2018ರ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಮತದಾರರ ಸಂಖ್ಯೆಯಲ್ಲಿ ಅಸಹಜ ಏರಿಕೆ ಕಂಡುಬಂದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಈ ಬಗ್ಗೆ ಲೋಕಾಯುಕ್ತ ಹಾಗೂ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
2018ರ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಮತದಾರರ ಸಂಖ್ಯೆಯಲ್ಲಿ ಅಸಹಜ ಏರಿಕೆ ಕಂಡುಬಂದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಈ ಬಗ್ಗೆ ಲೋಕಾಯುಕ್ತ ಹಾಗೂ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ತಿಳಿಸಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆಯ ಶೇ.80ರಷ್ಟು ಕೆಲಸ ಪೂರ್ಣಗೊಂಡಿದೆ. ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಡೆಸಿದ ಪಾಲಿಕೆ ಆಯುಕ್ತರು, ಬಿಎಲ್‌ಒಗಳು ಹಾಗೂ ಬಿಎಲ್‌ಎಗಳ ಶ್ರಮ ಶ್ಲಾಘನೀಯ. ಪಕ್ಷದ ಪರವಾಗಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ರಾಷ್ಟ್ರಭಕ್ತರ ಬಳಗದವರು ಫಾರಂ ನಂ.6 ಪಡೆದು ಮತದಾರರ ಪಟ್ಟಿಯಲ್ಲಿನ ಲೋಪಗಳನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ. ಅದನ್ನು ಸ್ವಾಗತಿಸುತ್ತೇವೆ. ಚುನಾವಣೆ ಪ್ರತಿಯೊಬ್ಬರ ಹಕ್ಕು. ಅದನ್ನು ನ್ಯಾಯಯುತವಾಗಿ ನಡೆಸುವುದು ಎಲ್ಲರ ಕರ್ತವ್ಯ ಎಂದರು.2013ರಲ್ಲಿ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಸುಮಾರು 2,15,937 ಲಕ್ಷ ಮತದಾರರಿದ್ದರು. 2018ರಲ್ಲಿ ಈ ಸಂಖ್ಯೆ 2,56,373ಕ್ಕೆ ಏರಿಕೆಯಾಗಿದೆ. ಐದು ವರ್ಷಗಳಲ್ಲಿ ಸುಮಾರು 40,436 ಸಾವಿರ ಮತದಾರರು ಹೆಚ್ಚಾಗಿರುವುದು ಅನುಮಾನಕ್ಕೆ ಕಾರಣವಾಗಿತ್ತು. 2023ರಲ್ಲಿ ಮತದಾರರ ಸಂಖ್ಯೆ 2,60,757 ಏರಿಕೆ ಆಗಿದೆ. ಒಟ್ಟಾರೆಯಾಗಿ 2013 ಮತ್ತು 2018ರ ನಡುವೆ 40,436 ಸಾವಿರ ಮತದಾರರು ಹೆಚ್ಚಾಗಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದರು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ 9,181 ಮೃತ ಮತದಾರರ ಹೆಸರುಗಳನ್ನು, ಶಾಶ್ವತವಾಗಿ ವಿಳಾಸ ಬದಲಿಸಿರುವ 29,962 ಮತದಾರರ ಹೆಸರುಗಳನ್ನು ಹಾಗೂ 5 ಸಾವಿರಕ್ಕೂ ಹೆಚ್ಚು ನಕಲಿ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಒಟ್ಟಾರೆ 56,432 ಮತಗಳನ್ನು ಎಸ್‌ಐಆರ್‌ನಲ್ಲಿ ಅಳಿಸಲಾಗಿದೆ ಎಂದು ಹೇಳಿದರು.ಯಾರೊಬ್ಬರ ಮತದಾನದ ಹಕ್ಕು ಕಸಿದುಕೊಳ್ಳಬಾರದು. ಅದೇ ರೀತಿ ಅನರ್ಹರನ್ನು ಯಾರದ್ದೋ ಒತ್ತಡಕ್ಕೆ ಮಣಿದು ಮತದಾರರ ಪಟ್ಟಿಗೆ ಸೇರಿಸಬಾರದು. 2018ರಲ್ಲಿ ನಗರ ಕ್ಷೇತ್ರದಲ್ಲಿ ಬಂದವರನ್ನೆಲ್ಲ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂಬ ಅನುಮಾನವಿದೆ. ಈ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿಯೂ ಇದೇ ರೀತಿಯ ಅಕ್ರಮ ನಡೆದಿದೆ ಎಂಬ ಅನುಮಾನವಿದ್ದು, 2013ರ ಮತದಾರರ ಸಂಖ್ಯೆ ಹಾಗೂ ಪ್ರಸ್ತುತ ಸಂಖ್ಯೆಯ ನಡುವಿನ ವ್ಯತ್ಯಾಸದ ಕುರಿತು ತನಿಖೆ ನಡೆಸಬೇಕು. ಈ ಸಂಬಂಧ ಲೋಕಾಯುಕ್ತ, ಮುಖ್ಯಮಂತ್ರಿ ಹಾಗೂ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ನಗರಾಧ್ಯಕ್ಷ ದೀಪಕ್ ಸಿಂಗ್, ಪ್ರಮುಖರಾದ ಡಾ.ಕಡಿದಾಳ್ ಗೋಪಾಲ್, ಗಂಧದಮನೆ ನರಸಿಂಹ, ತ್ಯಾಗರಾಜ್, ಸಂಗಯ್ಯ, ಉಮಾಶಂಕರ್ ಉಪಾಧ್ಯ, ಬೊಮ್ಮನಕಟ್ಟೆ ಮಂಜುನಾಥ್, ರಘು, ಚಂದ್ರಮತಿ, ದಯಾನಂದ್, ಗೋಪಿ ಮೊದಲಿಯಾರ್, ಕಶ್ಯಪ್ ಇನ್ನಿತರರು ಇದ್ದರು.
ದೊಡ್ಡ ಮಟ್ಟದ ಗುಂಪಿನ ಕೈವಾಡವಿದೆಇತ್ತೀಚಿನ ಎಸ್‌ಐಆರ್ ಪ್ರಕ್ರಿಯೆಯಲ್ಲಿ 56,432 ಮತಗಳು ವಿವಿಧ ಕಾರಣದಿಂದ ಅಳಿಸಿ ಹೋಗಿದೆ. 9,187 ಮತದಾರರು ಮರಣ ಹೊಂದಿದ್ದಾರೆ. 5,719 ಮತಗಳು ನಕಲಿ ಆಗಿವೆ. 1,800 ಮತದಾರರಿಗೆ ಮಾಹಿತಿ ಕೋರಿ ನೋಟಿಸ್ ನೀಡಲಾಗಿದೆ. ಹಾಗಾದರೆ 29,962 ಮತಗಳು ಎಲ್ಲಿಗೆ ಹೋದವು?. 2018 ರಲ್ಲಿ ನಾನು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದೆ. ಶಿವಮೊಗ್ಗ ಮತ್ತು ಚಾಮುಂಡೇಶ್ವರ ಕ್ಷೇತ್ರ ಸೇರಿದಂತೆ ರಾಜ್ಯದ ಪ್ರಮುಖ ಕೆಲವು ಕ್ಷೇತ್ರಗಳಲ್ಲಿ ಬಾರಿ ವ್ಯತ್ಯಾಸ ಕಂಡು ಬಂದಿದೆ. ಇತ್ತೀಚಿಗೆ ಸಂಘಟನೆಯೊಂದು ಫಾರಂ ನಂ.6 ನೀಡಿ ಮತದಾರರನ್ನು ಸೇರ್ಪಡೆಗೊಳಿಸುವ ಪ್ರಕ್ರಿಯೆಗೆ ಕೈ ಹಾಕಿದೆ. ಆದರೆ, ನಗರದ ಮತದಾರರಲ್ಲದವರನ್ನು ಯಾವುದೇ ಒತ್ತಡಕ್ಕೆ ಮಣಿದು ಚುನಾವಣಾ ಸಿಬ್ಬಂದಿ ಸೇರಿಸಬಾರದು. ಈ ಸೇರ್ಪಡೆ ಪ್ರಕ್ರಿಯೆಯಲ್ಲಿ ದೊಡ್ಡವರ ದೊಡ್ಡ ಮಟ್ಟದ ಗುಂಪಿನ ಕೈವಾಡವಿದೆ. ಇದು ತನಿಖೆಯಾಗಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಆಗ್ರಹಿಸಿದರು.