ಸಾರಾಂಶ
ನಮ್ಮ ದೇಶದಲ್ಲಿ ಕ್ರಿಕೆಟ್ ಎನ್ನುವುದು ಒಂದು ಧರ್ಮವೇ ಆಗಿದೆ. ಸಚಿನ್ ತೆಂಡೂಲ್ಕರ್ ಅವರನ್ನು ಕ್ರಿಕೆಟ್ ದೇವರು ಎನ್ನುತ್ತಾರೆ. ಇಷ್ಟು ಪ್ರಖ್ಯಾತಿಯನ್ನು ಪಡೆದಿರುವ ಕ್ರಿಕೆಟ್ ರಾಷ್ಟ್ರೀಯ ತಂಡದಲ್ಲಿ ತಾವು ಒಂದು ಭಾಗವಾಗಬೇಕು ಎನ್ನುವ ಆಸೆ- ಕನಸು ಹಲವಾರು ಜನರಲ್ಲಿ ಸಹಜವಾಗಿ ಇರುತ್ತದೆ.
ಕನ್ನಡಪ್ರಭ ವಾರ್ತೆ ಮೈಸೂರು
ಯುವ ಆಟಗಾರರು ಪ್ರಮುಖವಾಗಿ ದೈಹಿಕ ಕ್ಷಮತೆ, ಮಾನಸಿಕ ಸ್ಥೈರ್ಯ, ಏಕಾಗ್ರತೆ, ಶಿಸ್ತನ್ನು ರೂಢಿಸಿಕೊಳ್ಳಬೇಕು ಎಂದು ಮೈಸೂರು ವಿವಿ ಮಾಜಿ ಕ್ರಿಕೆಟ್ ಕೋಚ್ ಡಾ. ಮನ್ಸೂರ್ ಅಹ್ಮದ್ ಸಲಹೆ ನೀಡಿದರು.ನಗರದ ಎಸ್.ಜೆ.ಸಿ.ಇ ಕ್ಯಾಂಪಸ್ಸಿನಲ್ಲಿರುವ ಕ್ರಿಕೆಟ್ ಮೈದಾನದಲ್ಲಿ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಆಯೋಜಿಸಿರುವ ಜೆಎಸ್‌ಎಸ್ ಅಂತರ ಸಂಸ್ಥೆಗಳ ಪುರುಷರ ಕ್ರಿಕೆಟ್ ಪಂದ್ಯಾವಳಿಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಯುವ ಆಟಗಾರರರು ಸಾಧನೆಯತ್ತ ಆಲೋಚಿಸದೇ ತಮ್ಮ ಆಟದತ್ತ ಮಾತ್ರ ಗಮನ ಹರಿಸುವುದು ಬಹಳ ಮುಖ್ಯ ಎಂದರು.
ಮೈದಾನದಲ್ಲಿ ಬೇರೆಯಾವುದನ್ನೂ ತಲೆಗೆ ಹಾಕಿಕೊಳ್ಳದೇ ಕೇವಲ ಆಟವಾಡಿ. ಆಟವನ್ನು ಆನಂದಿಸಿ ನೀವು ಆಡುವ ಆಟಕ್ಕೆ ಬದ್ಧರಾಗಿ. ಆಗ ಯಶಸ್ಸು ಸಾಧನೆ ತಾನಾಗಿಯೇ ಒಲಿದು ಬರುತ್ತದೆ. ಯುವ ಆಟಗಾರರು ಪ್ರತಿನಿತ್ಯ ಅಭ್ಯಾಸ ಮಾಡಬೇಕು. ಆಟಕ್ಕೆ ಮೀಸಲಾದ ಸಮಯವನ್ನು ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಆ ಸಮಯವನ್ನು ಬೇರೆ ಕಾರ್ಯಕ್ಕೆ ಬಳಸಬಾರದು. ಆಗ ಮಾತ್ರ ಉತ್ತಮ ಆಟಗಾರನಾಗಲು ಸಾಧ್ಯ ಎಂದು ಅವರು ಹೇಳಿದರು.ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಕುಲಪತಿ ಡಾ.ಎ.ಎನ್. ಸಂತೋಷ ಕುಮಾರ್ ಮಾತನಾಡಿ, ನಮ್ಮ ದೇಶದಲ್ಲಿ ಕ್ರಿಕೆಟ್ ಎನ್ನುವುದು ಒಂದು ಧರ್ಮವೇ ಆಗಿದೆ. ಸಚಿನ್ ತೆಂಡೂಲ್ಕರ್ ಅವರನ್ನು ಕ್ರಿಕೆಟ್ ದೇವರು ಎನ್ನುತ್ತಾರೆ. ಇಷ್ಟು ಪ್ರಖ್ಯಾತಿಯನ್ನು ಪಡೆದಿರುವ ಕ್ರಿಕೆಟ್ ರಾಷ್ಟ್ರೀಯ ತಂಡದಲ್ಲಿ ತಾವು ಒಂದು ಭಾಗವಾಗಬೇಕು ಎನ್ನುವ ಆಸೆ- ಕನಸು ಹಲವಾರು ಜನರಲ್ಲಿ ಸಹಜವಾಗಿ ಇರುತ್ತದೆ ಎಂದರು.
ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಕುಲಸಚಿವ ಡಾ.ಎಸ್.ಎ. ಧನರಾಜ್, ಎಸ್.ಜೆ.ಸಿ.ಇ ಪ್ರಭಾರ ಪ್ರಾಂಶುಪಾಲ ಡಾ.ಸಿ. ನಟರಾಜು, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ. ರೇವಣ್ಣ ಮೊದಲಾದವರು ಇದ್ದರು.