ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮನ್ವಿತ್ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿ, ನೌಕರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದಸಂಸ ಜಿಲ್ಲಾ ಸಂಚಾಲಕ ಸಿ.ರಾಜಣ್ಣ ಯರಿಯೂರು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರ ಅವರು, ಇದಕ್ಕೆ ಸಂಬಂಧಪಟ್ಟಂತೆ ಅಲ್ಲಿನ ಪ್ರಾಂಶುಪಾಲರು, ವಾರ್ಡನ್ ಹಾಗೂ ಸೆಕ್ಯೂರಿಟಿಯನ್ನು ಸೇವೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿದರು. ಡಿ.೩೧ರ ಮಂಗಳವಾರ ಮಧ್ಯ ರಾತ್ರಿ ಮನ್ವಿತ್ ಕೌಂಪೌಂಡ್ ಮೇಲಿಂದ ಬಿದ್ದು ಪ್ರಜ್ಞೆ ತಪ್ಪಿದ್ದು ಆತನಿಗೆ ಚಿಕಿತ್ಸೆ ಕೊಡಿಸುವ ಪ್ರಯತ್ನವನ್ನು ಬೆಳಗ್ಗೆ 8ರತನಕ ಇಲ್ಲಿನ ಪ್ರಾಂಶುಪಾಲರಾಗಲಿ, ವಾರ್ಡನ್, ಅಡುಗೆಯವರು, ಸೆಕ್ಯೂರಿಟಿಗಳಾಗಲಿ ಮಾಡಿಲ್ಲ. ವಸತಿ ಶಾಲೆಯ ಅಧಿಕಾರಿಗಳು ಬೆಳಗ್ಗೆ ೮ ಗಂಟೆಯ ತನಕ ಮೇಲಧಿಕಾರಿಗಳಿಗಾಗಲಿ ಸಮೀಪದ ಪೊಲೀಸ್ ಠಾಣೆಗೆ ತಿಳಿಸಿರುವುದಿಲ್ಲ. ಮೌನ ವಹಿಸಿದ್ದು ಏಕೆ? ಇದು ಬೇರೆ ರೀತಿಯ ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ ಎಂದರು.
ಮೈಸೂರಿನ ಅಪೊಲೋ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮನ್ವಿತ್ ಮರಣ ಹೊಂದಿರುತ್ತಾನೆ. ಈ ಪ್ರಕರಣ ಜಿಲ್ಲೆಯ ವಸತಿ ಶಾಲೆಗಳ ಮಕ್ಕಳಲ್ಲಿ ಮತ್ತು ಪೋಷಕರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದೆ. ಈ ಕೂಡಲೇ ಜಿಲ್ಲಾಧಿಕಾರಿ ಈ ಪ್ರಕರಣವನ್ನು ಶೀಘ್ರ ತನಿಖೆಗೆ ಒಳಪಡಿಸಿ ಸಂಬಂಧಪಟ್ಟ ವಸತಿ ಶಾಲೆಯ ಅಧಿಕಾರಿ ನೌಕರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಮತ್ತು ತನಿಖೆಗೆ ಅವಕಾಶವಾಗುವಂತೆ ಈ ಕೂಡಲೇ ಸೆಕ್ಯೂರಿಟಿಗಳನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದರು.ಜಿಲ್ಲೆಯ ಮೊರಾರ್ಜಿ ಶಾಲೆಗಳಲ್ಲಿ ಹಲವಾರು ಸಮಸ್ಯೆಗಳಿದ್ದು ಅಲ್ಲಿನ ಪ್ರಾಂಶುಪಾಲರು, ವಾರ್ಡನ್‌ಗಳು, ಅಡುಗೆಯವರು, ಕಾವಲುಗಾರರು ಸಮನ್ವಯ ಕೊರತೆಯಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದ್ದು, ಕೇಂದ್ರ ಸರ್ಕಾರದ ವಸತಿ ಶಾಲೆಗಳ ಆಡಳಿತಾತ್ಮಕ ಕ್ರಮ ಜಾರಿ ಮಾಡುವುದರ ಮೂಲಕ ಮಕ್ಕಳ ಪ್ರಾಣ, ಮಾನ ಹಾನಿಯಾಗದಂತೆ ತಡೆಗಟ್ಟುವಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಮಹತ್ತರ ಪಾತ್ರ ವಹಿಸಬೇಕಾಗಿದೆ ಎಂದರು.
ಹಿಂದೆ ನಡೆದಿರುವ ಎಲ್ಲ ಘಟನೆಗಳಿಗೂ ಇವರೆ ಹೊಣೆಗಾರರಾಗಿರುತ್ತಾರೆ. ಕಳೆದ ವಾರ ಮೇಲುಕಾಮನಹಳ್ಳಿ ಮೂರಾರ್ಜಿ ವಸತಿ ಶಾಲೆಯಲ್ಲಿ ಶಿಕ್ಷಕರು, ಪ್ರಾಂಶುಪಾಲರು, ದ್ವಿತೀಯ ದರ್ಜೆ ಸಹಾಯಕರು, ವಿದ್ಯಾರ್ಥಿಗಳು, ಒಬ್ಬರಿಗೊಬ್ಬರು ಆರೋಪ, ಪ್ರತ್ಯಾರೋಪ ಮಾಡಿ, ಬೀದಿ ರಂಪ ದಾಖಲಾಗಿದ್ದು ಪೊಕ್ಸೋ ಪ್ರಕರಣ ದಾಖಲಾಗಿದೆ. ಈ ಯಡವನಹಳ್ಳಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ಯಾವಗಲೂ ಎಡವಟ್ಟುಗಳೇ ಜಾಸ್ತಿ. ಈ ಹಿಂದೆ ಕಲುಷಿತ ಆಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥರಾದ ಪ್ರಕರಣ ದಾಖಲಾಗಿ ಅಲ್ಲಿನ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿತ್ತು. ಇಂತಹ ಇನ್ನೂ ಹಲವಾರು ಪ್ರಕರಣಗಳು ಈ ವಸತಿ ಶಾಲೆಯಲ್ಲಿ ನಡೆಯುತ್ತಾ ಬಂದಿದ್ದರೂ ಜಿಲ್ಲಾಧಿಕಾರಿ ಆಗಲಿ ಹಾಗೂ ಕ್ರೈಸ್ಟ್ ಸಂಸ್ಥೆಯ ಮುಖ್ಯಾಧಿಕಾರಿ ಆಗಲಿ ಸರಿಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದರು.ಪೋಷಕರು ತಮ್ಮ ಮಕ್ಕಳನ್ನು ವಸತಿ ನಿಲಯದ ಅಧಿಕಾರಿಗಳ ಜವಾಬ್ದಾರಿಗೆ ಬಿಟ್ಟು ನೆಮ್ಮದಿಯಿಂದ ಇದ್ದಾರೆ ಎಂದರೆ ಅವರಿಗೆ ನಿಮ್ಮ ಮೇಲೆ ಎಷ್ಟು ನಂಬಿಕೆ, ಗೌರವ ಇದೆ ಎಂದು ತಿಳಿಯಬೇಕು. ಶಿಸ್ತು, ಉತ್ತಮವಾದ ಶಿಕ್ಷಣ ದೊರೆಯುತ್ತದೆ ಎಂಬ ಉದ್ದೇಶಕ್ಕಾಗಿ ವಸತಿ ಶಾಲೆಗಳಿಗೆ ಸೇರಿಸುತ್ತಾರೆ. ಆದರೆ ಇಲ್ಲಿ ಕೆಲಸ ಮಾಡುವವರಿಗೆ ಮಾತ್ರ ವೃತ್ತಿಯಲ್ಲಿ ಬದ್ಧತೆಯಿಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ, ರಂಗಸ್ವಾಮಿ ನಂಜುಂಡಸ್ವಾಮಿ, ಶಿವಕುಮಾರ್, ಶಾಂತರಾಜು ಇದ್ದರು.