ಜಾತಿ, ಮತ, ಲಿಂಗ ತಾರತಮ್ಯ, ನ್ಯಾಯ ಹಾಗೂ ಸಾಮಾಜಿಕ ಸ್ವಾಸ್ಥ್ಯಗಳ ಕುರಿತು ಜನರಲ್ಲಿ ಅರಿವು ಮೂಡಿಸಬಲ್ಲ ಪ್ರಭಾವಿ ಮಾಧ್ಯಮಗಳಲ್ಲಿ ರಂಗಭೂಮಿ ಪ್ರಮುಖ ಸ್ಥಾನ ಹೊಂದಿದೆ ಎಂದು ಹಿರಿಯ ರಂಗಕಲಾವಿದ ಪ್ರೊ. ಮುರಳೀಧರ ಸಂಕನೂರ ತಿಳಿಸಿದರು.

ಗದಗ: ಹಿಂಸೆ, ಕ್ರೌರ್ಯ ಮತ್ತು ಯುದ್ಧಗಳಿಂದ ತುಂಬಿರುವ ಇಂದಿನ ಜಾಗತಿಕ ಪ್ರಕ್ಷುಬ್ಧ ಪರಿಸ್ಥಿತಿಯ ಸಂದರ್ಭದಲ್ಲಿ ಸಂವೇದನಾಶೀಲತೆ ಮತ್ತು ಸುಸಂಸ್ಕೃತ, ಸಾಂಸ್ಕೃತಿಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ರಂಗಭೂಮಿ ಇನ್ನಷ್ಟು ಕ್ರೀಯಾಶೀಲವಾಗಬೇಕಾಗಿದೆ ಎಂದು ಹಿರಿಯ ರಂಗಕಲಾವಿದ ಪ್ರೊ. ಮುರಳೀಧರ ಸಂಕನೂರ ತಿಳಿಸಿದರು.

ನಗರದ ಹೊಸಪೇಟ್ ಚೌಕ್ ಓಣಿಯಲ್ಲಿರುವ ಶ್ರೀಕಾಳಿಕಾದೇವಿ ದೇವಸ್ಥಾನದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಹಾಗೂ ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಸಹಯೋಗದಲ್ಲಿ ನಡೆದ ವಿಶ್ವರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಸಶಕ್ತ ಸಮಾಜ ಕಟ್ಟುವಲ್ಲಿ ರಂಗಭೂಮಿ ಪಾತ್ರ ವಿಷಯ ಕುರಿತು ಉಪನ್ಯಾಸ ನೀಡಿದರು.ಜಾತಿ, ಮತ, ಲಿಂಗ ತಾರತಮ್ಯ, ನ್ಯಾಯ ಹಾಗೂ ಸಾಮಾಜಿಕ ಸ್ವಾಸ್ಥ್ಯಗಳ ಕುರಿತು ಜನರಲ್ಲಿ ಅರಿವು ಮೂಡಿಸಬಲ್ಲ ಪ್ರಭಾವಿ ಮಾಧ್ಯಮಗಳಲ್ಲಿ ರಂಗಭೂಮಿ ಪ್ರಮುಖ ಸ್ಥಾನ ಹೊಂದಿದೆ. ಇಂತಹ ರಂಗ ಕಲೆಗೆ ಸರ್ಕಾರ, ಸಮಾಜ ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದರು.

ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಡಿ. ಕಡ್ಲಿಕೊಪ್ಪ ಮಾತನಾಡಿ, ನಾಡಿನ ರಂಗಭೂಮಿ ಕ್ಷೇತ್ರಕ್ಕೆ ಗದಗ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಇಂದಿನ ಪೀಳಿಗೆಯಲ್ಲಿ ರಂಗಾಸಕ್ತಿ ಕ್ಷೀಣಿಸುತ್ತಿರುವುದು ವಿಷಾದದ ಸಂಗತಿ. ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಮಕ್ಕಳಲ್ಲಿ ರಂಗಾಸಕ್ತಿ ಮೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

ಈ ವೇಳೆ ಹಿರಿಯ ರಂಗ ಸಾಧಕ ಕಲಾವಿದರಾದ ಬಸವರಾಜ ಶಿ. ಅಡವಳ್ಳಿ ಅವರಿಗೆ ರಂಗ ಗೌರವ ಹಾಗೂ ಚಿನ್ಮಯ ಕಲಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹಿರಿಯ ದೊಡ್ಡಾಟ ಕಲಾವಿದ ಪ್ರಕಾಶ ಬಡಿಗೇರ ಹಾಗೂ ವರವಿ ಮೌನೇಶ್ವರ ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ್‌ನ ನೂತನ ಸದಸ್ಯ ಶ್ರೀಧರ ಎಸ್. ಕೊಣ್ಣೂರ ಅವರನ್ನು ಸನ್ಮಾನಿಸಲಾಯಿತು. ರಂಗಕಲಾವಿದ ವಿಜಯಕುಮಾರ ಜಿತೂರಿ ಹಾಗೂ ತಂಡದವರು ರಂಗಗೀತ ಗಾಯನ ಪ್ರಸ್ತುತಪಡಿಸಿದರು.

ಬೆಟಗೇರಿ ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಶ್ರೀಧರ ಎಸ್. ಕೊಣ್ಣೂರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ರಂಗನಿರ್ದೇಶಕ ಫಣೀಂದ್ರಾಚಾರ್ಯ ದ್ಯಾಮೇನಹಳ್ಳಿ, ವಿಶ್ವನಾಥ ಕಮ್ಮಾರ, ಹಿರಿಯ ಸಾಹಿತಿ ಅಂದಾನೆಪ್ಪ ವಿಭೂತಿ, ಹಿರಿಯ ರಂಗಕಲಾವಿದರಾದ ಅಶೋಕ ಸುತಾರ, ಆರ್.ಎಚ್. ಕಬಾಡಿ, ಸುಭಾಷ ಮಳಗಿ, ಬಿ.ಎಲ್. ಪತ್ತಾರ, ಹನುಮಾನಸಿಂಗ್ ಬ್ಯಾಳಿ, ಉಜ್ವಲ್ ಕಬಾಡಿ, ಶಿವು ಭಜೆಂತ್ರಿ, ಗಿರೀಶ ಕಮ್ಮಾರ, ಕೊಟ್ರೇಶ ಲಕ್ಕುಂಡಿ, ಬಸವರಾಜ ಬಡಿಗೇರ, ನಾಗರಾಜ ಬಡಿಗೇರ, ಸತೀಶ ಹೊರಪೇಟೆ, ಮಹೇಶ ಕಮ್ಮಾರ, ಸುರೇಶ ಬಡಿಗೇರ ಸೇರಿದಂತೆ ಇತರರು ಇದ್ದರು.

ಸಾಕ್ಷಿ ಹುಯಿಲಗೋಳ ಪ್ರಾರ್ಥಿಸಿದರು. ರಂಗಕಲಾವಿದ ವಿಶ್ವನಾಥ ಬೇಂದ್ರೆ ಸ್ವಾಗತಿಸಿದರು. ರಂಗಕಲಾವಿದ ಮೌನೇಶ ಸಿ. ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಅಕ್ಕಸಾಲಿ ನಿರೂಪಿಸಿದರು. ಸತೀಶ ಹೊರಪೇಟಿ ವಂದಿಸಿದರು.