ಎಚ್‌ಐವಿ ಸೋಂಕು ತಡೆಗೆ ಯುವಕರು ಜಾಗೃತರಾಗಲಿ: ನ್ಯಾಯಾಧೀಶ ಅಮೋಲ್ ಹಿರಿಕುಡೆ

| Published : Dec 18 2024, 12:45 AM IST

ಎಚ್‌ಐವಿ ಸೋಂಕು ತಡೆಗೆ ಯುವಕರು ಜಾಗೃತರಾಗಲಿ: ನ್ಯಾಯಾಧೀಶ ಅಮೋಲ್ ಹಿರಿಕುಡೆ
Share this Article
  • FB
  • TW
  • Linkdin
  • Email

ಸಾರಾಂಶ

ಪಾಲಕರು ಮಕ್ಕಳ ಬಗೆಗೆ ಕಾಳಜಿ ವಹಿಸಿ ತೀವ್ರ ನಿಗಾ ಇಡುವ ಮೂಲಕ ತಪ್ಪು ಹೆಜ್ಜೆಗಳನ್ನು ಇಡದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಧೀಶ ಅಮೋಲ್ ಹಿರಿಕುಡೆ ಹೇಳಿದರು.

ಬ್ಯಾಡಗಿ: ಕದರಮಂಡಲಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಸಾರ್ವಜನಿಕ ಆಸ್ಪತ್ರೆ ಬ್ಯಾಡಗಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕದರಮಂಡಲಗಿ ಸಂಯುಕ್ತಾಶ್ರಯದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮ ಜರುಗಿತು.

ಕಾಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಅಮೋಲ್ ಹಿರಿಕುಡೆ, ಆರೋಗ್ಯ ಇಲಾಖೆಯೇ ಏಡ್ಸ್‌ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಇದರಲ್ಲಿ ನಮ್ಮ ಯುವಕರು ಜಾಗೃತರಾಗಬೇಕಾಗಿದೆ. ಅದರಲ್ಲೂ ಪಾಲಕರು ಅತೀ ಹೆಚ್ಚು ಕಾಳಜಿ ವಹಿಸಿ ತಮ್ಮ ಮಕ್ಕಳ ಚಲನವಲನಗಳ ಬಗ್ಗೆ ತೀವ್ರ ನಿಗಾ ಇಡುವ ಮೂಲಕ ತಪ್ಪು ಹೆಜ್ಜೆಗಳನ್ನು ಇಡದಂತೆ ನೋಡಿಕೊಳ್ಳಬೇಕು. ಅದಕ್ಕಿಂತ ಮುಖ್ಯವಾಗಿ ಸಾರ್ವಜನಿಕರ ಪಾತ್ರ ತುಂಬಾ ಮುಖ್ಯವಾಗಿದ್ದು, ಮಕ್ಕಳಲ್ಲಿ ಜಾಗೃತಿ ಮೂಡಿಸಿ ಏಡ್ಸ್ ಮುಕ್ತ ಸಮಾಜವನ್ನು ಎಲ್ಲರೂ ಸೇರಿ ನಿರ್ಮಿಸೋಣ ಎಂದರು.

ಆಶ್ರಯ ನೀಡಿ ಅಪ್ಪಿಕೊಳ್ಳೋಣ

ಸಿವಿಲ್ ನ್ಯಾಯಾಧೀಶ ಸುರೇಶ ವಗ್ಗನವರ ಮಾತನಾಡಿ, ಅಸುರಕ್ಷಿತ ಲೈಂಗಿಕ ಕ್ರಿಯೆ ಇದಕ್ಕೆ ಮೂಲ ಕಾರಣವಾಗಿದ್ದು, ಹದಿಹರೆಯದ ಯುವತಿಯರಲ್ಲಿ ಇದು ಹೆಚ್ಚಾಗಿ ಕಾಣುತ್ತಿದೆ. ಪ್ರಸಕ್ತ ಸನ್ನಿವೇಶದಲ್ಲಿ ಶೋಷಿತರಿಗೆ ತಿರಸ್ಕೃತರಿಗೆ ಆಶ್ರಯ ನೀಡಬೇಕಾಗಿದೆ. ತಿಳಿದೋ ತಿಳಿಯದೆಯೋ ಮಾಡಿದ ತಪ್ಪುಗಳಿಗೆ ಶಿಕ್ಷೆ ನೀಡುವುದಕ್ಕಿಂತ ಅವರನ್ನು ಅಪ್ಪಿಕೊಳ್ಳುವಂತಹ ಕೆಲಸವಾಗಬೇಕಾಗಿದೆ ಎಂದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎನ್. ಬಾರ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷ ಬಿ.ಜಿ. ಹಿರೇಮಠ, ಕಾರ್ಯದರ್ಶಿ ಎಂ.ಪಿ. ಹಂಜಗಿ, ತಾಲೂಕು ಆರೋಗ್ಯಾಧಿಕಾರಿ ಡಾ. ಕಾಂತೇಶ ಭಜಂತ್ರಿ, ಕದರಮಂಡಲಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅರಾಫತ್ ಕಾಗದಗಾರ, ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ ಸಂತೋಷ್ ಹಾಲುಂಡಿ, ತಾಲೂಕು ಆಸ್ಪತ್ರೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವಿ.ಮಮತಾ, ಹಿರಿಯ ವಕೀಲರಾದ ಪ್ರಭು ಶೀಗಿಹಳ್ಳಿ, ಎಂ.ಜೆ. ಮುಲ್ಲಾ, ಭಾರತಿ ಕುಲಕರ್ಣಿ, ಪ್ಯಾನಲ್ ವಕೀಲರಾದ ಸಿ.ಸಿ. ದಾನಣ್ಣವರ, ಎಸ್.ಎಸ್ .ಮೂಡೂರು, ಎಸ್.ಕೆ. ನಾಯಕ್ ಸೇರಿದಂತೆ ನ್ಯಾಯಾಂಗ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕದರಮಂಡಲಗಿ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.