ಇಂದು ಮಕ್ಕಳ ಸಾಹಿತ್ಯ ಎಂದಿಗಿಂತ ಹುಲಸಾಗಿ ಬರುತ್ತಿದೆ. ಆದರೆ, ಅವು ಮಕ್ಕಳ ಕೈಗೆ ತಲುಪಿಸುವಲ್ಲಿ ಮತ್ತು ಓದಿ ಹೇಳಿಸುವಲ್ಲಿ ಸಾಧ್ಯವಾಗುತ್ತಿಲ್ಲ. ಲೇಖಕ ಒಂದು ಕೃತಿ ಹೊರಬಂದರೆ ತೃಪ್ತಿ ಪಡದೇ ಆ ಕೃತಿಯನ್ನು ಹೆಚ್ಚು ಮಕ್ಕಳು ಓದಿದಾಗ ಮಾತ್ರ ತೃಪ್ತಿಪಡುವಂತಾಗಬೇಕು.

ಧಾರವಾಡ:

ಮಕ್ಕಳಲ್ಲಿ ಕಲ್ಪನಾ ಲೋಕ ಬೆಳೆಸಿದಾಗಲೇ ಮುಂದೆ ಅವರು ಸಾಹಿತಿಗಳಾಗಿ ರೂಪಗೊಳ್ಳುವರು. ಹಾಗೆಯೇ ಮಕ್ಕಳಿಗೆ ಓದುವ ಅಭಿರುಚಿಯೂ ಇರಲಿ ಎಂದು ಸಾಹಿತಿ ಡಾ. ಬಸು ಬೇವಿನಗಿಡದ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಚಿಲಿಪಿಲಿ ಪ್ರಕಾಶನದಿಂದ ಬೈಲಹೊಂಗಲದ ಶಕುಂತಲಾ ಪಿ. ಹಿರೇಮಠ ರಚಿಸಿದ ಮಕ್ಕಳ ಕಾದಂಬರಿ `ಚಿಗುರಿದ ಕನಸು’ ಕೃತಿ ಬಿಡುಗಡೆ ಮಾಡಿದ ಅವರು, ಮಗು ಎಂದರೆ ಮನೆಯ ದೀಪ. ದೀಪಕ್ಕೆ ಪ್ರಜ್ವಲಿಸಲು ಎಣ್ಣೆ ಬೇಕಾಗುತ್ತದೆ. ಹಾಗೆಯೇ ಮಗು ಮಾನಸಿಕವಾಗಿ ಬೆಳೆಯಬೇಕೆಂದರೆ ಪಾಲಕರು ಒಳ್ಳೆಯ ಮಾರ್ಗದರ್ಶನ ನೀಡಬೇಕು. ಆಗಲೇ ಮಗು ಭವಿಷ್ಯದಲ್ಲಿ ಮನೆಗೆ ಬೆಳಕಾಗಿ ನಿಲ್ಲುವನು ಎಂದರು.

ಕೃತಿ ಪರಿಚಯಿಸಿದ ಮಕ್ಕಳ ಸಾಹಿತಿ ವೈ.ಜಿ. ಭಗವತಿ, ಮಕ್ಕಳ ಸಾಹಿತ್ಯದಲ್ಲಿ ಬಹಳಷ್ಟು ಬದಲಾವಣೆ ಕಾಣುತ್ತಿದ್ದೇವೆ. ವಿಶೇಷವಾಗಿ ಮಹಿಳೆಯರು ಮಕ್ಕಳಿಗಾಗಿ ಬರೆಯಲು ಮುಂದೆ ಬರುತ್ತಿರುವುದು ಸಂತಸದಾಯಕ. ಕಥೆ, ಕವಿತೆ ಬರೆಯಬಹುದು, ಆದರೆ, ಕಾದಂಬರಿ ಬರೆಯುವುದು ಕಷ್ಟಕರ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಚಿಲಿಪಿಲಿ ಪ್ರಕಾಶನದ ಶಂಕರ ಹಲಗತ್ತಿ, ಇಂದು ಮಕ್ಕಳ ಸಾಹಿತ್ಯ ಎಂದಿಗಿಂತ ಹುಲಸಾಗಿ ಬರುತ್ತಿದೆ. ಆದರೆ, ಅವು ಮಕ್ಕಳ ಕೈಗೆ ತಲುಪಿಸುವಲ್ಲಿ ಮತ್ತು ಓದಿ ಹೇಳಿಸುವಲ್ಲಿ ಸಾಧ್ಯವಾಗುತ್ತಿಲ್ಲ. ಲೇಖಕ ಒಂದು ಕೃತಿ ಹೊರಬಂದರೆ ತೃಪ್ತಿ ಪಡದೇ ಆ ಕೃತಿಯನ್ನು ಹೆಚ್ಚು ಮಕ್ಕಳು ಓದಿದಾಗ ಮಾತ್ರ ತೃಪ್ತಿಪಡುವಂತಾಗಬೇಕು. ಇಂದು ಮಕ್ಕಳಲ್ಲಿ ಪಠ್ಯೇತರ ಸಾಹಿತ್ಯವನ್ನು ಓದುವುದಕ್ಕೆ ಅವಕಾಶ ಇಂದಿನ ಕಲಿಕೆಯ ವೇಳಾ ಪಟ್ಟಿಯಲ್ಲಿ ಇಲ್ಲದಾಗಿದೆ. ಪಠ್ಯ ಪುಸ್ತಕಕ್ಕೆ ಮಾತ್ರ ಮಕ್ಕಳು ಸೀಮಿತವಾಗುವಂತೆ ಮಾಡಲಾಗಿದೆ. ಇದು ಬದಲಾಗದೆ ಹೋದರೆ ಮಕ್ಕಳ ಸಾಹಿತ್ಯಕ್ಕೆ ಗೌರವ ದೊರಕುವುದಿಲ್ಲ ಎಂದರು.ಶಕುಂತಲಾ ಹಿರೇಮಠ ಮಾತನಾಡಿದರು. ಶ್ರೀಧರ ಗಸ್ತಿ ನಿರೂಪಿಸಿದರು. ಸಿದ್ದರಾಮ ಹಿಪ್ಪರಗಿ, ಡಾ. ಚಂದ್ರಶೇಖರ ರೊಟ್ಟಿಗವಾಡ, ಶಿವಾನಂದ ಭಜಂತ್ರಿ ಇದ್ದರು.