ.ಚಿತ್ತವಾಡಗಿ, ಸಾಹಿತಿಗಳಾದ ಕಿರಣ ಬಾಳಗೋಳ, ಗುರುನಾಥ ಸುತಾರ, ಮಲ್ಲಿಕಾರ್ಜುನ ಇಂಡಿ, ಗೀತಾ ದಾನಶೆಟ್ಟಿ, ವಿಜಯಶ್ರೀ ಮುರನಾಳ, ಅಮರೇಶ ಕೊಳ್ಳಿ ಮತ್ತು ಜಿಲ್ಲೆಯ ಹಿರಿಯ ಕಲಾವಿದರಾದ ರಂಗಪ್ಪ ಹಲಕುರ್ಕಿ, ಈರಪ್ಪ ಮಂಟೂರು, ಪವಿತ್ರಾ ಜಕ್ಕಪ್ಪನವರ ಮತ್ತು ಜಿಲ್ಲೆಯ ಸಾಹಿತಿಗಳು, ಕಲಾವಿದರು ಹಾಗೂ ಕಸಾಪ, ಕಜಾಪ ಪದಾಧಿಕಾರಿಗಳು ಈ ದಿನದ ಹೋರಾಟದಲ್ಲಿದ್ದರು.