ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ
ಪ್ರತಿಯೊಬ್ಬರು ಮಾತೃಭಾಷಾಭಿಮಾನ ಹೊಂದಿರಬೇಕು. ಆದರೆ ಇತರ ಭಾಷೆಗಳನ್ನು ದ್ವೇಷಿಸಬಾರದು. ಕರ್ನಾಟಕ ರಾಜ್ಯದಲ್ಲಿರುವ ನಾವೆಲ್ಲರೂ ಕನ್ನಡಗಿರು. ಎಲ್ಲರೂ ಸೇರಿ ಕನ್ನಡ ರಾಜೋತ್ಸವವನ್ನು ಅದ್ಧೂರಿಯಾಗಿ ಆಚರಿಸೋಣವೆಂದು ತಹಸೀಲ್ದಾರ ರಾಜೇಶ ಬುರ್ಲಿ ಹೇಳಿದರು.ಶುಕ್ರವಾರ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ ಆಚರಿಸುವ ಕುರಿತು ನಡೆದ ಪೂರ್ವಿಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮರಾಠಿ ಭಾಷಿಕರೇ ಹೆಚ್ಚಾಗಿರುವ ಮಂಗಸೂಳಿ ಗ್ರಾಮದಲ್ಲಿ ಕಳೆದ ಅನೇಕ ವರ್ಷಗಳಿಂದ ನ.1ರಂದು ಕರಾಳ ದಿನ ಆಚರಿಸುತ್ತಾ ಬರಲಾಗುತ್ತಿತ್ತು. ನಾನು ಇಲ್ಲಿಗೆ ಬಂದ ಮೇಲೆ ಇಲ್ಲಿಯ ಜನರನ್ನು ವಿಸ್ವಾಸಕ್ಕೆ ತೆಗೆದುಕೊಂಡು, ಸತತ ನಾಲ್ಕು ವರ್ಷಗಳಿಂದ ಶಾಂತಿಯುತವಾಗಿ ಕನ್ನಡ ರಾಜ್ಯೋತ್ಸವ ಆಚರಿಸುತ್ತ ಬಂದಿರುತ್ತೇವೆ. ಈ ವರ್ಷವೂ ಕೂಡ ಅದ್ದೂರಿಯಾಗಿ ಆಚರಿಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಪಿಎಸ್‌ಐ ಜಿ.ಜಿ. ಬಿರಾದರ ಮಾತನಾಡಿ, ಕನ್ನಡ ರಾಜ್ಯೋತ್ಸವ ಆಚರಣೆ ವೇಳೆ ಕಾನೂನು ಉಲ್ಲಘಂನೆ ಮಾಡಿದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ದಲಿತ ಮುಖಂಡ ಸಂಜಯ ತಳವಳಕರ ಸೇರಿದಂತೆ ಅನೇಕರು ಮಾತನಾಡಿದರು.ಗ್ರಾಮದ ವರ್ತಕರ ಸಂಘದ ಅಧ್ಯಕ್ಷ ಜಯಸಿಂಗ ಪಾಟೀಲ, ಗ್ರಾಪಂ ಅಧ್ಯಕ್ಷ ಬಾಳು ಭಜಂತ್ರಿ, ಪಿಡಒ ಸಂಜೀವ ಸೂರ್ಯವಂಶಿ, ಗ್ರಾಮ ಲೆಕ್ಕಾಧಿಕಾರಿ ಪರಾಗ ಕಾಂಬಳೆ, ಮಂಗಸೂಳಿ ಕರವೇ ಅಧ್ಯಕ್ಷ ದತ್ತಾತ್ರೇಯ ಪೂಜಾರಿ, ಪಿಕೆಪಿಎಸ್ ಅಧ್ಯಕ್ಷ ಮುಕುಂದ ಪೂಜಾರಿ, ಗ್ರಾಪಂ ಸದಸ್ಯರಾದ ಪ್ರಮೋದ ಪೂಜಾರಿ, ಬಾಬಾ ಪಾಟೀಲ, ಸಾವಂತ ಅಧೋಕೆ, ಮಿರಾಸಾಬ ಸನದಿ, ಗಣಪತಿ ಮಾಳಿ ಸೇರಿದಂತೆ ಗ್ರಾಪಂ ಸದಸ್ಯರು, ಸಿಬ್ಬಂದಿ, ಪೋಲಿಸರು, ಗ್ರಾಮಸ್ಥರು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಇದ್ದರು.