ಸಾರಾಂಶ
ಹಾವೇರಿ: ಯುವಪೀಳಿಗೆ ಸಂಶೋಧನೆಯ ಕಡೆಗೆ ಹೆಚ್ಚು ಗಮನ ಹರಿಸಬೇಕು. ವಿದ್ಯಾರ್ಥಿ ಹಂತದಲ್ಲಿಯೇ ಸಂಶೋಧನಾ ಲೇಖನವನ್ನು ಬರೆಯುವ ಕಲೆಯನ್ನು ರೂಢಿಸಿಕೊಳ್ಳಬೇಕು ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ನಿಕಟಪೂರ್ವ ಹಂಗಾಮಿ ಕುಲಪತಿ ಪ್ರೊ. ಜಯಶ್ರೀ ಎಸ್. ತಿಳಿಸಿದರು.ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಹಾವೇರಿ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಮಾತನಾಡಿ, ವೃದ್ಧರ ಜನಸಂಖ್ಯೆಯು ಜಾಗತಿಕವಾಗಿ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳು ವಯೋವೃದ್ಧರ ಮೇಲೆ ಹೆಚ್ಚಾಗಿ ಸಂಶೋಧನೆಯನ್ನು ಕೈಗೊಳ್ಳಬೇಕು. ಈ ಮೂಲಕ ಅದರ ವಿವಿದ ಮಗ್ಗುಲುಗಳ ಅಧ್ಯಯನದ ಮೇಲೆ ಬೆಳಕು ಚೆಲ್ಲಬೇಕೆಂದರು. ವೃದ್ಧರ ಆರೋಗ್ಯ ಮತ್ತು ಯೋಗಕ್ಷೇಮವನ್ನು ನೋಡಿಕೊಳ್ಳುವ ನಿಟ್ಟಿನಲ್ಲಿ ಡಿಪ್ಲೊಮಾ ಇನ್ ಸೋಶಿಯಲ್ ಕೇರ್ ಕೇಂದ್ರವನ್ನು ವಿಶ್ವವಿದ್ಯಾಲಯದಲ್ಲಿ ಆರಂಭಿಸುವಂತೆ ಹಾವೇರಿ ವಿವಿ ಕುಲಪತಿಗಳಿಗೆ ಸಲಹೆ ನೀಡಿದರು.ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ಮಾತನಾಡಿ, ಯುವ ವಿದ್ಯಾರ್ಥಿಗಳು ಮುಂಬರುವ ಶೈಕ್ಷಣಿಕ ವರ್ಷದಲ್ಲಿ ವೃದ್ಧರ ಕುರಿತು ಹೊಸ ವಿಷಯಗಳ ಮೇಲೆ ಸಂಶೋಧನೆ ಮಾಡಬೇಕು. ಇಂದಿನ ದಿನಮಾನಗಳಿಗೆ ಹೊಂದುವ ಹಾಗೂ ಉದ್ಯೋಗ ಅವಕಾಶಗಳು ಸಿಗುವಂಥ ವಿಷಯದ ಮೇಲೆ ಸಂಶೋಧನೆ ನಡೆಯಬೇಕು. ಹಾವೇರಿ ವಿಶ್ವವಿದ್ಯಾಲಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿಯೇ ಡಿಪ್ಲೊಮಾ ಇನ್ ಸೋಶಿಯಲ್ ಕೇರ್ ಕೇಂದ್ರವನ್ನು ಆರಂಭಿಸಲಾಗುವುದು ಎಂದರು.ಕಾರ್ಯಕ್ರಮ ಸಂಯೋಜಕ ಡಾ. ಕವಿತಾ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ವಿವಿಧ ನಿಕಾಯಗಳ ಉಪನ್ಯಾಸಕರು ಹಾಗೂ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಾಗರತ್ನಮ್ಮ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ವಿದ್ಯಾರ್ಥಿನಿ ಮೇಘಾ ನಿರೂಪಿಸಿದರು. ವಿಜಯಲಕ್ಷ್ಮಿ ತೋಟದ ಸ್ವಾಗತಿಸಿದರು. ಭಾಗ್ಯ ವಂದಿಸಿದರು.