ಸಾರಾಂಶ
ಕದ್ರಳ್ಳಿಯಲ್ಲಿ ಅಂಗನವಾಡಿ ಉದ್ಘಾಟಿಸಿದ ಸಿಎಂ ಆರ್ಥಿಕ ಸಲಹೆಗಾರ
ಕನ್ನಡಪ್ರಭ ವಾರ್ತೆ ಕುಕನೂರು
ಅಂಗನವಾಡಿಯಲ್ಲಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಬೇಕು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.ತಾಲೂಕಿನ ಕದ್ರಳ್ಳಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಅಂಗನವಾಡಿಯಲ್ಲಿ ಮಕ್ಕಳಿಗೆ ಸರಿಯಾಗಿ ಪೌಷ್ಠಿಕ ಆಹಾರ ನೀಡಬೇಕು. ಅಂಗನವಾಡಿಗಳ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಬೇಕು. ಅಂಗನವಾಡಿ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳು ಎಂದು ಭಾವಿಸಬೇಕು ಎಂದರು.
ಕುದರಿಮೋತಿ, ಚಿಕ್ಕಬೀಡಿನಾಳ ಗ್ರಾಮದಲ್ಲಿ ಬೆಳೆ ಹಾನಿ ವೀಕ್ಷಣೆ ಮಾಡಿದರು. ಹಾನಿಯಾದ ಬೆಳೆಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಕೂಡಲೇ ಸಮೀಕ್ಷೆ ಮಾಡಿ ವರದಿ ಸಲ್ಲಿಸಬೇಕು. ಬೆಳೆ ಹಾನಿಯಾದ ರೈತರಿಗೆ ಪರಿಹಾರ ನೀಡಬೇಕು ಎಂದರು.ಯಲಬುರ್ಗಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಸುನಾಮಿಯಂತೆ ಜರುಗುತ್ತಿವೆ. ಕ್ಷೇತ್ರಕ್ಕೆ ಬೇಕಾದ ಕೆಲಸಗಳನ್ನು ಮಂಜೂರು ಮಾಡಿಸಿದ್ದೇನೆ. ಜನರು ಸಹ ನಾನಾ ಅಭಿವೃದ್ಧಿ ಕಾರ್ಯಕ್ಕೆ ಸಹಕಾರ ನೀಡಬೇಕು. ಜನರಿಗೆ ಅವಶ್ಯಕವಾದ ಯಾವುದೇ ಜನಹಿತ ಕಾರ್ಯವಿದ್ದಲ್ಲಿ ನನ್ನ ಗಮನಕ್ಕೆ ತನ್ನಿ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳೋಣ. ಕ್ಷೇತ್ರದಲ್ಲಿ ಅತೀ ಹೆಚ್ಚು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿವೆ. ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳನ್ನು ಮಂಜೂರು ಮಾಡಿಸಿ ಆರಂಭಿಸಿದ್ದೇನೆ. ಶೈಕ್ಷಣಿಕವಾಗಿ ಕ್ಷೇತ್ರದ ಮಕ್ಕಳು ಅಭಿವೃದ್ಧಿ ಆಗಬೇಕು ಎಂಬ ಉದ್ದೇಶದಿಂದ ಶೈಕ್ಷಣಿಕ ರಂಗಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇನೆ ಎಂದರು.
ತಾಪಂ ಇಒ ಸಂತೋಷ ಬಿರಾದಾರ, ತಹಸೀಲ್ದಾರ ಎಚ್. ಪ್ರಾಣೇಶ, ಸಿಡಿಪಿಒ ಬೆಟದೇಶ ಹಾಗೂ ಮುಖಂಡರಿದ್ದರು.