ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ, ನಿರುದ್ಯೋಗ, ಶಿಕ್ಷಣ, ರೈತರ ಸಮಸ್ಯೆಗಳು ಸೇರಿದಂತೆ ಜನಸಾಮಾನ್ಯರ ಬದುಕಿಗೆ ಸಂಬಂಧಿಸಿದ ವಿಷಯಗಳಲ್ಲಿ ಯುವಕರು ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು
ಕುಷ್ಟಗಿ: ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಯುವಕರ ಪಾತ್ರ ಪ್ರಮುಖವಾಗಿದ್ದು, ಯುವ ಕಾಂಗ್ರೆಸ್ ಕೇವಲ ರಾಜಕೀಯ ಸಂಘಟನೆಯಾಗದೆ ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.
ಪಟ್ಟಣದ ಎಸ್.ಎಂ.ಭವನದಲ್ಲಿ ಯುವ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ, ನಿರುದ್ಯೋಗ, ಶಿಕ್ಷಣ, ರೈತರ ಸಮಸ್ಯೆಗಳು ಸೇರಿದಂತೆ ಜನಸಾಮಾನ್ಯರ ಬದುಕಿಗೆ ಸಂಬಂಧಿಸಿದ ವಿಷಯಗಳಲ್ಲಿ ಯುವಕರು ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು. ಪಕ್ಷದ ಸಿದ್ಧಾಂತ ಮನೆಮನೆಗೆ ತಲುಪಿಸುವ ಮೂಲಕ ಸಂಘಟನೆಯನ್ನು ಇನ್ನಷ್ಟು ಸದೃಢಗೊಳಿಸಬೇಕು ಎಂದು ಹೇಳಿದರು.
ತುಂಗಭದ್ರಾ ಕಾಡಾ ನಿಗಮ ಅಧ್ಯಕ್ಷ ಹಸನಸಾಬ್ ದೋಟಿಹಾಳ ಮಾತನಾಡಿ, ಯುವ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಶಕ್ತಿಯಾಗಿ ಕಾರ್ಯನಿರ್ವಹಿಸಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನರ ವಿಶ್ವಾಸ ಗಳಿಸಬೇಕು ಎಂದು ತಿಳಿಸಿ, ಸಂಘಟನೆ ಬೆಳವಣಿಗೆಯ ಜತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಜನರ ವಿಶ್ವಾಸ ಗಳಿಸಲು ಸಾಧ್ಯವಾಗುತ್ತದೆ ಎಂದರು.ನೂತನ ಪದಾಧಿಕಾರಿಗಳು ಸಂಘಟನೆಯ ಜವಾಬ್ದಾರಿ ಸಮರ್ಥವಾಗಿ ನಿರ್ವಹಿಸಿ ಪಕ್ಷ ಮತ್ತಷ್ಟು ಬಲಪಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಿಂಗೇಶ ಕಲ್ಗುಡಿ, ಯುವ ಕಾಂಗ್ರೇಸ್ ಸಮಿತಿಯ ತಾಲೂಕಾಧ್ಯಕ್ಷ ಈರಣ್ಣ ಬಾದಾಮಿ, ಹನುಮಸಾಗರ ಬ್ಲಾಕ್ ಅಧ್ಯಕ್ಷ ಕರಿಸಿದ್ದಪ್ಪ ಪಟ್ಟಣಶೆಟ್ಟಿ, ಕುಷ್ಟಗಿ ಬ್ಲಾಕ್ ಅಧ್ಯಕ್ಷ ಅಯ್ಯಪ್ಪ ಹವಾಲ್ದಾರ, ಗ್ಯಾರಂಟಿ ಸಮಿತಿಯ ಅಧ್ಯಕ್ಷ ಫಾರೂಕ್ ಡಾಲಾಯತ್, ಶೇಖರಗೌಡ ಮಾಲಿಪಾಟೀಲ, ಮಹಾಂತೇಶ ಬಂಡೇರ, ಕೇದಾರನಾಥ ತುರಕಾಣಿ ಸೇರಿದಂತೆ ಅನೇಕರು ಇದ್ದರು.ಇದೇ ವೇಳೆ ನೂತನವಾಗಿ ನೇಮಕವಾಗಿರುವ ಯುವ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ನೀಡಿದರು.
ಯುವ ಕಾಂಗ್ರೆಸ್ ಸಮಿತಿಯಿಂದ ನಡೆಯುವ ಎಲ್ಲ ಕಾರ್ಯ ಚಟುವಟಿಕೆಗಳನ್ನು ಯುವ ಕಾಂಗ್ರೆಸ್ ಆ್ಯಪ್ ಮೂಲಕ ಅಪ್ಲೋಡ್ ಮಾಡಬೇಕಿದ್ದು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಯುವ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾಠೋಡ ತಿಳಿಸಿದ್ದಾರೆ.