ಅಭಿವೃದ್ಧಿಗೆ ಕಾಗೇರಿ ಕೊಡುಗೆ ಏನು ಎಂಬುದನ್ನು ತಿಳಿಸಲಿ: ವೆಂಕಟೇಶ ಹೆಗಡೆ

| Published : Apr 19 2024, 01:03 AM IST

ಅಭಿವೃದ್ಧಿಗೆ ಕಾಗೇರಿ ಕೊಡುಗೆ ಏನು ಎಂಬುದನ್ನು ತಿಳಿಸಲಿ: ವೆಂಕಟೇಶ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರಕನ್ನಡ ಜಿಲ್ಲೆ ಹಿಂದುಳಿಯಲು ವಿಶ್ವೇಶ್ವರ ಹೆಗಡೆ ಕಾರಣ ಎಂದು ವೆಂಕಟೇಶ ಹೆಗಡೆ ಆರೋಪಿಸಿದರು.

ಶಿರಸಿ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಸುಳ್ಳು ಹೇಳುವುದನ್ನು ಮೊದಲು ನಿಲ್ಲಿಸಲಿ. ಅಂಕೋಲಾ ಕ್ಷೇತ್ರದಿಂದ ೩ ಬಾರಿ, ಶಿರಸಿ- ಸಿದ್ದಾಪುರ ಕ್ಷೇತ್ರದಿಂದ ೩ ಬಾರಿ ಆಯ್ಕೆಯಾಗಿ ಜಿಲ್ಲೆಯ ಅಭಿವೃದ್ಧಿಗೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಜನರಿಗೆ ತಿಳಿಸಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೆಗಡೆ ಹೊಸಬಾಳೆ ಸವಾಲು ಹಾಕಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರಕನ್ನಡ ಜಿಲ್ಲೆ ಹಿಂದುಳಿಯಲು ವಿಶ್ವೇಶ್ವರ ಹೆಗಡೆ ಕಾರಣ. ಪ್ರಧಾನಿ ನರೇಂದ್ರ ಮೋದಿ ಸಾಧನೆ ಬಿಟ್ಟು ತಾವೇನು ಸಾಧನೆ ಮಾಡಿದ್ದೇನೆ ಎಂಬುದನ್ನು ಹೇಳಿ ಪ್ರಚಾರ ಮಾಡಲಿ. ಕೇಂದ್ರದಲ್ಲಿ ೧೦ ವರ್ಷದಿಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಆದರೂ ಯಾಕೆ ಅತಿಕ್ರಮಣದಾರರ ಸಮಸ್ಯೆ ಬಗೆಹರಿಸಿಲ್ಲ ಎಂಬುದನ್ನು ಹೇಳಲಿ ಎಂದರು.

ಫಾರಂ ನಂಬರ್- ೩ನಿಂದ ಶಿರಸಿ ತಾಲೂಕಿನ ಜನರು ಹಿಂಸೆ ಅನುಭವಿಸುತ್ತಿದ್ದಾರೆ. ಜಲಜೀವನ್ ಮಿಷನ್ ಯೋಜನೆಯು ಅಸಮರ್ಪಕವಾದ ಪರಿಣಾಮ ನಳಗಳಲ್ಲಿ ನೀರು ಬರುತ್ತಿಲ್ಲ. ಕಾಗೇರಿ ಅವಧಿಯಲ್ಲಿ ಅಭಿವೃದ್ಧಿ ಶೂನ್ಯ. ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ಸೈಕಲ್ ವಿತರಣೆಯಲ್ಲಿ ಅವ್ಯವಹಾರ ನಡೆದಿದೆ ಎಂದರು.

ಕಾಂಗ್ರೆಸ್ ಗ್ಯಾರಂಟಿ ಯೋಜನೆಯ ಲಾಭ ಸಿಗುತ್ತಿಲ್ಲ. ಬೋಗಸ್ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ. ಪ್ರಚಾರ ಸಭೆಯಲ್ಲಿ ವಿಶ್ವೇಶ್ವರ ಹೆಗಡೆ ತಮ್ಮ ಕಾರ್ಯಕರ್ತರ ಬಳಿ ವಿದ್ಯುತ್ ಬಿಲ್ ಎಷ್ಟು ಪಾವತಿ ಮಾಡುತ್ತಿದ್ದಾರೆ ಎಂಬುದನ್ನು ಕೇಳಲಿ. ಅದನ್ನು ಜನರಿಗೆ ತಿಳಿಸಲಿ ಎಂದ ಅವರು, ಶೇ. ೯೫ ರಷ್ಟು ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಲಾಭ ಸಿಗುತ್ತಿದೆ. ಉಚಿತ ಬಸ್ ಪ್ರಯಾಣದಿಂದ ಮಹಿಳೆಯರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಯುವನಿಧಿ ಯೋಜನೆಯು ಯುವಕರಿಗೆ ಲಭಿಸುತ್ತಿದೆ ಎಂದ ಅವರು, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಷ್ಟ್ರೀಯ ಗ್ಯಾರಂಟಿ ಜಾರಿಗೆ ತರಲಿದೆ. ಇದರಿಂದ ಎಲ್ಲ ವರ್ಗದ ಜನರಿಗೆ ಉಪಯೋಗವಾಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಮಹಿಳಾ ಅಧ್ಯಕ್ಷೆ ಗೀತಾ ಶೆಟ್ಟಿ, ಜಿಲ್ಲಾ ಮಾಧ್ಯಮ ಸಂಯೋಜಕಿ ಜ್ಯೋತಿ ಪಾಟೀಲ, ಪ್ರಮುಖರಾದ ದೀಪಕ ಹೆಗಡೆ ದೊಡ್ಡೂರ, ಅಬ್ಬಾಸ್ ತೋನ್ಸೆ, ತಾರಾ ಮೇಸ್ತ, ಮಂಗಲಾ ಮೇಸ್ತ, ರಮ್ಯಾ ಚಂದಾವರ, ರಮೇಶ ದುಬಾಶಿ, ಖಾದರ್ ಆನವಟ್ಟಿ, ಖಾಸಿ ಸಾಬ್ ಮತ್ತಿತರರು ಇದ್ದರು.