ಇಂದಿನ ಯುವಪೀಳಿಗೆ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ವ್ಯಸನಮುಕ್ತ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು.

ಕನ್ನಡಪ್ರಭ ವಾರ್ತೆ ರೋಣ

ಇಂದಿನ ಯುವಪೀಳಿಗೆ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ವ್ಯಸನಮುಕ್ತ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ರೋಣದ ಪ್ರಧಾನ ದಿವಾಣಿ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಹುಲುಗಪ್ಪ ಡಿ. ಕರೆ ನೀಡಿದರು.

ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ವಿ.ಎಂ. ನಾಡಗೌಡ ಕಾನೂನು ಮಹಾವಿದ್ಯಾಲಯ ಮತ್ತು ವಿ.ಆರ್.ಸಿ ಪಿ.ಯು ಕಾಲೇಜ, ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಕಾನೂನು ಸೇವಾ ದಿನ ಮತ್ತು ಮಾದಕ ವಸ್ತುಗಳ ವ್ಯಸನ ಮುಕ್ತ ಭಾರತ ಕುರಿತ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉಚಿತ ಮತ್ತು ಸಕಾಲಕ್ಕೆ ನ್ಯಾಯ ದೊರಕಿಸಿಕೊಡುವುದು ರಾಷ್ಟ್ರೀಯ ಕಾನೂನು ಸೇವಾ ದಿನದ ಮುಖ್ಯ ಉದ್ದೇಶವಾಗಿದೆ. ಆರ್ಥಿಕವಾಗಿ ಹಿಂದುಳಿದವರು ಕಾನೂನು ಸೇವಾ ಸಮಿತಿಯ ಉಚಿತ ನೆರವು ಹಾಗೂ ಲೋಕ ಅದಾಲತ್ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮುಖ್ಯವಾಗಿದೆ ಎಂದರು.

ವಕೀಲ ಎಂ.ಎಸ್. ಹಡಪದ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಗೆ ಇರುವ ಕಠಿಣ ಕಾನೂನು ಹಾಗೂ ಶಿಕ್ಷೆಗಳ ಕುರಿತು ಉಪನ್ಯಾಸ ನೀಡಿದರು.

ಡಾ. ಶ್ವೇತಾ ಹೊಸಳ್ಳಿ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ಯುವಕರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀರುತ್ತವೆ. ಜೀವಹಾನಿಯು ಆಗುವ ಸಾದ್ಯತೆ ಹೆಚ್ಚಿರುತ್ತದೆ. ಮಾದಕ ವ್ಯಸನಿಗಳು ಮಾನಸಿಕ ಸ್ಥಿಮಿತಿ ಕಳೆದುಕೊಂಡು ಎಲ್ಲರಿಂದಲೂ ದೂರವಿರುತ್ತಾರೆ. ಇದರಿಂದ ವ್ಯಕ್ತಿತ್ವಕ್ಕೆ ಹಾನಿಯಾಗುವುದು. ಆದ್ದರಿಂದ ಮಾದಕ ವ್ಯಸನದಿಂದ ದೂರವಿದ್ದು, ಸುಂದರ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.

ವಿ.ಆರ್.ಸಿ. ಪಿಯು ಕಾಲೇಜಿನ ಪ್ರಾಚಾರ್ಯ ಎಂ.ಎಸ್. ಗೌಡರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಧಿಕ ದಿವಾಣಿ ನ್ಯಾಯಾಧೀಶ ವಿಜಯಕುಮಾರ ಎನ್., ವಕೀಲರ ಸಂಘದ ಉಪಾಧ್ಯಕ್ಷೆ ವಿ.ಎಸ್. ಮಠದ, ಕಾರ್ಯದರ್ಶಿ ಎಂ.ಎಚ್. ಮುಲ್ಲಾ, ಸಿಡಿಪಿಒ ಲಲಿತಾ ಅಳವಂಡಿ, ಸಿಪಿಐ ವಿಜಯಕುಮಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಕಾನೂನು ಕಾಲೇಜ ಪ್ರಾಚಾರ್ಯ ಡಿ.ಬಿ. ನರಗುಂದ ಸ್ವಾಗತಿಸಿ, ವಂದಿಸಿದರು.