ಸಾರಾಂಶ
ಹಾವೇರಿ: ಯುವ ಸಮೂಹ ಮಾದಕ ವಸ್ತುಗಳ ದುಶ್ಚಟಗಳಿಗೆ ದಾಸರಾಗದೇ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ನಶಾ ಮುಕ್ತ ಭಾರತದ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶೈಲಜಾ ಎಚ್.ವಿ. ತಿಳಿಸಿದರು.ನಗರದ ಹೊಸಮಠದ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ಜಿಲ್ಲಾ ಪೊಲೀಸ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಬಕಾರಿ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ಪಾಕ್ಷಿಕ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಮಾಜದಿಂದ ಮಾದಕ ವಸ್ತುಗಳ ವ್ಯಸನ ತೊಡೆದುಹಾಕಲು ಈ ಆಚರಣೆ ಮಾಡಲಾಗುತ್ತಿದೆ. ನಶಾ ಮುಕ್ತ ಭಾರತ ಒಬ್ಬರಿಂದ ಸಾಧ್ಯವಿಲ್ಲ. ವಿವಿಧ ಇಲಾಖೆಗಳು ಹಾಗೂ ಸಮಾಜದ ಸಹಭಾಗಿತ್ವ ಅಗತ್ಯವಾಗಿದೆ. ನಮ್ಮ ನಮ್ಮ ಕುಟುಂಬದಲ್ಲಿ ಇರುವ ಮಾದಕ ವ್ಯಸನಿಗಳಿಗೆ ರಿಹ್ಯಾಬ್ಲೇಷನ್ ಸೆಂಟರ್‌ಗಳಲ್ಲಿ ಸೂಕ್ತ ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆ ಕೊಡಿಸುವ ಮೂಲಕ ನಶಾ ಮುಕ್ತ ಭಾರತಕ್ಕೆ ಎಲ್ಲರೂ ಮುಂದಾಗಬೇಕು ಎಂದರು. ಮಾದಕ ವಸ್ತುಗಳ ಸೇವೆನೆಯಿಂದ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮಗಳು ಉಂಟಾಗುತ್ತವೆ. ಮನುಷ್ಯ ತನ್ನ ಮಾನಸಿಕ ಸಮತೋಲನ ಕಳೆದುಕೊಳ್ಳುತ್ತಾನೆ. ಅನೇಕ ಅಪರಾಧಗಳಲ್ಲಿ ಭಾಗಿಯಾಗುತ್ತಾನೆ. ಹಾಗಾಗಿ ಮಾದಕ ವಸ್ತುಗಳಿಂದ ದೂರವಿರಬೇಕು. ನಿಮ್ಮ ಸುತ್ತಮುತ್ತ ಅನಧಿಕೃತವಾಗಿ ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಣಿಕೆ ಕಂಡುಬಂದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆ ಅಥವಾ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು. ಒಟ್ಟಾರೆ ಹಾವೇರಿ ಜಿಲ್ಲೆ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು ಎಂದರು.ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಚ್. ಜತ್ತಿ ಮಾತನಾಡಿ, ಮಾದಕ ವಸ್ತುಗಳ ಸೇವನೆ ಅತ್ಯಂತ ಅಪಾಯಕಾರಿಯಾಗಿದೆ. ಕ್ಷಣಿಕ ಸಂತೋಷಕ್ಕೆ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗುತ್ತಿರುವುದು ಹೆಚ್ಚಾಗಿದೆ. ಸ್ನೇಹಿತರ ಒತ್ತಾಯ, ದೈಹಿಕ ಹಾಗೂ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಹೀಗೆ ಅನೇಕ ಕಾರಣಗಳಿಗಾಗಿ ಜನರು ಮಾದಕಗಳ ಮೊರೆ ಹೋಗುತ್ತಿದ್ದಾರೆ. ನಂತರ ಈ ವ್ಯಸನದಿಂದ ಹೊರಬರಲಾರದ ಸ್ಥಿತಿಯಲ್ಲಿ ಬಳಲುತ್ತಿದ್ದಾರೆ. ಯುವ ಸಮೂಹ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತರಾಗಿರಬೇಕು ಹಾಗೂ ದುಶ್ಚಟಗಳಿಂದ ದೂರ ಉಳಿಯಬೇಕು ಎಂದು ಸಲಹೆ ನೀಡಿದರು. ಅಬಕಾರಿ ಇಲಾಖೆ ಇನ್ಸಪೆಕ್ಟರ್ ಸಿದ್ದಪ್ಪ ಮೇಟಿ ಮಾತನಾಡಿ, ಯಾವುದೇ ಒಂದು ದೇಶದ ಯುವಶಕ್ತಿಯನ್ನು ಹಾಳು ಮಾಡಲು ಮಾದಕ ವಸ್ತುಗಳ ಬಳಕೆ ಒಂದೇ ಸಾಕು. ಯುವ ಸಮೂಹ ಮಾದಕ ವಸ್ತುಗಳ ದುಶ್ಚಟಗಳಿಗೆ ಬಲಿಯಾಗುವುದರಿಂದ ದೇಶದ ಆರ್ಥಿಕ ಬೆಳವಣಿಗೆ ಕುಂಠಿತವಾಗುತ್ತದೆ. ಹಾಗಾಗಿ ಯುವ ಸಮೂಹ ದುಶ್ಚಟಗಳಿಂದ ದೂರವಿರಬೇಕು. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು ಎಂದರು.ಮನೋವೈದ್ಯ ಡಾ. ವಿಜಯಕುಮಾರ ಬಿ. ಅವರು ಮಾದಕ ವಸ್ತುಗಳ ದುಷ್ಪರಿಣಾಮ ಮತ್ತು ಮಾನಸಿಕ ರೋಗದ ಲಕ್ಷಣಗಳ ಕುರಿತು ಉಪನ್ಯಾಸ ನೀಡಿದರು.ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಮಂಜುನಾಥ ವಡ್ಡರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಚನಬಸಯ್ಯ ವಿರಕ್ತಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಪಿ.ಎಸ್. ಹೆಬ್ಬಾಳ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಚನ್ನಪ್ಪ ಲಮಾಣಿ, ಜಿಲ್ಲಾ ತಂಬಾಕು ನಿಯಂತ್ರಣ ಸಲಹೆಗಾರ ಡಾ. ಸಂತೋಷ ದಡ್ಡಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆಚಂಜನೇಯ ಹುಲ್ಲಾಳ ಇತರರು ಉಪಸ್ಥಿತರಿದ್ದರು. ವಾಣಿ ಚನ್ನವೀರಪ್ಪನವರ ಸ್ವಾಗತಿಸಿದರು. ಸುಪರ್ಣಾ ಯಡಹಳ್ಳಿ ನಿರೂಪಿಸಿದರು.