ಸಾರಾಂಶ
-ಶಾಸಕ ಟಿ. ರಘುಮೂರ್ತಿ ಕರೆ । ಚಳ್ಳಕೆರೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ
---------ಕನ್ನಡಪ್ರಭವಾರ್ತೆ ಚಳ್ಳಕೆರೆ
ರಾಷ್ಟ್ರದ ಆಡಳಿತಕ್ಕೆ ಪ್ರೇರಣಾ ಶಕ್ತಿಯಾದ ದೇಶವನ್ನು ಅಭಿವೃದ್ಧಿ ಪಥದತ್ತ ಸಾಗಲು ಮಾರ್ಗದರ್ಶನ ನೀಡುವ ಭಾರತದ ಸಂವಿಧಾನವನ್ನು ಸಮರ್ಪಿಸಿಕೊಂಡು ಇಂದಿಗೆ ೭೫ ವರ್ಷಗಳು ಸಂದಿದ್ದು, ಸಂವಿಧಾನ ಸಮರ್ಪಿಸಿಕೊಂಡ ಸುವರ್ಣಮಹೋತ್ಸವದ ಈ ದಿನದಂದು ನಾವೆಲ್ಲರೂ ಸಂವಿಧಾನದ ಆಶಯಗಳನ್ನು ಈಡೇರಿಸುವ ಸಂಕಲ್ಪ ಮಾಡೋಣವೆಂದು ಶಾಸಕ, ಸಣ್ಣಕೈಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.ಅವರು, ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿಪರಿಶೀಲನಾ ಸಭೆ ಹಾಗೂ ಸಂವಿಧಾನ ಸಮರ್ಪಣಾ ದಿನ ಕಾರ್ಯಕ್ರಮವನ್ನು ಅಂಬೇಡ್ಕರ್ ಸಂವಿಧಾನ ಕರಡುಪ್ರತಿ ಹಾಗೂ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಂವಿಧಾನದ ಕರಡುಪ್ರತಿಯ ಪ್ರತಿಜ್ಞಾ ವಿಧಿಯನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಶಶಿಧರ ಬೋಧಿಸಿದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕೆ.ತಿಮ್ಮಪ್ಪ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಟಿ.ಮಂಜುನಾಥ, ತಹಸೀಲ್ದಾರ್ ರೇಹಾನ್‌ಪಾಷ, ತಾಲೂಕು ಮಟ್ಟದ ಅಧಿಕಾರಿಗಳು ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪಾಲ್ಗೊಂಡಿದ್ದರು.ಪ್ರಾರಂಭದಲ್ಲಿ ಕೃಷಿ ಇಲಾಖೆ ವರದಿ ನೀಡಿದ ಸಹಾಯಕ ನಿರ್ದೇಶಕ ಅಶೋಕ್, ಈ ಬಾರಿ ವಾಡಿಕೆಗಿಂತಹ ಶೇ.೫೮ರಷ್ಟು ಹೆಚ್ಚು ಮಳೆಯಾಗಿದೆ. ತಾಲೂಕಿನ ಎಲ್ಲಾ ಹೋಬಳಿ ಕೇಂದ್ರದಲ್ಲಿ ಉತ್ತಮ ಮಳೆಯಾಗಿದೆ. ೯೮೨ ಹೆಕ್ಟೇರ್ ಪ್ರದೇಶದ ಶೇಂಗಾ ಬೆಳೆ ಮಳೆಯಿಂದ ನಾಶವಾದ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಸಕರು ಕಳೆದ ಸೆಪ್ಟಂಬರ್‌ನಿಂದ ಮಳೆ ಬಂದಿದೆ. ಜೂನ್, ಜುಲೈ ತಿಂಗಳಲ್ಲಿ ರೈತರು ಬಿತ್ತನೆ ಮಾಡಿದ್ದ ಶೇಂಗಾ ಸಂಪೂರ್ಣ ನಾಶವಾಗಿತ್ತು. ಈ ಬಗ್ಗೆ ವರದಿಯನ್ನು ಪ್ರತ್ಯೇಕವಾಗಿ ಸಿದ್ಧಪಡಿಸಿ ಸರ್ಕಾರಕ್ಕೆ ಕಳಿಸುವಂತೆ ಸೂಚನೆ ನೀಡಿದರು. ಕ್ಷೇತ್ರದ ತೊಗರಿ ಬೆಳೆಗಾರ ಸಂಕಷ್ಟಗಳಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.ತೋಟಗಾರಿಕೆ ಅಧಿಕಾರಿ ವಿರೂಪಾಕ್ಷಪ್ಪ ಮಾಹಿತಿ ನೀಡಿ, ತಾಲೂಕಿನಾದ್ಯಂತ ಒಟ್ಟು ೬೨ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಇವೆ. ಮಳೆ ಅನಾವೃಷ್ಠಿಯಿಂದ ೫೩ಲಕ್ಷ ಮೌಲ್ಯದ ತೋಟಗಾರಿಕೆ ಬೆಳೆನಷ್ಟವಾಗಿದೆ ಎಂದರು. ಪಶುವೈದ್ಯಾಧಿಕಾರಿ ರೇವಣ್ಣ ಮಾಹಿತಿ ನೀಡಿ, ಅನುಗ್ರಹ ಯೋಜನೆಯಲ್ಲಿ ೯೯೬ ಅರ್ಜಿ ಸಲ್ಲಿಕೆಯಾಗಿವೆ, ೬೦೬ ಅರ್ಜಿಗಳಿಗೆ ಪರಿಹಾರ ನೀಡಿದ್ದು, ೩೯೦ ಅರ್ಜಿಗಳಿಗೆ ಪರಿಹಾರ ನೀಡಬೇಕಿದೆ ಎಂದರು. ರೇಷ್ಮೆ ಅಧಿಕಾರಿ ಉಮಾಪತಿ, ಪ್ರಸ್ತುತ ವರ್ಷ ಹೊಸದಾಗಿ ೩೦ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆಬೆಳೆ ಬೆಳೆಯಲಾಗಿದೆ ಎಂದರು.
ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರ್ ದಯಾನಂದಸ್ವಾಮಿ ಮಾಹಿತಿ ನೀಡಿ, ಚಳ್ಳಕೆರೆ ವಿಧಾನಸಭಾ ವ್ಯಾಪ್ತಿಯಲ್ಲಿ ೫೬ ಕುಡಿವ ನೀರು ಘಟಕ ದುರಸ್ತಿ ಆಗಬೇಕಿದೆ. ಆದರೆ, ಗುತ್ತಿಗೆದಾರರ ನಿರ್ಲಕ್ಷೆಯಿಂದ ಸಾಧ್ಯವಾಗಿಲ್ಲ ಎಂದರು. ಬೆಸ್ಕಾಂ ಅಧಿಕಾರಿ ಜಿ.ಶಿವಪ್ರಸಾದ್ ಮಾಹಿತಿ ನೀಡಿ ಬಾಕಿ ಉಳಿದ ಭಾಗ್ಯಲಕ್ಷ ಯೋಜನೆ ಫಲಾನುಭವಿಗಳಿಗೆ ವ್ಯವಸ್ಥೆ ಕಲ್ಪಿಸಲಾಗುವುದು. ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಒಟ್ಟು ೨೦ ವಿವೇಕಾನಂದ ಕೊಠಡಿಗಳನ್ನು ನಿರ್ಮಿಸಿ ವಿವಿಧ ಶಾಲೆಗಳಿಗೆ ಬಳಿಸಿಕೊಳ್ಳಲಾಗುತ್ತಿದೆ.ಗ್ರಾಮೀಣ ಭಾಗದಲ್ಲಿ ಸೋರುವ ಶಾಲೆಗಳ ಮಾಹಿತಿ ನೀಡಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಮುಖ್ಯಮಂತ್ರಿಗಳಿಂದ ೮ ಕೋಟಿ, ನನ್ನ ಅನುದಾನದಲ್ಲಿ ೧೬ಕೋಟಿ ಒಟ್ಟು ೨೪ ಕೋಟಿ ಹಣವನ್ನು ಕೆಆರ್‌ಐಡಿಎಲ್, ನಿರ್ಮಿತಿ ಕೇಂದ್ರ, ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗಕ್ಕೆ ನೀಡಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಸೂಚನೆ ನೀಡಿದರು. ಸಿಡಿಪಿಒ ಹರಿಪ್ರಸಾದ್, ೮ ಅಂಗನವಾಡಿ ಕಟ್ಟಡ ಶಿಥಿಲಗೊಂಡಿದ್ದು ಅವುಗಳನ್ನುಬೇರೆಡೆ ಸ್ಥಳಾಂತರಿಸಲಾಗಿದೆ ಎಂದರು.
ಗ್ರಾಮೀಣ ಭಾಗದ ಕುಡಿವ ಶುದ್ಧ ನೀರಿನ ಘಟಕಗಳನ್ನು ಆಯಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಹಸ್ತಾಂತರ ಮಾಡುವಂತೆ ಸೂಚನೆ ನೀಡಿದ ಶಾಸಕರು, ಜಿಲ್ಲಾ ಪಂಚಾಯಿತಿ ಸಿಇಒ ಸೋಮಶೇಖರ್‌ರೊಂದಿಗೆ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಈ ಕೆಲಸ ಅಗತ್ಯವಾಗಿ ಆಗಬೇಕು ಎಂದರು. ಕೆಲಸ ಮಾಡದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಶಾಸಕರು ಸೂಚಿಸಿದ್ದು ಸಿಇಒ ಸಮ್ಮತಿಸಿದರು.------
ಪೋಟೋ: ಚಳ್ಳಕೆರೆ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಟಿ.ರಘುಮೂರ್ತಿ ಮಾತನಾಡಿದರು.೨೬ಸಿಎಲ್‌ಕೆ೧