ಹೂವಿನಹಡಗಲಿ: ಸಾಹಿತ್ಯಿಕ ಕೃತಿಗಳಲ್ಲಿ ಸಾಮಾಜಿಕ ಸೌಹಾರ್ದ, ಅರಿವು, ಚಿಂತನೆಗಳು ಇರಬೇಕು ಎಂದು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಸುರೇಶ ಅಂಗಡಿ ಹೇಳಿದರು.ಪಟ್ಟಣದ ಸೊಪ್ಪಿನ ಕಾಳಮ್ಮ ಬಡಾವಣೆಯ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ, ಟಿಎಂಆರ್ ಪಬ್ಲಿಕೇಶನ್ ವತಿಯಿಂದ ಹಿರಿಯ ಲೇಖಕ ಕರಿವೀರನಗೌಡ ಪಾಟೀಲ್ ಅವರ ಸುತ್ತ ಮುತ್ತ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಸುತ್ತ ಮುತ್ತ ಕೃತಿಯಲ್ಲಿ ತಾಲೂಕಿನ ಸಾಂಸ್ಕೃತಿಕ ಇತಿಹಾಸ, ಗ್ರಾಮೀಣ ಜನರ ಬದುಕು ನಡೆದು ಬಂದ ಹಾದಿ ಅನಾವರಣಗೊಂಡಿದೆ. ಹಿಂದಿನ ಕಾಲದಲ್ಲಿ ಹಬ್ಬ ಜಾತ್ರೆಗಳಲ್ಲಿ ನಡೆಯುತ್ತಿದ್ದ ವಿವಿಧ ಗ್ರಾಮೀಣ ಸೊಗಡಿನ ಆಟೋಟಗಳು ಕುರಿತು ಸಮಗ್ರ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.ಲಗ್ನದ ತಯಾರಿ, ಹೂ ಪತ್ರಿ, ಮುದೇನೂರು ಶಾಸನಗಳು, ಹಂಪೆಯ ವಿಶೇಷ, ಸಸ್ಯಗಳು, ಹೂವಿನಹಡಗಲಿ ತಾಲೂಕಿನ 113 ಗ್ರಾಮಗಳ ಹೆಸರು, ಹಣ್ಣುಗಳು, ಮರೆಯಾಗುತ್ತಿರುವ ಗ್ರಾಮೀಣ ಆಟಗಳು ಹೀಗೆ ವೈವಿಧ್ಯಮಯ ವಿಷಯಗಳ ಬಗ್ಗೆ ಲೇಖಕರು ಮಾಹಿತಿ ನೀಡಿದ್ದಾರೆ ಎಂದು ಬಣ್ಣಿಸಿದರು.
ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಈ ಪುಸ್ತಕಗಳನ್ನು ತಲುಪಿಸುವ ಮೂಲಕ, ಕನ್ನಡ ಉಳಿಸುವ ಬೆಳೆಸುವ ಕೆಲಸ ನಿರಂತರವಾಗಿ ಆಗಬೇಕಿದೆ ಎಂದರು.ತಾಲೂಕು ಕಸಾಪ ಅಧ್ಯಕ್ಷ ಟಿ.ಪಿ. ವೀರೇಂದ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಾಡಿನ ನೆಲದ ಮಹತ್ವ ದಾಖಲಿಸುವ ವಿಶೇಷ ಕಾರ್ಯ ಸುತ್ತ ಮುತ್ತ ಪುಸ್ತಕದಿಂದ ಆಗಿದೆ. ಶಾಲಾ ಕಾಲೇಜುಗಳಲ್ಲಿ ಸಾಹಿತ್ಯಿಕ ಕಾರ್ಯಕ್ರಮಗಳನ್ನು, ಹೆಚ್ಚು ಆಯೋಜಿಸುವುದು ಸೂಕ್ತ ಎಂದರು.
ಲೇಖಕ ಕರಿವೀರನಗೌಡ ಪಾಟೀಲ್ ಒಂಭತ್ತು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಲೇಖಕ ಕರಿವೀರನಗೌಡ ಪಾಟೀಲ್ ತಮ್ಮ ಕೃತಿ ರಚನೆಯ ಅನುಭವವನ್ನು ಹಂಚಿಕೊಂಡರು.
ಸಾಹಿತಿಗಳಾದ ಎಂ.ಪಿ.ಎಂ.ಕೊಟ್ರಯ್ಯ, ಶಂಕರ್ ಬೆಟಗೇರಿ, ಎಲ್.ಖಾದರ್ ಬಾಷಾ, ಶೋಭಾ ಮಲ್ಕಿಒಡೆಯರ್ ಮಾತನಾಡಿದರು.ಟಿಎಂಆರ್ ಪಬ್ಲಿಕೇಶನ್ ಪ್ರಕಾಶಕ ಸಾಹಿತಿ ತೋ.ಮ.ಶಂಕ್ರಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನ ಸಾಂಸ್ಕೃತಿಕ ಇತಿಹಾಸ ಸಾಹಿತ್ಯ ನಾಟಕ ನೃತ್ಯ ಕಲೆ ಪ್ರಕಾರಗಳನ್ನು, ದಾಖಲಿಸುವ ಪ್ರಯತ್ನ ನಮ್ಮ ಪ್ರಕಾಶನದ ಮುಖ್ಯ ಕೆಲಸ ಎಂದು ತಿಳಿಸಿದರು.
ವಿಶ್ವನಾಥ್ ಪಾಟೀಲ್, ನಂದೀಶ್, ನಾಗರಾಜ್ ಮಲ್ಕಿಒಡೆಯರ್ ನಿರ್ವಹಿಸಿದರು.ವಿವಿಧ ಸಂಘ ಸಂಸ್ಥೆಗಳ ಪರವಾಗಿ ಲೇಖಕರನ್ನು ಗೌರವಿಸಲಾಯಿತು. ಸೊಪ್ಪಿನ ಕಾಳಮ್ಮ ಬಡಾವಣೆಯ ಹಿರಿಯರು, ಮಹಿಳೆಯರು ಸಾಹಿತ್ಯಾಕ್ತರು ಭಾಗವಹಿಸಿದ್ದರು.