ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆಬ್ರಾಹ್ಮಣ ಸಮಾಜ ಎಲ್ಲ ಸಮಾಜಗಳೊಂದಿಗೆ ಉತ್ತಮ ಬಾಂಧ್ಯವ್ಯ ಹೊಂದಿದ್ದು, ನಮ್ಮ ಹಕ್ಕು ಪಡೆದುಕೊಳ್ಳಲು ಸಂಘತರಾಗಬೇಕಿದೆ. ಮಹಾಸಭಾ ಪ್ರಯತ್ನ, ಹೋರಾಟಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಬ್ರಾಹ್ಮಣ ಮಹಾಸಭಾದ ನೂತನ ಜಿಲ್ಲಾಧ್ಯಕ್ಷ ನರಸಿಂಹ ಆಲೂರ ಹೇಳಿದರು.ನಗರದ ವಿದ್ಯಾಗಿರಿ ಬಡಾವಣೆಯ ವಿಪ್ರ ರಾಯರ ಮಠದಲ್ಲಿ ಭಾನುವಾರ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿರುವ ಅವರು, ಜಿಲ್ಲೆಯ ವಿವಿಧ ಭಾಗದಲ್ಲಿರುವ ಬ್ರಾಹ್ಮಣ ಸಮಾಜದ ಮುಖಂಡರು, ಯುವಕರು ಮಹಾಸಭೆಗೆ ಶಕ್ತಿ ತುಂಬಬೇಕು. ಶೀಘ್ರವೇ ಮಹಾಸಭೆಯ ಜಿಲ್ಲಾ ಕಚೇರಿ ಲೋಕಾರ್ಪಣೆ ಮಾಡಲಾಗುವುದು. ತಮ್ಮೊಳಗಿನ ಭಿನ್ನಾಭಿಪ್ರಾಯ ಮರೆತು ಸಮಾಜ ಸಂಘಟನೆ, ಬಡ ಮಕ್ಕಳ ಶಿಕ್ಷಣ, ಉದ್ಯೋಗಕ್ಕಾಗಿ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಹೇಳಿದರು.ಬ್ರಾಹ್ಮಣ ತರುಣ ಸಂಘದ ಅಧ್ಯಕ್ಷ ನಾರಾಯಣ ದೇಸಾಯಿ ಮಾತನಾಡಿ, ಸಮಾಜವನ್ನು ಒಂದೇ ನೆಲೆಗಟ್ಟಿನಲ್ಲಿ ನಿಲ್ಲಿಸಲು ನಾವೆಲ್ಲ ಶ್ರಮಿಸಬೇಕಿದೆ. ಜಿಲ್ಲಾ ಕೇಂದ್ರದಲ್ಲಿ ತಾಲೂಕು ಘಟಕ ರಚನೆ ಬೇಡ. ಆಯಾ ತಾಲೂಕಿನ ಅಧ್ಯಕ್ಷರನ್ನು ನೇಮಕ ಮಾಡುವಾಗ ಕ್ರಿಯಾಶೀಲರನ್ನು ಆಯ್ಕೆ ಮಾಡಬೇಕು. ಎಲ್ಲರು ಜವಾಬ್ದಾರಿಯುತ ಕೆಲಸ ಮಾಡಬೇಕಿದ್ದು, ಸಭೆ, ಸಮಾಜಕ್ಕಾಗಿ ಸಮಯ ಮೀಸಲಿಡಬೇಕು ಎಂದು ತಿಳಿಸಿದರು.ಸಭೆಯಲ್ಲಿ ಬ್ರಾಹ್ಮಣ ಮಹಾಸಭಾದ ರಾಜ್ಯ ಪ್ರತಿನಿಧಿ ಡಾ.ಗಿರೀಶ ಮಾಸೂರಕರ, ಮಹಿಳಾ ಘಟಕದ ಅಧ್ಯಕ್ಷ ಶುಭದಾ ದೇಶಪಾಂಡೆ, ವಿಪ್ರ ಅಭಿವೃದ್ಧಿ ಸಂಘದ ಅಧ್ಯಕ್ಷ ಹರಿ ಪಾಟೀಲ, ಮುಖಂಡರಾದ ವಿನಾಯಕ ತಾಳಿಕೋಟಿ, ಎಸ್.ಕೆ.ಕುಲಕರ್ಣಿ, ಗಿರಿಯಾಚಾರ್ಯ, ಸಂತೋಷ ಗದ್ದನಕೇರಿ, ವಿಜಯಕುಮಾರ.ಕೆ, ಕೆ.ಬಿ.ದೇಸಾಯಿ ಇತರರು ಇದ್ದರು.