ಯುವಕರು ಮೌಲ್ಯಯುತ ಸಾಹಿತ್ಯ ನೀಡಲಿ: ಸಾಹಿತಿ ಶಾ.ಮಂ. ಕೃಷ್ಣರಾಯ

| Published : Feb 09 2024, 01:45 AM IST

ಯುವಕರು ಮೌಲ್ಯಯುತ ಸಾಹಿತ್ಯ ನೀಡಲಿ: ಸಾಹಿತಿ ಶಾ.ಮಂ. ಕೃಷ್ಣರಾಯ
Share this Article
  • FB
  • TW
  • Linkdin
  • Email

ಸಾರಾಂಶ

ಸತ್ತರೂ ಬದುಕಿರುವ ಹಾಗೆ ಮೌಲ್ಯಯುತವಾದ ಸಾಹಿತ್ಯವನ್ನು ಈ ಸಮಾಜಕ್ಕೆ ಯುವ ಲೇಖಕರು ನೀಡುವ ಅವಶ್ಯಕತೆ ಇದೆ. ಅಂತಹ ಲೇಖನವನ್ನು ಜನ ಓದಿ ಗೌರವ ನೀಡಿ ಅಜರಾಮರವಾಗಿಸುತ್ತಾರೆ. ಇದರಿಂದಾಗಿ ಮುಂದಿನ ದಿನದಲ್ಲಿ ಸಾಹಿತ್ಯ ಉಳಿಯುತ್ತದೆ.

ಅಂಕೋಲಾ:

ಸತ್ತರೂ ಬದುಕಿರುವ ಹಾಗೆ ಮೌಲ್ಯಯುತವಾದ ಸಾಹಿತ್ಯವನ್ನು ಈ ಸಮಾಜಕ್ಕೆ ಯುವ ಲೇಖಕರು ನೀಡುವ ಅವಶ್ಯಕತೆ ಇದೆ. ಅಂತಹ ಲೇಖನವನ್ನು ಜನ ಓದಿ ಗೌರವ ನೀಡಿ ಅಜರಾಮರವಾಗಿಸುತ್ತಾರೆ. ಇದರಿಂದಾಗಿ ಮುಂದಿನ ದಿನದಲ್ಲಿ ಸಾಹಿತ್ಯ ಉಳಿಯುತ್ತದೆ ಎಂದು ಹಿರಿಯ ಸಾಹಿತಿ ಶಾ.ಮಂ. ಕೃಷ್ಣರಾಯ ಹೇಳಿದರು.

ತಾಲೂಕಿನ ನಾಡವರ ಸಭಾಭವನದಲ್ಲಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ 10ನೇ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಪ್ರಶಸ್ತಿಯ ಹಿಂದೆ ಸಾಹಿತಿಗಳು ಬೆನ್ನತ್ತಿ ಹೋಗುತ್ತಿರುವುದು ವಿಷಾದದ ಸಂಗತಿ. ಸಾಹಿತಿಗಳು ಕಲಾತ್ಮಕವಾಗಿ, ಸಮಾಜಮುಖಿಯಾಗಿ ಲೇಖನ ಬರೆಯಬೇಕು. ಯುವ ಲೇಖಕರು ತಮ್ಮ ಲೇಖನಕ್ಕೆ ತಾವೇ ಜೀವ ತುಂಬುವ ಕೆಲಸ ಮಾಡುವ ಮೂಲಕ ಮನಸ್ಸಿನ ಅಂತರಂಗದಿಂದ ಬರಹ ಬರೆಯುವ ಮೂಲಕ ಹೊಸ ಲೇಖಕರು ಬರಲು ಸಾಧ್ಯವಿದೆ ಎಂದು ಹೇಳಿದರು.ಸಮ್ಮೇಳನದ ಸರ್ವಾಧ್ಯಕ್ಷ ಹಿರಿಯ ಸಾಹಿತಿ ನಾಗೇಶದೇವ ಅಂಕೋಲೆಕರ ಮಾತನಾಡಿ, ಕನಿಷ್ಠ 10 ವರ್ಷ ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ಕರ್ನಾಟಕದಲ್ಲಿ ಉದ್ಯೋಗದ ಭರವಸೆಯಿರಬೇಕು. ಸರ್ಕಾರ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಂಘಟನೆ, ಶಿಕ್ಷಣ ತಜ್ಞರು, ಭಾಷಾ ತಜ್ಞರು, ಕಾನೂನು ತಜ್ಞರೆಲ್ಲರೂ ಸೇರಿ ಕ್ರಿಯಾ ಯೋಜನೆ ತಯಾರಿಸಿ ಕನ್ನಡ ನಾಡಿನಲ್ಲಿ ಕನ್ನಡವೇ ಪ್ರಥಮ ಎಂಬ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಾಗಿದೆ ಎಂದು ಹೇಳಿದರು.ಸಾಹಿತ್ಯ ನಿಂತ ನೀರಲ್ಲ, ಸದಾ ಹರಿಯುವ ಶಾಲ್ಮಲೆ. ನಮಗೆ ಅರಿವಿಲ್ಲದೇ ನಮ್ಮನ್ನು ಪ್ರಭಾವಿಸುವಂಥದ್ದು ಸಾಹಿತ್ಯ. ಕಾಲಕಾಲಕ್ಕೆ ತನ್ನೊಳಗಿನ ಸತ್ವದಿಂದ ಓದುಗನನ್ನು ಪ್ರಗತಿಯತ್ತ ಒಯ್ಯುತ್ತಲೇ ಇರುವಂಥದ್ದು, ತನ್ನೊಳಗಿನ ಅಂತಃಸತ್ವದಿಂದ ಮುಂದಿನ ತಲೆಮಾರುಗಳನ್ನು ಪ್ರಭಾವಿಸುವ ಮತ್ತು ಆ ಮೂಲಕ ಸಮಾಜದ ಮುಖ್ಯಧಾರೆಯೊಂದಿಗೆ ಸಂಬಂಧ ಏರ್ಪಡಿಸುವ ಶಕ್ತಿ ಸಾಹಿತ್ಯಕ್ಕಿದೆ ಎಂದರು.ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಅಂಕೋಲಾ ಅರ್ಬನ್ ಬ್ಯಾಂಕ್ ಅಧ್ಯಕ್ಷ ಭಾಸ್ಕರ ನಾರ್ವೇಕರ ಚಾಲನೆ ನೀಡಿದರು. ಬಿಇಒ ಮಂಗಳಲಕ್ಷ್ಮೀ ಪಾಟೀಲ ದ್ವಾರಗಳನ್ನು ಉದ್ಘಾಟಿಸಿದರು. ಪತ್ರಕರ್ತ ಗಂಗಾಧರ ಹಿರೇಗುತ್ತಿ ಪುಸ್ತಕ ಮಳಿಗೆ ಉದ್ಘಾಟಿಸಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಹೊನ್ನಮ್ಮ ನಾಯಕ ಧ್ವಜ ಹಸ್ತಾಂತರಿಸಿದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಜಾರ್ಜ್‌ ಫರ್ನಾಂಡಿಸ್, ಸಾಹಿತಿ ಶಾಂತಾರಾಮ ನಾಯಕ, ಮೋಹನ ಹಬ್ಬು, ರಾಮಕೃಷ್ಣ ಗುಂದಿ, ವಿಠ್ಠಲ ಗಾಂವಕರ, ನಾಗೇಂದ್ರ ನಾಯಕ ತೊರ್ಕೆ, ಪಿ.ಆರ್. ನಾಯ್ಕ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಾಲಚಂದ್ರ ನಾಯಕ, ಸಿಡಿಪಿಒ ಸವಿತಾ ಶಾಸ್ತ್ರಿಮಠ ಉಪಸ್ಥಿತರಿದ್ದರು.

ತಾಲೂಕು ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಪ್ರಾಸ್ತಾವಿಕ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಆಶಯ ನುಡಿಯನ್ನಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಮಹೇಶ ಗೋಳಿಕಟ್ಟೆ ಸ್ವಾಗತಿಸಿದರು. ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ನಾಯಕ ವಂದಿಸಿದರು. ವಿ.ಕೆ. ಗರ್ಲ್ಸ್ ಹೈಸ್ಕೂಲ್ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಡಾ. ಪುಷ್ಪಾ ನಾಯ್ಕ ಸಮ್ಮೇಳನಾಧ್ಯಕ್ಷರ ಪರಿಚಯಿಸಿದರು. ಪತ್ರಕರ್ತ ಸುಭಾಶ ಕಾರೇಬೈಲ್ ಕಾರ್ಯಕ್ರಮ ನಿರೂಪಿಸಿದರು.ಅಂಕೋಲಾದಲ್ಲಿ ಒಂದು ಕಲ್ಲು ಎಸೆದರೆ ಅದು ಸ್ವಾತಂತ್ರ‍್ಯ ಹೋರಾಟಗಾರರ ಮನೆಯ ಮೇಲೆ ಬೀಳುತ್ತದೆ. ಈ ದೇಶದ ವೀರರು, ಶೂರರು, ಹುಟ್ಟಿದ ನಾಡು ಅಂದರೆ ಅಂಕೋಲಾ. ಈ ತಾಲೂಕಿನ ಜನರು ಸ್ವಾತಂತ್ರ‍್ಯ ಹೋರಾಟದಲ್ಲಿ ಹೆಚ್ಚಿನ ಸೇವೆ ನೀಡಿದ್ದಾರೆ. ಜತೆ ಜತೆಗೆ ಸಾಹಿತಿಗಳು ಸೇವೆ ನೀಡಿದ್ದಾರೆ. ಇದರಿಂದಾಗಿ ಸ್ವಾತಂತ್ರ‍್ಯ ಪೂರ್ವದಲ್ಲಿಯೇ ಇಲ್ಲಿ ಸಾಹಿತ್ಯದ ಪ್ರಭಾವವಿದೆ ಎಂದು ಸಾಹಿತಿ ಶಾ.ಮಂ. ಕೃಷ್ಣರಾಯ ಹೇಳಿದರು.ಇಂದು ಕನ್ನಡ ಭಾಷೆ ಅಪಾಯಕಾರಿ ಸಂದರ್ಭದಲ್ಲಿದೆ. ಒಂದು ಕಾಲಕ್ಕೆ ಕಾವೇರಿಯಿಂದ ಗೋದಾವರಿ ವರೆಗೆ ಆಡಿಕೊಂಡಿದ್ದ ಭಾಷೆ ಇಂದು ಕರ್ನಾಟಕದಲ್ಲಿಯೇ ಶೋಚನೀಯ ಸ್ಥಿತಿಗೆ ತಲುಪಿರುವುದು ವಿಷಾದನೀಯ. ಅತಿಯಾದ ಇಂಗ್ಲಿಷ್ ವ್ಯಾಮೋಹ ಕನ್ನಡ ಭಾಷೆಯ ಕಲಿಕೆಗೆ ಹಿನ್ನೆಡೆಯಾಗಿದೆ. ನಾವೆಲ್ಲರೂ ಕನ್ನಡವನ್ನು ಕನ್ನಡದ ಅಸ್ಮಿತೆಗಾಗಿ ಹೋರಾಡಬೇಕಾಗಿದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ. ನಾಗೇಶದೇವ ಅಂಕೋಲೆಕರ ಹೇಳಿದರು.