ಸಾರಾಂಶ
ದೇವಸ್ಥಾನಗಳ ಅರ್ಚಕರು ತಪಸ್ವಿಗಳಾಗಬೇಕು. ಪೂಜಾ ಕಾರ್ಯಗಳು, ವಿಧಿ ವಿಧಾನಗಳು ವ್ಯವಸ್ಥಿತವಾಗಿ ನಡೆಯಬೇಕು.
ಹಳಿಯಾಳ: ಮಂದಿರಗಳು ಹಿಂದೂಗಳ ಆಧ್ಯಾತ್ಮಿಕ ಪ್ರಗತಿ ಕೇಂದ್ರಗಳಾಗಿದ್ದು, ಅವುಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಮಧುಸೂದನ ಹಂಪಿಹೋಳಿ ತಿಳಿಸಿದರು.
ಪಟ್ಟಣದ ಶ್ರೀರಾಮ ದೇವಸ್ಥಾನದ ಸಭಾಂಗಣದಲ್ಲಿ ಕರ್ನಾಟಕ ಮಂದಿರ ಮಹಾಸಂಘ ಹಾಗೂ ಹಿಂದೂ ಜನಜಾಗೃತಿ ಸಮಿತಿ ಜಂಟಿ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಮಂದಿರ ಅಧಿವೇಶನಕ್ಕೆ ಚಾಲನೆ ನೀಡಿ ಮಾತನಾಡಿದರು. ದೇವಸ್ಥಾನಗಳು ಧಾರ್ಮಿಕ ಶಿಕ್ಷಣವನ್ನು ಕೊಡುವ ಕೇಂದ್ರಗಳಾಗಬೇಕು. ಇಂದಿನ ಪೀಳಿಗೆಯವರಿಗೆ ದೇವಸ್ಥಾನದ ಮಹತ್ವದ ಅರಿವಿಲ್ಲವಾಗಿದೆ. ದೇವಸ್ಥಾನಗಳಿಂದ ದೊರೆಯುವ ಚೈತನ್ಯದ ಲಾಭವನ್ನು ಪಡೆದುಕೊಳ್ಳುತ್ತಿಲ್ಲ. ಆದ್ದರಿಂದ ದೇವಸ್ಥಾನಗಳ ಅರ್ಚಕರು ತಪಸ್ವಿಗಳಾಗಬೇಕು. ಪೂಜಾ ಕಾರ್ಯಗಳು, ವಿಧಿ ವಿಧಾನಗಳು ವ್ಯವಸ್ಥಿತವಾಗಿ ನಡೆಯಬೇಕು ಎಂದರು. ತಾಲೂಕು ದೇವಸ್ಥಾನಗಳ ಅಧ್ಯಕ್ಷ ಮಂಗೇಶ ದೇಶಪಾಂಡೆ ಮಾತನಾಡಿ, ಮೊಘಲರ ಆಕ್ರಮಣದಿಂದ ದೇಶದಲ್ಲಿನ ದೇವಸ್ಥಾನಗಳ ಮೇಲೆ ಆದ ಹಾನಿಗಳ ಬಗ್ಗೆ ಮಾತನಾಡಿದರು.ತಾಲೂಕು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಶ್ರೀಪತಿ ಭಟ್ ಮಾತನಾಡಿ, ಹಿಂದೂ ಧರ್ಮಿಯರ ದೇವಸ್ಥಾನಗಳ ಮೇಲೆ ವಿವಿಧ ರೀತಿಯಲ್ಲಿ ಆಕ್ರಮಣ ನಡೆಯುತ್ತಿದ್ದು, ನಾವೆಲ್ಲರೂ ಒಗ್ಗಟ್ಟಾಗಿ ಆಕ್ರಮಣ ತಡೆಯಲು ಶ್ರಮಿಸಬೇಕೆಂದರು. ಮಹಾದೇವ ಸಾಗರೇಕರ ಮಾತನಾಡಿ, ದೇವಸ್ಥಾನಗಳು ಭಕ್ತರ ಮತ್ತು ಭಗವಂತನ ಸಂಪರ್ಕ ಮಾಡುವ ಸೇತುವೆಯಾಗಿ ಕಾರ್ಯನಿವಹಿಸುತ್ತಿವೆ ಎಂದರು.ಗುರುಪ್ರಸಾದ ಗೌಡ ಮಾತನಾಡಿ, ಕರ್ನಾಟಕ ಮಂದಿರ ಮಹಾಸಂಘದ ಉದ್ದೇಶ ಹಾಗೂ ಸಂಘ ನಡೆದುಬಂದ ದಾರಿಯ ಬಗ್ಗೆ ಮಾತನಾಡಿದರು.ಧಾರವಾಡ ಹೈಕೋರ್ಟ್ ವಕೀಲ ನಾರಾಯಣ ಯಾಜಿ ಮಾತನಾಡಿ, ಕಾನೂನಿನ ನೆರವಿನಿಂದ ದೇವಸ್ಥಾನಗಳ ರಕ್ಷಣೆಯ ಹೋರಾಟ ಮಾಡುವುದರ ಬಗ್ಗೆ ಮಾಹಿತಿಯನ್ನು ನೀಡಿದರು.ಅಧಿವೇಶನದಲ್ಲಿ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಅಳವಡಿಕೆಯ ಮಹತ್ವ, ದೇವಸ್ಥಾನದಲ್ಲಿ ಅರ್ಚಕರ, ವಿಶ್ವಸ್ಥರ ನಡುವೆ ಸಮನ್ವಯ, ದೇವಸ್ಥಾನಗಳಲ್ಲಿ ಸನಾತನ ಧರ್ಮ ಬೋರ್ಡ್ ಸ್ಥಾಪಿಸುವ ವಿಷಯದ ಬಗ್ಗೆ ಹಾಗೂ ಇತರ ಮಹತ್ವದ ವಿಷಯಗಳ ಮೇಲೆ ವಿವಿಧ ವಕ್ತಾರರು ವಿಷಯ ಮಂಡನೆ ಮಾಡಿದರು. ಪ್ರಮುಖರಾದ ವಿಠೋಬಾ ಮಾಳ್ಸೇಕರ, ರಾಜು ಕರ್ಲೆಕರ, ವಿನೋದ ಘಿಂಡೆ, ಪೂಜಾ ದೂಳಿ, ಶಿವರಾಜ ಪಾಟೀಲ ಸೇರಿದಂತೆ ಹಲವಾರು ಧರ್ಮಪ್ರೇಮಿಗಳು ಪಾಲ್ಗೊಂಡಿದ್ದರು.ರಥದ ಮನೆಯಿಂದ ಹೊರಬಂದ ಮಹಾಬಲೇಶ್ವರ ತೇರು
ಗೋಕರ್ಣ: ಮಹಾಬಲೇಶ್ವರ ಮಂದಿರದ ಮಹಾರಥವನ್ನು ರಥಸಪ್ತಮಿಯ ದಿನವಾದ ಮಂಗಳವಾರ ದೈವಿಕ ಕಾರ್ಯಕ್ರಮದೊಂದಿಗೆ ರಥದ ಮನೆಯಿಂದ ಹೊರತರಲಾಯಿತು.ಪರಂಪರೆಯಂತೆ ಶಿವರಾತ್ರಿ ಮಹೋತ್ಸವದ ಮಹಾರಥೋತ್ಸವಕ್ಕೆ ಪೂರ್ವಭಾವಿಯಾಗಿ ರಥದಲ್ಲಿರುವ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ಹೊರತರಲಾಯಿತು. ಯಜಮಾನ ಪಂಡಿತ ಮನೆತನದ ವೇ. ಸುಬ್ರಹ್ಮಣ್ಯ ಪಂಡಿತ ಪೂಜಾ ಕೈಂಕರ್ಯ ನೆರವೇರಿಸಿದರು.ಈ ವೇಳೆ ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯರಾದ ವೇ. ಸುಬ್ರಹ್ಮಣ್ಯ ಅಡಿ, ವೇ. ಮಹೇಶ ಹಿರೇಗಂಗೆ, ಮಂದಿರದ ವ್ಯವಸ್ಥಾಪಕ ಸುಬ್ರಹ್ಮಣ್ಯ ಹೆಗಡೆ, ಪೂಜಾ ವಿಭಾಗದ ವಿನಾಯಕ ಹೆಗಡೆ ಹಾಗೂ ಸಿಬ್ಬಂದಿ, ಗಣಪತಿ ಪಂಡಿತ, ರಥ ಕಟ್ಟುವ ಕಾಯಕದ ಹಾಲಕ್ಕಿ ಒಕ್ಕಲಿಗರ ಸಮಾಜ, ಖಾರ್ವಿ ಸಮಾಜ, ಗಾಬಿತ ಸಮಾಜ, ಆಚಾರಿ ಸಮಾಜ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಗಣೇಶ ಪೂಜೆ ನಂತರ ಹರ ಹರ ಮಹಾದೇವ ಜಯಘೋಷದೊಂದಿಗೆ ಸ್ಥಳೀಯರು ಹಾಗೂ ಭಕ್ತರು ರಥವನ್ನು ಸಂಭ್ರಮದಿಂದ ಹೊರತಂದರು. ಈ ಕಾರ್ಯದೊಂದಿಗೆ ರಥ ಕಟ್ಟುವ ಕಾರ್ಯಕ್ಕೆ ಚಾಲನೆ ದೊರೆತಿದೆ.