ಶಿವಕುಮಾರ ಶ್ರೀಗಳ ತತ್ವಾದರ್ಶ ಪಾಲಿಸೋಣ

| Published : Apr 04 2025, 12:48 AM IST

ಸಾರಾಂಶ

ರಾಮನಗರ: ಅಕ್ಷರ, ಅರಿವು, ದಾಸೋಹ ಕಾರ್ಯಕ್ರಮವನ್ನು ನಾಡಿಗೆ ಬಿತ್ತರಿಸಿದ ಸಿದ್ದಗಂಗಾ ಮಠಾಧೀಶರಾದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯ ತತ್ವ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದ ಮಠಾಧ್ಯಕ್ಷ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ರಾಮನಗರ: ಅಕ್ಷರ, ಅರಿವು, ದಾಸೋಹ ಕಾರ್ಯಕ್ರಮವನ್ನು ನಾಡಿಗೆ ಬಿತ್ತರಿಸಿದ ಸಿದ್ದಗಂಗಾ ಮಠಾಧೀಶರಾದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯ ತತ್ವ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದ ಮಠಾಧ್ಯಕ್ಷ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ತಾಲೂಕು ವೀರಶೈವ ಯುವಕ ಸಂಘ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಆಶ್ರಯದಲ್ಲಿ ಗುರುವಾರ ಶ್ರೀ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯ 118ನೇ ಜಯಂತಿ ಸಮಾರಂಭದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪ್ರಸಾದ ವಿತರಿಸಿ ಆಶೀರ್ವಚನ ನೀಡಿ ಮಾತನಾಡಿದರು.

ಶ್ರೀಗಳು ಶಿಕ್ಷಣದ ಮಹತ್ವ ತಿಳಿದು ಅಕ್ಷರ ಕ್ರಾಂತಿ ಮಾಡಿದರು. ಜಾತಿ ಮತ ಭೇದಭಾವವಿಲ್ಲದೆ ಸರ್ವ ಧರ್ಮ, ಜಾತಿಯವರಿಗೂ ಶಿಕ್ಷಣ ನೀಡುವ ಮೂಲಕ ಶ್ರೀಗಳು ಅಸಂಖ್ಯಾತ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದವರು. ಬಸವಣ್ಣನವರ ತತ್ವಾದರ್ಶ ಕಾರ್ಯರೂಪಕ್ಕೆ ತಂದ ಅಪರೂದ ತಪಸ್ವಿ ಎಂದು ಬಣ್ಣಿಸಿದರು.

ಸಮಾಜಕ್ಕೆ ದಾರಿದೀಪವಾಗಿದ್ದ ಶ್ರೀಗಳು, ಯಾವುದೇ ಜಾತಿ ಬೇಧವಿಲ್ಲದೆ ಎಲ್ಲರನ್ನು ಒಂದೇ ಭಾವನೆಯಲ್ಲಿ ಕಾಣುತ್ತಿದ್ದರು. ಸಮಾಜಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಸಿದ್ಧಗಂಗಾ ಕ್ಷೇತ್ರವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡಿದವರು ಎಂದು ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಎಸ್.ಯೋಗಾನಂದ್ ಮಾತನಾಡಿ, ಕಾಯಕದಲ್ಲಿ ಕೈಲಾಸ ಕಾಣುವ ಮೂಲಕ ದಣಿವರಿಯದೆ ಸೇವೆ ಸಲ್ಲಿಸಿದ ಶ್ರೀ ಶಿವಕುಮಾರ ಸ್ವಾಮೀಜಿಯವರ ಇಹಲೋಕ ತ್ಯಜಿಸಿದ್ದರೂ ಅವರ ತತ್ವಾದರ್ಶ ಸಮಾಜಕ್ಕೆ ಆದರ್ಶ. ಶ್ರೀಗಳು ಬಸವಣ್ಣರ ಸಿದ್ಧಾಂತ ಹಾಗೂ ಆದರ್ಶಗಳನ್ನು ಸಾಕಾರಗೊಳಿಸಿದರು ಎಂದರು.ಸಿದ್ದಗಂಗಾ ಶಿವಕುಮಾರ ಶ್ರೀಗಳು ಅನ್ನದಾಸೋಹದ ಜೊತೆಗೆ ಅಂದಿನ ಕಾಲಘಟ್ಟದಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಸಲುವಾಗಿ ಗ್ರಾಮೀಣ ಮಟ್ಟದಲ್ಲಿ ಶಿಕ್ಷಣ ಕೇಂದ್ರ ತೆರೆದು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದವರು. ಅವರ ಬದುಕು ನಮಗೆ ಆದರ್ಶ. ಕಲಿಯುಗ ಕಂಡ ದೇವರು ಡಾ. ಶಿವಕುಮಾರ ಸ್ವಾಮೀಜಿ ಮಹಾಚೇತನ. ಭಾರತ ಸರ್ಕಾರ ನಾಡಿನ ಸಮಸ್ತ ಜನರ ಬಯಕೆಯಂತೆ ಶ್ರೀಗಳಿಗೆ ಭಾರತ ರತ್ನ ನೀಡಿ ಗೌರವಿಸಬೇಕು ಎಂದು ಯೋಗಾನಂದ ಒತ್ತಾಯಿಸಿದರು.

ತಾಲೂಕು ವೀರಶೈವ ಯುವಕ ಸಂಘದ ಅಧ್ಯಕ್ಷ ಎಂ.ಆರ್.ಶಿವಕುಮಾರಸ್ವಾಮಿ ಮಾತನಾಡಿ, ಶ್ರೀ ಶಿವಕುಮಾರ ಮಹಾಸ್ವಾಮಿಗಳು ತಮ್ಮ ಬದುಕಿನುದ್ದಕ್ಕೂ ಜನರ ಉನ್ನತ ಪ್ರಗತಿಗೆ ಶ್ರಮಿಸಿ ಶೈಕ್ಷಣಿಕ ಧಾರ್ಮಿಕವಾಗಿ ಶ್ರಮಿಸಿದವರು. ಅವರ ದೇಹವನ್ನು ಮಾತ್ರ ನಾವು ಕಳೆದುಕೊಂಡಿದ್ದೇವೆ. ಆದರೆ ಅವರು ಹಾಕಿಕೊಟ್ಟ ಸನ್ಮಾರ್ಗ, ಆದರ್ಶಗಳು ನಮಗೆ ನಿಜ ರೂಪದಲ್ಲಿ ಸಿಕ್ಕಿವೆ ಎಂದು ಹೇಳಿದರು.

ಶ್ರೀಗಳು ತೋರಿದ ಹಾದಿಯಲ್ಲಿ ನಾವುಗಳು ನಡೆದು ಅವರ ಕಾಯಕನಿಷ್ಟೆ ಮೈಗೂಡಿಸಿಕೊಂಡು ಜೀವನ ನಡೆಸಿದಾಗ ಮಾತ್ರ ಯಶಸ್ವಿ ಜೀವನ ನಮ್ಮದಾಗುತ್ತದೆ. ಸದಾ ಕಾಲ ಭಕ್ತರ ಮನಸ್ಸಿನಲ್ಲಿ ನೆಲೆಯಾಗಿ ನಿಂತು ಅವರ ಆದರ್ಶಗಳು ಇಂದಿನ ಯುವಪೀಳಿಗೆಗೆ ದಾರಿದೀಪವಾಗಬೇಕು ಎಂಬ ನಿಟ್ಟಿನಲ್ಲಿ ಶ್ರೀಗಳ ಜನ್ಮದಿನಾಚರಣೆ ಆಚರಿಸುತ್ತಾ ಬರಲಾಗುತ್ತಿದೆ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ, ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನರಸಿಂಹಯ್ಯ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎಂ.ಎಸ್. ಶಂಕರಪ್ಪ, ಪ್ರಾಧಿಕಾರ ಮಾಜಿ ಅಧ್ಯಕ್ಷ ರಾಜಶೇಖರ್, ನಗರಸಭಾ ಮಾಜಿ ಸದಸ್ಯ ಎ.ಜೆ. ಸುರೇಶ್, ಮಾಯಗಾನಹಳ್ಳಿ ಗ್ರಾಪಂ ಅಧ್ಯಕ್ಷೆ ಗೀತಾ ಪರಮಶಿವಯ್ಯ ಮಾತನಾಡಿದರು.

ಮುಖಂಡರಾದ ಸಿ. ನಾಗರಾಜ್, ಆರ್. ರೇವಣ್ಣ, ಬಿಡದಿ ಶಿವಸ್ವಾಮಿ, ಕೆ.ಎಸ್. ರುದ್ರೇಶ್, ವಿಭೂತಿಕೆರೆ ಶಿವಲಿಂಗಯ್ಯ, ಐಜೂರು ಜಗದೀಶ್, ಅಕ್ಕಮಹದೇವಮ್ಮ, ನಾಗೇಶ್, ವಿಜಯಕುಮಾರ್, ಸಿ.ಕೆ. ನಾಗರಾಜ್, ಹರೀಶ್, ಜನತಾ ನಾಗೇಶ್, ಬಸವರಾಜಶಾಸ್ತ್ರಿ, ರಾಜಣ್ಣ, ಗೌರೀಶ್, ಯತೀಶ್, ಶಿವಪ್ರಕಾಶ್, ಬೆಂಕಿ ಮಹದೇವ್, ರೇಣುಕಾಪ್ರಸಾದ್, ಜೈಕುಮಾರ್, ಗುರುಲಿಂಗಯ್ಯ, ಪಾಪಣ್ಣ, ಯೋಗೇಶ್, ಸಿದ್ದಲಿಂಗಪ್ಪ, ಗೋಪಿ, ಮಹದೇವ್, ಬಸವರಾಜು, ರಾಜಶೇಖರ್, ಮುರುಗೇಂದ್ರ ಮತ್ತಿತರರು ಹಾಜರಿದ್ದರು.

3ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ ಹಳೇ ಬಸ್ ನಿಲ್ದಾಣ ದೇವೇಗೌಡ ಕಾಂಪ್ಲೆಕ್ಸ್ ಮುಂಭಾಗ ಗುರುವಾರ ಶ್ರೀ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 118 ನೇ ಜಯಂತಿ ಅಂಗವಾಗಿ ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.