ಕೃಷಿಯ ಸಮಗ್ರ ಅಧ್ಯಯನ ನಡೆಯಲಿ

| Published : Nov 07 2023, 01:32 AM IST

ಸಾರಾಂಶ

ರೈತನು ಎದುರಿಸುತ್ತಿರುವ ಬಿಕ್ಕಟ್ಟನ್ನು ಸರಿಪಡಿಸಲು ಹಸಿರುಕ್ರಾಂತಿ ಘೋಷಣೆಯ ದಿನಗಳಿಂದ ಇಲ್ಲಿಯ ವರೆಗೆ ಕೃಷಿಯ ಸಮಗ್ರ ಅಧ್ಯಯನ ನಡೆಯಬೇಕಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ರೈತನು ಎದುರಿಸುತ್ತಿರುವ ಬಿಕ್ಕಟ್ಟನ್ನು ಸರಿಪಡಿಸಲು ಹಸಿರುಕ್ರಾಂತಿ ಘೋಷಣೆಯ ದಿನಗಳಿಂದ ಇಲ್ಲಿಯ ವರೆಗೆ ಕೃಷಿಯ ಸಮಗ್ರ ಅಧ್ಯಯನ ನಡೆಯಬೇಕಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯಪಟ್ಟರು.

ಪಶು ಸಂಗೋಪನಾ ಇಲಾಖೆಯಿಂದ 2023-24ನೇ ಸಾಲಿನ ಫಲಾನುಭವಿಗಳಿಗೆ ಶೇ. 50 ಸಹಾಯಧನದಲ್ಲಿ ಮೇವು ಕತ್ತರಿಸುವ ಯಂತ್ರ, ಹಸುಗಳಿಗೆ ರಬ್ಬರ್ ಮ್ಯಾಟ್ ಹಾಗೂ ಮೇವಿನ ಬೀಜಗಳನ್ನು ವಿತರಿಸಿ ಅವರು ಮಾತನಾಡಿದರು. ಭಾರತೀಯ ಕೃಷಿ ವಿವಿಧ ಸಮಸ್ಯೆಗಳಿಂದ ನಲುಗುತ್ತಿದೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನೂರಾರು ಸಮಸ್ಯೆಗಳು ಆತನ ಬೆನ್ನು ಬಿದ್ದಿದೆ. ಅದರಲ್ಲೂ ಪ್ರಮುಖವಾಗಿ ತಾಂತ್ರಿಕ ಸಂಪನ್ಮೂಲಗಳ ಕೊರತೆಯಿಂದ ರೈತರು ತಮ್ಮ ಜೀವನದಲ್ಲಿ ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದರು.ಕೃಷಿಯೂ ಸಹ ಧರ್ಮದ ಕೆಲಸವಾಗಿದ್ದು, ಭೂಮಿ ಮೇಲಿನ ಪ್ರಥಮ ಚಟುವಟಿಕೆ ಎಂದರೆ ತಪ್ಪಾಗಲಾರದು. ಆದರೆ ಪ್ರಾಕೃತಿಕ ಸಂಪನ್ಮೂಲಗಳಿಂದ ಕೃಷಿ ನಡೆಸಿಕೊಂಡು ಬಂದಿರುವ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದಾನೆ ಎಂದು ಶಿವಣ್ಣನವರ ಹೇಳಿದರು.

ಅರವತ್ತರ ದಶಕದಿಂದ ಇತ್ತೀಚೆಗೆ ಕೃಷಿಯಲ್ಲಿ ತಾಂತ್ರಿಕತೆ ಮತ್ತು ಯಾಂತ್ರಿಕತೆ ಅಳವಡಿಕೆಯಿಂದ ಕೃಷಿಯು ಉದ್ಯಮವಾಗುವತ್ತ ಹೆಜ್ಜೆಯಿಡಲು ಪ್ರಾರಂಭಿಸಿತು. ಹೈಬ್ರೀಡ್ ಬೀಜಗಳ ಬಳಕೆಯಿಂದ ನೀರು, ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಯಿತು. ಇದರಿಂದ ಕೃಷಿ ಉತ್ಪಾದನೆಯೇನೋ ಹೆಚ್ಚಾಯಿತು, ಅದರ ಜತೆಗೆ ಕೃಷಿ ಮೇಲಿನ ವೆಚ್ಚವೂ ಹೆಚ್ಚಾಯಿತು. ಕೃಷಿಕಾಯಕದಲ್ಲಿ ತೊಡಗಿದ ದೇಶದ ರೈತರು ಭಾರತಕ್ಕೆ ಆಹಾರ ಭದ್ರತೆ ನೀಡುವ ಜತೆಗೆ ವಿಶ್ವದಾದ್ಯಂತ ದೇಶಕ್ಕೆ ಅಂಟಿದ್ದ ಕಳಂಕವನ್ನು ದೂರ ಮಾಡಿದ್ದಾರೆ ಎಂದರು.

ಕೃಷಿಕ ಸಮಾಜದ ಅಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಎರಡೂ ಸರ್ಕಾರಗಳು ನಮ್ಮ ಕಣ್ಣುಗಳಿದ್ದಂತೆ. ಯಾವುದೇ ಕಾರಣಕ್ಕೂ ಒಬ್ಬರ ಮೇಲೊಬ್ಬರು ಕಾರಣ ನೀಡದೇ ರೈತರ ಆರ್ಥಿಕ ಸುಧಾರಣೆಗೆ ಒಟ್ಟಾಗಿ ಸಹಕರಿಸಿ ಅಗತ್ಯಗಳಿಗೆ ತಕ್ಕಂತೆ ನೆರವು ನೀಡಲು ಮುಂದಾಗಬೇಕಾಗಿದೆ. ಇದರಿಂದ ನಮ್ಮ ಜೀವನ ಮಟ್ಟ ಸುಧಾರಿಸಿದಲ್ಲಿ ನಾವು ಎಲ್ಲ ಸರ್ಕಾರಗಳಿಗೆ ಕೃತಜ್ಞರಾಗಿರುವುದಾಗಿ ತಿಳಿಸಿದರು.

40 ಫಲಾನುಭವಿಗಳಿಗೆ 2 ಎಚ್‌ಪಿ ಸಾಮರ್ಥ್ಯದ ಮೇವು ಕತ್ತರಿಸುವ ಯಂತ್ರ ಹಾಗೂ 25 ಫಲಾನುಭವಿಗಳಿಗೆ ರಬ್ಬರ್ ಮ್ಯಾಟ್‌ಗಳನ್ನು ಶಾಸಕರು ವಿತರಿಸಿದರು. ದಾನಪ್ಪ ಚೂರಿ, ಬಸವರಾಜ ಸಂಕಣ್ಣನವರ, ಪಶು ಇಲಾಖೆಯ ಪರಮೇಶ ಹುಬ್ಬಳ್ಳಿ, ಡಾ. ನಿಜಾಮುದ್ದೀನ್, ಎನ್.ಎಚ್. ಬಣಕಾರ, ನೀಲಕಂಠ ಕಲಶೆಟ್ಟಿ, ಬಸಪ್ಪ ದೊಡ್ಮನಿ, ಮಲ್ಕಾರಿ ನರೋಟೆ, ಎಸ್.ಬಿ. ಹೊಸಳ್ಳಿ, ಶಿವು ಗಿಡ್ಡಣ್ಣನವರ ಇನ್ನಿತರರಿದ್ದರು.