ಸಾರಾಂಶ
ಬೆಂಗಳೂರು : ದ್ರಾವಿಡ ಕುಲಕ್ಕೆ ಸೇರಿದ ಕನ್ನಡಿಗರು ಮತ್ತು ತಮಿಳರ ನಡುವೆ ಎಂದಿಗೂ ಸಾಮರಸ್ಯ ಇರಬೇಕು. ನಮ್ಮಲ್ಲಿ ಯಾವುದೇ ಭೇದ ಸಲ್ಲದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಭಾನುವಾರ ಅರಮನೆ ಮೈದಾನದಲ್ಲಿ ಮಾತೃಭಾಷಾ ಒಕ್ಕೂಟದಿಂದ ಕರ್ನಾಟಕ ಕನ್ನಡಿಗರು ಹಾಗೂ ತಮಿಳರು ಸಾಂಸ್ಕೃತಿಕ ಮತ್ತು ಒಗ್ಗಟ್ಟಿನ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡಿಗರು ಸಾಮರಸ್ಯತೆಯನ್ನು ಬಯಸುತ್ತಾರೆ. ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಮಿಳರು ಮತ್ತು ಕನ್ನಡಿಗರ ನಡುವೆ ಬಾಂಧವ್ಯ ಗಟ್ಟಿಗೊಳಿಸಿದ್ದೆವು. ಹಲಸೂರಿನಲ್ಲಿ ನನೆಗುದಿಗೆ ಬಿದ್ದಿದ್ದ ತಿರುವಳ್ಳವರ್ ಪ್ರತಿಮೆ ಯೋಜನೆ ಮುಗಿಸಿ ಎರಡೂ ಭಾಷಿಕರ ನಡುವೆ ಭಾತೃತ್ವ ಮೂಡಿಸಿದ್ದೆವು. ಆಗಿನ ಮುಖ್ಯಮಂತ್ರಿ ಕರುಣಾನಿಧಿ ಜತೆ ಮಾತನಾಡಿ ಚೆನ್ನೈನಲ್ಲಿ ಸರ್ವಜ್ಞರ ಪ್ರತಿಮೆ ನಿರ್ಮಿಸಲು ಕೋರಿದ್ದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಪ್ರತಿ ಬಾರಿಯೂ ಕರ್ನಾಟಕದಲ್ಲಿರುವ ತಮಿಳರ ಏಳಿಗೆಗೆ ಪ್ರಯತ್ನಿಸಿದ್ದೆ. ಕನ್ನಡ ಮತ್ತು ತಮಿಳು ಭಾಷಿಕರ ನಡುವೆ ಉತ್ತಮ ಬಾಂಧವ್ಯ ಸೃಷ್ಟಿಸಿದ್ದೆ. ಮುಂದೆಯೂ ಅದೇ ರೀತಿ ಇರಲು ಬಯಸುವೆ ಎಂದು ಹೇಳಿದರು.
ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ, ದ್ರಾವಿಡ ಭಾಷಾ ಪ್ರದೇಶಗಳ ಮೇಲೆ ಹಿಂದಿ ಹೇರಿಕೆ ದಬ್ಬಾಳಿಕೆ ವಿರುದ್ಧ ದಕ್ಷಿಣ ಭಾರತದ ಜನರು, ರಾಜಕಾರಣಿಗಳು ಧ್ವನಿ ಎತ್ತಬೇಕು ಕನ್ನಡ, ತಮಿಳು ತೆಲುಗು, ಮಲಯಾಳಂ ಸೇರಿದಂತೆ ಇವೆಲ್ಲ ದ್ರಾವಿಡ ಮೂಲದಿಂದ ಬಂದ ಭಾಷೆಗಳು. ನಮ್ಮ ವಿರೋಧ ಇರಬೇಕಾದುದು ಕೇವಲ 650 ವರ್ಷ ಇತಿಹಾಸವಿರುವ ಹಿಂದಿಯನ್ನು ರಾಷ್ಟ್ರಭಾಷೆ ಎನ್ನುವುದಾದರೆ 2300 ವರ್ಷ ಇತಿಹಾಸವುಳ್ಳ ಕನ್ನಡ, ತಮಿಳು, ತೆಲುಗು ರಾಷ್ಟ್ರಭಾಷೆ ಯಾಕಾಗಬಾರದು ಎಂದು ಅವರು ಪ್ರಶ್ನಿಸಿದರು.
ಕನ್ನಡ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್. ಜಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕನ್ನಡ ಕವಿಗೋಷ್ಠಿ ನಡೆದರೆ, ಬಾಬು ಶಶಿಧರನ್ ಅವರು ತಮಿಳು ಕವಿಗೋಷ್ಠಿ ನಡೆಸಿದರು. ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್, ಕೊಡಗು ಶಾಸಕ ಡಾ। ಮಂಥರ್ ಗೌಡ, ಮಡಿಕೇರಿ ಶಾಸಕ ಎ.ಎಸ್.ಪೊನ್ನಣ್ಣ, ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್, ರಾಜ್ಯಸಭಾ ಮಾಜಿ ಸದಸ್ಯ ಎಲ್.ಹನುಮಂತಯ್ಯ ಇದ್ದರು.
ನಿರ್ಣಯಗಳು
ಭಾಷೆ, ನೆಲ, ಜಲ, ಗಡಿ ವಿಚಾರದಲ್ಲಿ ಕನ್ನಡಿಗರು ಕೈಗೊಳ್ಳುವ ಎಲ್ಲ ಪ್ರಯತ್ನಗಳಲ್ಲಿಯು ಕರ್ನಾಟಕದ ತಮಿಳರು ಕನ್ನಡಿಗರಿಗೆ ಬೆಂಬಲವಾಗಿರುತ್ತಾರೆ. ಕರ್ನಾಟಕದಲ್ಲಿ ಪ್ರದರ್ಶಿಸಲ್ಪಡುವ ಯಾವುದೇ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಇರಬೇಕು. ರಾಜ್ಯದ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಸಿಗಬೇಕು. ಕರ್ನಾಟಕದಲ್ಲಿರುವ ಕೇಂದ್ರೀಯ ವಿದ್ಯಾಲಯಗಳಲ್ಲಿ ಹಾಗೂ ಕೇಂದ್ರ ಸರ್ಕಾರದ ಆಡಳಿತದಲ್ಲಿರುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಕನ್ನಡದ ಪಾಠವನ್ನು ಕಡ್ಡಾಯವಾಗಿ ಜಾರಿಗೆ ತರಬೇಕು. ಬ್ಯಾಂಕ್, ಅಂಚೆ ಕಚೇರಿ ಸೇರಿ ಕೇಂದ್ರದ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು. ಕರ್ನಾಟಕದಲ್ಲಿರುವ ತಮಿಳು ಶಿಲಾಶಾಸನ ಕಾಪಾಡಬೇಕು ಎಂಬುದು ಸೇರಿ ಸಮ್ಮೇಳನದಲ್ಲಿ ಒಟ್ಟು 13 ನಿರ್ಣಯ ಕೈಗೊಳ್ಳಲಾಯಿತು.