ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ
ದೇಶದಲ್ಲಿ ತುಳಿತಕ್ಕೊಳಗಾದವರ, ಶೋಷಿತರಿಗೆ ರಕ್ಷಣೆ ನೀಡುತ್ತಿರುವುದು ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಭಾರತ ಸಂವಿಧಾನ. ನಮ್ಮ ಸಂವಿಧಾನದ ರಕ್ಷಣೆಗೆ ನಾವೆಲ್ಲರೂ ಕಟಿಬದ್ಧರಾಗಿ ನಿಲ್ಲೋಣ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಹೇಳಿದರು.ನಗರದ ಅಂಬೇಡ್ಕರ್ ಸರ್ಕಲ್‌ನಲ್ಲಿ ಜಿ.ಪಂ, ಸಮಾಜ ಕಲ್ಯಾಣ ಇಲಾಖೆ ಇವರ ವತಿಯಿಂದ ಆಯೋಜಿಸಿದ್ದ ಭಾರತ ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಭಾರತ ದೇಶದಲ್ಲಿ ಸಂವಿಧಾನವೇ ಪರಮೋಚ್ಚ. ರಾಜಕೀಯ ಸ್ವಾತಂತ್ರ್ಯ ಇರುವ ದೇಶದಲ್ಲಿ ಸಂವಿಧಾನ ಬದಲಾಯಿಸಬೇಕೆಂದು ಧರ್ಮ ಮತ್ತು ರಾಜಕೀಯ ಬೆರೆಸುವ ಕೆಲಸ ಆಗುತ್ತಿದೆ. ಸಂವಿಧಾನ ಬದಲಾವಣೆ ಯಾರಿಂದಲೂ ಸಾಧ್ಯವಿಲ್ಲ. ಅದರ ರಕ್ಷಣೆಗೆ ರಾಜಕೀಯ, ಆರ್ಥಿಕ, ಸಾಮಾಜಿ, ಶೈಕ್ಷಣಿಕ ಸ್ವಾತಂತ್ರ್ಯ ಜನರಿಗೆ ಸಿಗುತ್ತಿದ್ದರೆ. ಅದಕ್ಕೆ ಕಾರಣ ಭಾರತ ಸಂವಿಧಾನ. ಎಲ್ಲರಿಗೂ ಸಮಪಾಲು, ಸಮಬಾಳು ತತ್ವ ಅನುಷ್ಟಾನವಾಗಲು ಸಂವಿಧಾನದ ಸಂಪೂರ್ಣ ಜಾರಿಯಾಗಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕರ್ನಾಟಕ ಸರ್ಕಾರ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಶಿರಾದಲ್ಲಿ ಸ್ವಾತಂತ್ರ್ಯ ಸೌಧ ನಿರ್ಮಾಣ: ಭಾರತವು ಸ್ವಾತಂತ್ರ್ಯ ಪೂರ್ವದಲ್ಲಿ ನೂರಾರು ಭಾಗಗಳಾಗಿ ಹಂಚಿ ಹೋಗಿತ್ತು. ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು ದೇಶದ ಸ್ವಾತಂತ್ರ್ಯ ಕಬಳಿಸಲು ಹುನ್ನಾರ ನಡೆಸಿದ್ದರು. ಇಂತಹ ಸಂದರ್ಭದಲ್ಲಿ ಈ ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಹೋರಾಟ ಮಾಡಿದ್ದು ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷ. ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಜನ ಪ್ರಾಣ ತೆತ್ತಿದ್ದಾರೆ. ಅದರಲ್ಲಿ ಶಿರಾದ ೧೦೦ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದು, ಶಿರಾದಲ್ಲಿ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದವರ ಪೋಟೋಗಳನ್ನು ಅನಾವರಣ ಮಾಡುವುದರ ಜೊತೆಗೆ ಅವರ ಇತಿಹಾಸ ಬರೆಯುವ ಕೆಲಸ ಮಾಡುತ್ತೇನೆ ಎಂದರು.ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಮಾತನಾಡಿ, ರಾಜ್ಯ ಸರ್ಕಾರ ಮುಖ್ಯಮಂತ್ರಿಯವರ ನಿರ್ದೇಶನ ಮೇರೆಗೆ ಜನರಲ್ಲಿ ಸಂವಿಧಾನದ ಅರಿವು ಮೂಡಿಸಲು ಸಂವಿಧಾನ ಜಾಗೃತಿ ಜಾಥಾವನ್ನು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯ. ಈ ಜಾಗೃತಿ ಜಾಥಾ ಯಶಸ್ವಿಯಾಗಲಿ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ದತ್ತಾತ್ರೆಯ, ನಗರಸಭೆ ಅಧ್ಯಕ್ಷೆ ಪೂಜಾ ಪೆದ್ದರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರ್, ನಗರಸಭಾ ಸದಸ್ಯರಾದ ಲಕ್ಷ್ಮೀಕಾಂತ್, ಜೀಷಾನ್ ಮೊಹಮದ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಯತೀಶ್ ಕುಮಾರ್, ತಾ.ಪಂ. ಇಒ ಅನಂತರಾಜು, ಸಹಾಯಕ ಕೃಷಿ ನಿರ್ದೇಶಕ ಎಚ್. ನಾಗರಾಜು, ಪೌರಾಯುಕ್ತ ರುದ್ರೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.