ಗಿರಿಯಾಪುರ ಗ್ರಾಮದಲ್ಲಿ ಶ್ರೀ ಗುರು ಮೌನೇಶ್ವರಸ್ವಾಮಿ, ಕಾಳಿಕಾಂಬ ದೇವಿ ಅಗ್ನಿ ಪ್ರತಿಷ್ಠಾಪನೆ, ಕೆಂಡೋತ್ಸವ

ಕನ್ನಡಪ್ರಭ ವಾರ್ತೆ, ಕಡೂರು

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಸಂಘರ್ಷ ತಲ್ಲಣ ಸೃಷ್ಠಿಸಿ, ಜಾಗತಿಕವಾಗಿ ಆತಂಕ ಉಂಟುಮಾಡಿದೆ. ಇಂತಹ ಸಂದರ್ಭದಲ್ಲಿ ದ್ವೇಷ, ಅಸೂಯೆ, ಸಂಘರ್ಷ ತೊರೆದು ನಾವೆಲ್ಲ ಒಂದಾಗಿ ಶಾಂತಿ ಸಾಮರಸ್ಯದಿಂದ ಬಾಳಬೇಕು ಎಂದು ಅರೆಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಶಿವ ಸುಜ್ಞಾನತೀರ್ಥ ಸ್ವಾಮೀಜಿ ಕರೆ ನೀಡಿದರು.

ತಾಲೂಕಿನ ಗಿರಿಯಾಪುರ ಗ್ರಾಮದಲ್ಲಿ ನಡೆದ ಶ್ರೀ ಗುರು ಮೌನೇಶ್ವರಸ್ವಾಮಿ ಮತ್ತು ಕಾಳಿಕಾಂಬ ದೇವಿ ಅಗ್ನಿ ಪ್ರತಿಷ್ಠಾಪನಾ ಮತ್ತು ಕೆಂಡೋತ್ಸವದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪರಸ್ಪರ ಸಾಮರಸ್ಯ ಮೆರೆದು ಮಾನವೀಯತೆ ವಿಜೃಂಭಿಸಲಿ. ಪ್ರಸ್ತುತ ಪರಿಸ್ಥಿತಿಯಲ್ಲಿ ಕ್ರಾಂತಿ ಗೀತೆ ಶಾಂತಿ ಅಗತ್ಯವಿದೆ. ವಿಶ್ವಕರ್ಮ ಸಮುದಾಯ ಒಗ್ಗಟ್ಟಾಗಿ ಶಿಕ್ಷಣ ಪಡೆದು ಸುಶಿಕ್ಷಿತರಾಗಿ ಮುಖ್ಯವಾಹಿನಿಗೆ ಬರುವ ಮೂಲಕ ಹೆತ್ತವರ ಮತ್ತು ಪ್ರಕೃತಿ ಋಣ ತೀರಿಸಿ ಎಂದು ಹೇಳಿದರು.

ವಡ್ಡನಹಾಳಿನ ವಿಶ್ವಕರ್ಮ ಸಾಹಿತ್ಯ ಪೀಠದ ಶ್ರೀ ಶಂಕರಾತ್ಮಾನಂದ ಸರಸ್ವತೀ ಸ್ವಾಮೀಜಿ ಮಾತನಾಡಿ , ಮೌನೇಶ್ವರರ ತತ್ವಗಳು ವಿಶ್ವಕರ್ಮ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಸಮಗ್ರ ಸಮುದಾಯದ ಅಭಿವೃದ್ಧಿಗೆ ಪೂರಕ. ಸಮಾಜದ ಒಳ ಪಂಗಡಗಳನ್ನು ಬದಿಗೊತ್ತಿ ನಾವೆಲ್ಲ ಒಗ್ಗಟ್ಟಾದರೆ ಮಾತ್ರ ಸಧೃಢ ಸಮಾಜ ನಿರ್ಮಾಣ ಸಾಧ್ಯ ಎಂದರು. ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ ಮಾತನಾಡಿ, ಜಾತ್ರೆ , ಧಾರ್ಮಿಕ ಕಾರ್ಯಕ್ರಮ ಸಮಾಜವನ್ನು ಒಗ್ಗೂಡಿಸುವ ವೇದಿಕೆಗಳಾಗಿವೆ. ವಿಶ್ವಕರ್ಮ ಅಭಿವೃದ್ಧಿ ನಿಗಮದಲ್ಲಿ ಸಾಕಷ್ಟು ಯೋಜನೆಗಳಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಂಡಲ್ಲಿ ಬಡ ಕುಟುಂಬಗಳು ಆರ್ಥಿಕವಾಗಿ ಸುಧಾರಣೆಗೆ ಸಹಕಾರಿ ಎಂದರು.ಅಬಕಾರಿ ಉಪ ಆಧೀಕ್ಷಕ ಸುರೇಂದ್ರಾಚಾರ್ ಮಾತನಾಡಿ, ಪ್ರಾಚೀನ ದೇಗುಲಗಳ ಮಹತ್ವ ತಿಳಿಸುತ್ತಾ ಪ್ರಕೃತಿಯಲ್ಲಿ ದೇವರನ್ನು ಕಂಡ ಮನುಷ್ಯ ಅದನ್ನು ಆರಾಧಿಸುತ್ತಾ ಅದರೊಂದಿಗೆ ಬೆಳೆದ ಬಗೆ, ಪ್ರಾಚೀನ ಕಾಲದ ದೇಗುಲಗಳು ಸಾಂಸ್ಕೃ ತಿಕ ಮತ್ತು ನ್ಯಾಯದಾನ ಕೇಂದ್ರಗಳು ಆಗಿದ್ದವು ಎಂದರು. ಇದೇ ಸಂದರ್ಭದಲ್ಲಿ ಶಿಲ್ಪಿಗಳಾದ ನವೀನ್ ಆಚಾರ್ಯ, ಅರುಣ್‌ ಕುಮಾರ್‌ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮೈಸೂರು ವಿ.ವಿ. ನಿರ್ದೇಶಕ ಶ್ರೀಕಂಠಾಚಾರ್ ಉಪನ್ಯಾಸ ನೀಡಿದರು. ಮುದಿಗೆರೆ ಮಠದ ಶ್ರೀ ಜ್ಞಾನೇಶ್ವರ ಸ್ವಾಮೀಜಿ, ಸಮಿತಿ ಗೌರವಾಧ್ಯಕ್ಷ ಎಂ ವಿ. ರಂಗಾಚಾರ್, ಡಿ.ಕೃಷ್ಣಮೂರ್ತಿ, ಅಧ್ಯಕ್ಷ ಕೆ. ವಿ. ದೇವೇಂದ್ರಾಚಾರ್, ಮುಖಂಡರಾದ ಮೌನೇಶ್ವರಾಚಾರ್, ಚಂದ್ರಶೇಖರ್, ತೀರ್ಥಾಚಾರ್ , ರಂಗನಾಥ್, ಜೆ ಬಿ ಮೌನೇಶ್ವರಾಚಾರ್, ಎಂ ರಮೇಶ್, ಜಯಣ್ಣ ಹಾಗೂ ಸಮಾಜ ಬಾಂಧವರು ಭಾಗವಹಿಸಿದ್ದರು.


3ಕೆಕೆಡಿಯು1.

ಕಡೂರು ತಾಲೂಕಿನ ಗಿರಿಯಾಪುರ ಗ್ರಾಮದಲ್ಲಿ ನಡೆದ ಶ್ರೀ ಗುರು ಮೌನೇಶ್ವರಸ್ವಾಮಿ ಮತ್ತು ಶ್ರೀಕಾಳಿಕಾಂಬ ಅಮ್ಮನವರ ಅಗ್ನಿ ಪ್ರತಿಷ್ಠಾಪನಾ ಮತ್ತು ಕೆಂಡೋತ್ಸವದಲ್ಲಿ ಅರೆಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಶಿವ ಸುಜ್ಞಾನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.