ಭಾರತ ವಿಶ್ವಗುರುವಾಗಿಸಲು ಯುವ ಸಮುದಾಯ ಕೈಜೋಡಿಸಲಿ

| Published : Dec 26 2023, 01:30 AM IST / Updated: Dec 26 2023, 01:31 AM IST

ಸಾರಾಂಶ

ಈಗಿನ ಯುವಕರು ವಿವೇಕಾನಂದರು ಬಯಸಿದ ತಾರುಣ್ಯವನ್ನು ಹೊಂದಿ, ಭಾರತವನ್ನು ವಿಶ್ವಗುರುವಾಗಿಸುವ ಕಾರ್ಯದಲ್ಲಿ ನಿರತರಾಗಬೇಕು ಎಂದು ಶ್ರೀ ಮಾತಾ ಆಶ್ರಮದ ಅಧ್ಯಕ್ಷೆ ಶ್ರೀಮಾತಾ ತೇಜೋಮಯಿ ಹೇಳಿದರು.

- ವಿವೇಕ ಮಾಲಾಧಾರಣಾ ಕಾರ್ಯಕ್ರಮದಲ್ಲಿ ಶ್ರೀಮಾತಾ ತೇಜೋಮಯಿ ಅಭಿಮತಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಭಾರತವನ್ನು ವಿಶ್ವಗುರುವನ್ನಾಗಿಸುವ ಕಾರ್ಯದಲ್ಲಿ ಯುವ ಜನತೆಯ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಶ್ರೀ ಮಾತಾ ಆಶ್ರಮದ ಅಧ್ಯಕ್ಷೆ ಶ್ರೀಮಾತಾ ತೇಜೋಮಯಿ ಹೇಳಿದರು.

ಇಲ್ಲಿನ ಕಲ್ಯಾಣನಗರದ ಶ್ರೀರಾಮಕೃಷ್ಣ- ವಿವೇಕಾನಂದ ಆಶ್ರಮದಲ್ಲಿ ಯುವ ಬ್ರಿಗೇಡ್, ಸೋದರಿ ನಿವೇದಿತಾ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ "ರಾಕ್ ಡೇ ವಿವೇಕ ಮಾಲೆ ಧಾರಣೆ " ಮತ್ತು "ಅಮ್ಮ ನಮನ " ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸ್ವಾಮಿ ವಿವೇಕಾನಂದರು ಹೇಳಿದಂತೆ ಭಾರತದ ಮೂಲವೇ ಅಧ್ಯಾತ್ಮ ಮತ್ತು ಸನಾತನ ಧರ್ಮ. ಯಾವಾಗ ಇವೆರಡಕ್ಕೂ ಧಕ್ಕೆ ಬರುವುದೋ ಆಗ ರಾಷ್ಟ್ರ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಆದಕಾರಣ ಈಗಿನ ಯುವಕರು ವಿವೇಕಾನಂದರು ಬಯಸಿದ ತಾರುಣ್ಯವನ್ನು ಹೊಂದಿ, ಭಾರತವನ್ನು ವಿಶ್ವಗುರುವಾಗಿಸುವ ಕಾರ್ಯದಲ್ಲಿ ನಿರತರಾಗಬೇಕು ಎಂದರು.

ವ್ರತಾಚರಣೆಯಿಂದಾಗಿ ಸಂಸ್ಕೃತಿ, ಸನಾತನ ಧರ್ಮ ಇಂದಿಗೂ ತನ್ನ ಮಹತ್ವವನ್ನು ಉಳಿಸಿಕೊಂಡಿದೆ. ಈ ನಿಟ್ಟಿನಲ್ಲಿ ಯುವ ಬ್ರಿಗೇಡ್‌ ವಿವೇಕಮಾಲೆ ಆರಂಭಿಸಿರುವುದು ಶ್ಲಾಘನೀಯ ಎಂದರು.

ನಿವೃತ್ತ ಸೈನಿಕ ಪರಮೇಶ್ವರ ಮಾತನಾಡಿ, ಭಾರತ ಮತ್ತು ಇಲ್ಲಿನ ಸಂಸ್ಕೃತಿಗಳ ಪರಿಚಯ ಇಂದಿನ ಪೀಳಿಗೆಗೆ ಮಾಡಿಸುವ ಅವಶ್ಯಕತೆಯಿದೆ. ಆ ನಿಟ್ಟಿನಲ್ಲಿ ಯುವ ಬ್ರಿಗೇಡ್‌ನ ಈ ಎರಡು ಕಾರ್ಯಕ್ರಮಗಳು ಯಶಸ್ವಿಯಾಗಿವೆ ಎಂದರು.

ಡಾ. ನಾಗಾಲಿಂಗ ಮುರಗಿ ಮಾತನಾಡಿ, ರಾಕ್ ಡೇ ವಿವೇಕಮಾಲೆ ಧಾರಣೆ ಮತ್ತು ಅಮ್ಮ ನಮನ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಯುವಕ ಯುವತಿಯರು ವಿವೇಕ ಮಾಲೆ ಧಾರಣೆ ಮಾಡಿ ವಿವೇಕಾನಂದರ ಕಲ್ಪನೆಯ ತರುಣರಾಗಲು ಸಂಕಲ್ಪ ಮಾಡಿದರು. "ಅಮ್ಮ ನಮನ " ಕಾರ್ಯಕ್ರಮದಲ್ಲಿ 12 ಜನ ವೀರಮಾತೆಯರಿಗೆ (ಸೈನಿಕರ ತಾಯಂದಿರು) ಯುವ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ಕಾರ್ಯಕರ್ತರು ಪಾದಪೂಜೆ ಮಾಡಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮ ಹುಬ್ಬಳ್ಳಿ ಧರ್ಮದರ್ಶಿ ಸಂಭಾಜಿ ಕಲಾಲ, ಸಂಗಣ್ಣ ಬೆಳಗಾವಿ, ಯುವ ಬ್ರಿಗೇಡ್‌ನ ಜಿಲ್ಲಾ ಸಂಚಾಲಕ ಪ್ರಶಾಂತ ಸುತಾರ್‌, ಕಾರ್ಯಕರ್ತರಾದ ಶಶಾಂಕ ಚವಟಿ, ಸಂತೋಷ ಕಂಟೆಪ್ಪಗೌಡ್ರ, ನಿಕೇಶ, ಗಿರಿಮಲ್ಲಪ್ಪ ಸುಲ್ತಾನಪುರ, ಮಂಜು ಬದ್ದಿ ಭಾಗವಹಿಸಿದ್ದರು.