ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಯುವ ಸಮೂಹ ಸಂಶೋಧನೆಗೆ ಅಗತ್ಯವಿರುವ ವ್ಯವಸ್ಥೆ, ಕಾರ್ಯ ವಿಧಾನವನ್ನು ಅಭ್ಯಸಿಸಿ ನಿರಂತರ ಅಧ್ಯಯನದೊಂದಿಗೆ ಸಮಾಜದಲ್ಲಿನ ಸಮಸ್ಯೆಗಳಿಗೆ ಉತ್ತರ ಕಂಡು ಹಿಡಿಯಬೇಕು ಎಂದು ಭಾರತೀ ಕಾಲೇಜಿನಲ್ಲಿ ಪ್ರಾಂಶುಪಾಲ ಡಾ.ಎಂ.ಎಸ್.ಮಹದೇವಸ್ವಾಮಿ ಕಿವಿಮಾತು ಹೇಳಿದರು.ಭಾರತೀ ಕಾಲೇಜಿನಲ್ಲಿ ಭಾರತೀ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ ಸಮಾಜ ಕಾರ್ಯ, ಸಮಾಜ ಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ಸಹಭಾಗಿತ್ವದಲ್ಲಿ ಸಂಶೋಧನಾ ಕಾರ್ಯ ವಿಧಾನ ಕುರಿತು ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದರು.
ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಸಮಾಜಮುಖಿ ಕಾರ್ಯಗಳಲ್ಲಿ ತಾವು ಪ್ರಮುಖ ಪಾತ್ರ ನಿರ್ವಹಿಸಬೇಕಾಗಿದೆ. ವಿಶೇಷವಾಗಿ ವಿದ್ಯಾರ್ಥಿಗಳು ಸಂಶೋಧನೆಗಳ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಹೊಸ ಮಾರ್ಗಗಳನ್ನು ಆವಿಷ್ಕರಿಸಬೇಕಾಗಿದೆ ಎಂದು ತಿಳಿಸಿದರು.ಮಣಿಗೆರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎ.ಟಿ.ಶ್ರೀನಿವಾಸ್ ಮೂರ್ತಿ ಮಾತನಾಡಿ, ಪ್ರಸಕ್ತ ಕಾಲಮಾನದಲ್ಲಿ ಮಾನವೀಯ ಗುಣ-ಧರ್ಮಗಳ ಬದಲಾವಣೆಗಳು ಅಧಿಕವಾಗಿ ಹೊಸ ಹೊಸ ಸಂಶೋಧನೆಗಳು ಬಂದರೂ ಜನತೆ ತಮ್ಮ ಮಾನವೀಯ ಮೌಲ್ಯಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದರು.
ವಿದ್ಯಾರ್ಥಿಗಳು ಸಂಶೋಧನಾ ಮನೋಭಾವನೆ ಹೊಂದುವುದರಿಂದ ತಮ್ಮ ಭವಿಷ್ಯದ ಬೆಳವಣಿಗೆಗೆ ಸಮರ್ಪಕ ಮಾರ್ಗವನ್ನು ಅಳವಡಿಸಿಕೊಳ್ಳಬಹುದು. ಕೇವಲ ಪದವಿಗೆ ಮಾತ್ರ ಸೀಮಿತವಾಗದೆ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವ ನೆಲೆಯಲ್ಲಿ ಸಾಧಿಸಬೇಕು ಎಂದು ತಿಳಿಸಿದರು.ಕಾಲೇಜಿನ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಹಾಗೂ ಡೀನ್, ಪ್ರೊ.ಎಸ್.ನಾಗರಾಜ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪರೀಕ್ಷಾ ದೃಷ್ಟಿಯಿಂದ ಕಾರ್ಯಾಗಾರದ ಅನುಭವವನ್ನು ಸೀಮಿತಗೊಳಿಸದೆ ಭವಿಷ್ಯದಲ್ಲಿ ತಮ್ಮ ವೃತ್ತಿರಂಗದಲ್ಲಿ ಸುಧಾರಣೆ ಅಳವಡಿಸಿಕೊಳ್ಳುವುದು, ಜ್ಞಾನ ಬೆಳೆಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಮೊದಲ ಅವಧಿಯ ಸಂಪನ್ಮೂಲ ವ್ಯಕ್ತಿಗಳಾದ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಮೈಸೂರಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ.ಎಂ.ಪಿ.ಸೋಮಶೇಖರ್, ಸಂಶೋಧನಾ ಸಮಸ್ಯೆ ಆಯ್ಕೆ, ಕ್ರಮಾನುಗತ ಅನುಸರಣೆ, ಸಮಸ್ಯೆಯ ನಿರ್ದಿಷ್ಟ ವ್ಯಾಖ್ಯಾನ ಹಾಗೂ ಸಂಶೋಧನೆಗೆ ಅಗತ್ಯವಿರುವ ವಿಷಯ ಪೂರ್ವಜ್ಞಾನವನ್ನು ಹೊಂದಲು ಗ್ರಂಥಗಳ ಪರಾಮರ್ಶನೆಯ ಕ್ರಮಗಳು ಹಾಗೂ ಉಪಯೋಗಗಳನ್ನು ತಿಳಿಸಿದರು.ಮತ್ತೊಬ್ಬ ಸಂಪನ್ಮೂಲ ವ್ಯಕ್ತಿ ಮೈಸೂರು ವಿವಿಯ ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕ ಪ್ರೊ. ಚಂದ್ರಮೌಳಿ, ಸಂಶೋಧನೆಯಲ್ಲಿನ ಹೃದಯ ಭಾಗ ಮತ್ತು ಸಂಶೋಧನೆಯ ನೀಲಿ ನಕ್ಷೆಯಾಗಿರುವ ಸಂಶೋಧನಾ ವಿಧಾನದ ಹಂತಗಳು, ಪ್ರಮುಖಾಂಶಗಳು ಹಾಗೂ ಸಂಶೋಧನಾ ವಿಧಾನದ ರಚನೆಯ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.
ಸಂಪನ್ಮೂಲ ವ್ಯಕ್ತಿಗಳಾದ ಕೆ.ಆರ್.ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು, ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಿದ್ದಪ್ಪ ಮಾದರ್ ಅವರು, ಸಂಶೋಧನೆಯಲ್ಲಿ ದತ್ತಾಂಶಗಳ ವರ್ಗೀಕರಣ, ಕೋಷ್ಟೀಕರಣ, ಮಾಹಿತಿಯ ಪ್ರತಿಪಾದನೆ, ವಿಶ್ಲೇಷಣೆ ಹಾಗೂ ಸಾಂಖಿಕ ದತ್ತಾಂಶಗಳ ನಿರ್ವಹಣೆಯೊಂದಿಗೆ ಸಂಶೋಧನಾ ವರದಿ ತಯಾರಿಸುವಿಕೆಯನ್ನು ತಿಳಿಸಿಕೊಟ್ಟರು.ಕಾರ್ಯಾಗಾರದಲ್ಲಿ ಮಂಡ್ಯ ವಿವಿ, ಮೈಸೂರು ವಿವಿ ಹಾಗೂ ಚಾಮರಾಜನಗರ ವಿವಿ ಸ್ನಾತಕೋತ್ತರ ಸಮಾಜ ಕಾರ್ಯ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಹಾಗೂ ಪ್ರಾಧ್ಯಾಪಕರು ಭಾಗವಸಿದ್ದರು. ಕಾರ್ಯಕ್ರಮದಲ್ಲಿ ಭಾರತೀ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಸಂಯೋಜಕ ಕೆ.ಸಿ.ಸುಂದರೇಶ್, ಐಕ್ಯೂಎಸಿ ಸಂಯೋಜಕರಾದ ಡಾ.ತೇಜೇಶ್ ಕುಮಾರ್, ಡಾ.ಪಿ. ಪುನೀತ್, ಸಮಾಜಕಾರ್ಯ ವಿಭಾಗದ ಮುಖ್ಯಸ್ಥರು ಹಾಗೂ ಕಾರ್ಯಾಗಾರದ ಸಂಘಟನಾ ಕಾರ್ಯದರ್ಶಿ ಎಂ.ಪಿ ಅಭಿಷೇಕ, ಪ್ರಾಧ್ಯಾಪಕರಾದ ಎಚ್.ಎಸ್.ಮಂಜುನಾಥ್, ಎಂ.ಸಿ.ರಂಜಿತ್, ಎಸ್. ಗೀತಾ, ಕೆ.ಎನ್. ಪುಷ್ಪಶ್ರೀ ಮತ್ತು ಅಧ್ಯಾಪಕರು ಹಾಜರಿದ್ದರು.