ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಹಾರ ನೀಡಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಮೊಟ್ಟೆ ತಿನ್ನುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮೊಟ್ಟೆ ತಿನ್ನುವ ಮೂಲಕ ಪ್ರತಿಭಟನೆ ನಡೆಸಿ ಬೇಳೆಯ ಜೊತೆ ಮೂಳೆಯು ಇರಲಿ, ಹಪ್ಪಳದ ಜೊತೆ ಕಬಾಬ್ ಇರಲಿ, ಕೊಸಂಬರಿ ಜೊತೆ ಎಗ್ ಬುರ್ಜಿ ಇರಲಿ, ಮುದ್ದೆ ಜೊತೆ ಜೊತೆ ಬೋಟಿ ಇರಲಿ ಎಂದು ಘೋಷಣೆ ಕೂಗಿದರು.
ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಆದರೆ, ಸಮ್ಮೇಳನದ ವಾಣಿಜ್ಯ ಮಳಿಗೆಗಳಲ್ಲಿ ಮಾಂಸಾಹಾರಕ್ಕೆ ನಿಷೇಧ ವಿಧಿಸಿ ಸಮ್ಮೇಳನಕ್ಕೆ ಆಗಮಿಸುವ ಲಕ್ಷಾಂತರ ಜನತೆಗೆ ಸಸ್ಯಾಹಾರ ನೀಡಲು ಮುಂದಾಗಿರುವುದು ಜನರ ಆಹಾರದ ಹಕ್ಕನ್ನು ಉಲ್ಲಂಘಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮಂಡ್ಯ ಜಿಲ್ಲೆಯ ಹಬ್ಬ, ಸಂಭ್ರಮ, ಸಮ್ಮೇಳನಗಳು ಮಾಂಸಾಹಾರಿ ಊಟೋಪಚಾರಕ್ಕೆ ಹೆಸರುವಾಸಿಯಾಗಿವೆ. ಸಮ್ಮೇಳನದಲ್ಲಿ ಭಾಗವಹಿಸುವ ಬಹುಸಂಖ್ಯಾತರು ಮಾಂಸಾಹಾರಿಗಳೇ ಆಗಿದ್ದಾರೆ. ಸಮ್ಮೇಳನದಲ್ಲಿ ಮಾಂಸಾಹಾರಕ್ಕೆ ಬೇಡಿಕೆ ಏಕೆ ಎಂದು ಪ್ರಶ್ನಿಸುವುದೇ ಸರಿಯಲ್ಲ ಎಂದು ದೂರಿದರು.ಸಾಹಿತ್ಯ ಸಮ್ಮೇಳನದ ವಾಣಿಜ್ಯ ಮಳಿಗೆಗಳಲ್ಲಿ ಮಾಂಸಾಹಾರದ ಮಾರಾಟಕ್ಕೆ ವಿಧಿಸಿರುವ ನಿರ್ಬಂಧ ತೆಗೆದುಹಾಕಿ ಮುಕ್ತ ಅವಕಾಶ ಒದಗಿಸಬೇಕು. ಊಟದಲ್ಲಿ ಸಸ್ಯಾಹಾರ ಊಟದ ಜೊತೆಗೆ ಎಲ್ಲರೂ ತಿನ್ನಬಹುದಾದ ಕೋಳಿ ಮಾಂಸ, ಮೊಟ್ಟೆಯನ್ನು ಕಡ್ಡಾಯವಾಗಿ ನೀಡಬೇಕು ಎಂದು ಒತ್ತಾಯಿಸಿದರು.
ಸಮ್ಮೇಳನದಲ್ಲಿ ಮಾಂಸದೂಟಕ್ಕೆ ಅವಕಾಶ ನೀಡದಿದ್ದರೆ ಸಾರ್ವಜನಿಕರಿಂದ ಕೋಳಿ, ಮೊಟ್ಟೆ ಮತ್ತು ಪಡಿತರ ಸಂಗ್ರಹಿಸಿ ಮಾಂಸಾಹಾರ ವಿತರಿಸುವ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಸಿ.ಕುಮಾರಿ, ಎ.ಎಲ್.ಕೃಷ್ಣೇಗೌಡ, ನಾಗಣ್ಣಗೌಡ, ಎಲ್.ಸಂದೇಶ್, ಎಚ್.ಡಿ.ಜಯರಾಮ್, ಎಂ.ವಿ.ಕೃಷ್ಣ, ಬಿ.ಟಿ.ವಿಶ್ವನಾಥ್, ಗಂಗರಾಜು, ನಿರಂಜನ್, ಟಿ.ಡಿ.ನಾಗರಾಜ್, ನರಸಿಂಹಮೂರ್ತಿ, ಲಂಕೇಶ್ ಮಂಗಲ, ಲಕ್ಷ್ಮಣ್ ಚೀರನಹಳ್ಳಿ ಹಲವರು ಭಾಗವಹಿಸಿದ್ದರು.