ಹಾವೇರಿ: ವಿವಿಧತೆಯಲ್ಲಿ ಏಕತೆ, ಅಖಂಡತೆ, ಸೋದರತೆ, ಸಮಾನತೆ ಮತ್ತು ಅಹಿಂಸೆಯನ್ನು ದೇಶದ ಮೂಲಮಂತ್ರವಾಗಿಸಿಕೊಳ್ಳಬೇಕು. ಭಯೋತ್ಪಾದನೆ ನಿರ್ಮೂಲನೆ ಹಾಗೂ ದೇಶದ ರಕ್ಷಣೆಗೆ ಪ್ರತಿಯೊಬ್ಬರೂ ಕಂಕಣಬದ್ಧರಾಗಬೇಕು. ದೇಶದ ಸಮಗ್ರತೆ ಮತ್ತು ರಾಷ್ಟ್ರಾಭಿಮಾನವನ್ನು ಎತ್ತಿಹಿಡಿಯುವ ಸಂಕಲ್ಪ ಮಾಡೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.
ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಸ್ವಾತಂತ್ರ್ಯವು ನಮಗೆ ದೊರೆತ ಅಮೂಲ್ಯ ಪರಂಪರೆಯಾಗಿದ್ದು, ಅದನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಇನ್ನಷ್ಟು ಬಲಿಷ್ಠ ಭಾರತವನ್ನು ನೀಡುವುದು ಪ್ರತಿಯೊಬ್ಬ ಭಾರತೀಯನ ಪವಿತ್ರ ಕರ್ತವ್ಯವಾಗಿದೆ. ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ಯಾರೂ ನೀಡಿದ ಉಡುಗೊರೆಯಲ್ಲ. ಶತಮಾನಗಳ ಕಾಲ ಅಸಂಖ್ಯಾತ ಭಾರತೀಯರು ನಡೆಸಿದ ನಿರಂತರ ಹೋರಾಟ, ತ್ಯಾಗ, ಧೈರ್ಯ ಮತ್ತು ಅಚಲ ಸಂಕಲ್ಪದ ಫಲವಾಗಿದೆ ಎಂದರು.
ಹಾವೇರಿ ನೆಲದ ಕೊಡುಗೆ..ಸ್ವಾತಂತ್ರ್ಯ ಹೋರಾಟದಲ್ಲಿ ಹಾವೇರಿ ಜಿಲ್ಲೆಯ ನೆಲವೂ ತನ್ನದೇ ಆದ ಹೆಜ್ಜೆಗುರುತು ಮೂಡಿಸಿದೆ. ಅಖಂಡ ಧಾರವಾಡ ಜಿಲ್ಲೆಯ ಭಾಗವಾಗಿದ್ದ ಸಂದರ್ಭದಲ್ಲಿ ಈ ಭಾಗದ ಅನೇಕ ಮಹನೀಯರು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಮೈಲಾರ ಮಹದೇವಪ್ಪ, ಸಂಗೂರ ಕರಿಯಪ್ಪ, ಮೆಣಸಿನಹಾಳ ತಿಮ್ಮನಗೌಡ, ಶಿವಪ್ಪ ನೇಸ್ವಿ, ಹೊಸಮನಿ ಸಿದ್ದಪ್ಪ ಸೇರಿದಂತೆ ಅನೇಕ ಹೋರಾಟಗಾರರ ತ್ಯಾಗ-ಬಲಿದಾನಗಳು ಜಿಲ್ಲೆಯ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿವೆ. ಎಲೆಮರೆಯ ಕಾಯಿಯಂತೆ ದುಡಿದ ಅನೇಕ ಹೋರಾಟಗಾರರನ್ನು ಸ್ಮರಿಸಬೇಕಾಗಿದೆ ಎಂದರು.
ಜನಪರ ಯೋಜನೆಗಳಿಗೆ ಆದ್ಯತೆ..
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಘನತೆಯ ಬದುಕು ಕಲ್ಪಿಸುವ ಉದ್ದೇಶ ಹೊಂದಿವೆ. ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳ ಮೂಲಕ ಕೋಟ್ಯಂತರ ಕುಟುಂಬಗಳಿಗೆ ನೆರವು ದೊರೆತಿದೆ. ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 54,432 ಹುದ್ದೆಗಳ ನೇರ ನೇಮಕಾತಿಗೆ ಚಾಲನೆ ನೀಡಲಾಗಿದೆ. ಭೂಗ್ಯಾರಂಟಿ ಮೂಲಕ ಅರ್ಹರಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ ಎಂದರು.
ಕೃಷಿ ಕ್ಷೇತ್ರದಲ್ಲಿ ಬೆಳೆ ಮೌಲ್ಯವರ್ಧನೆ, ಕೃಷಿ ತ್ಯಾಜ್ಯ ಮರುಬಳಕೆ, ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳ ಉತ್ತೇಜನ, ಸಸ್ಯ ಸಂಜೀವಿನಿ ಯೋಜನೆ ಹಾಗೂ ರೈತ ಕರೆ ಕೇಂದ್ರದಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಕೆ ಸೇರಿದಂತೆ ಹಲವು ಕ್ರಮ ಕೈಗೊಳ್ಳಲಾಗಿದೆ. ಜಲ ಸಂರಕ್ಷಣೆಗೆ ಕೃಷಿ ಭಾಗ್ಯ ಯೋಜನೆಯನ್ನು ಮರು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.ಜಿಲ್ಲೆಗೆ ಅಭಿವೃದ್ಧಿಯ ಭರವಸೆ..
ಜಿಲ್ಲೆಯ ಹಿಮ್ಸ್ ಆವರಣದಲ್ಲಿ 50 ಹಾಸಿಗೆಗಳ ತೀವ್ರ ನಿಗಾ ಘಟಕ ಪೂರ್ಣಗೊಂಡಿದೆ. ಜಿಲ್ಲೆಗೆ ಎಂಆರ್‌ಐ ಸ್ಕ್ಯಾನ್ ಯಂತ್ರ ಮಂಜೂರಾಗಿ ಜಿಲ್ಲಾಸ್ಪತ್ರೆಯಲ್ಲಿ ಅಳವಡಿಸಲಾಗಿದೆ. ಹಾವೇರಿ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿಗೆ 70 ಸೀಟುಗಳ ಅನುಮೋದನೆ ದೊರೆತಿದೆ. ಜಿಲ್ಲೆಯ 14 ವರ್ಷ ಪೂರ್ಣಗೊಂಡು 15 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಎಚ್‌ಪಿವಿ ಲಸಿಕಾ ಅಭಿಯಾನ ನಡೆಸಿ ಈವರೆಗೆ 10,161 ಮಕ್ಕಳಿಗೆ ಲಸಿಕೆ ನೀಡಲಾಗಿದೆ ಎಂದರು.ಈ ವೇಳೆ ರಾಜ್ಯ ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಎಸ್‌ಎಫ್‌ಎನ್ ಗಾಜಿಗೌಡ್ರ, ಕೋಟ್ರೇಶಪ್ಪ ಬಸೇಗಣ್ಣಿ, ಹನುಮಂತಪ್ಪ ಮರಗಡಿ, ಎಂ.ಎಂ. ಮೈದೂರ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ದಲ್ಜಿತ್‌ಕುಮಾರ, ಎಸ್‌ಪಿ ಯಶೋದಾ ವಂಟಗೋಡಿ, ಎಡಿಸಿ ನಾಗರಾಜ ಎಲ್., ಹೆಚ್ಚುವರಿ ಎಸ್‌ಪಿ ಲಕ್ಷ್ಮಣ ಶಿರಕೋಳ, ಪುನೀತ್ ಆರ್., ಶರಣಮ್ಮ ಕೆ., ಕಲ್ಯಾಣಿ ಕಾಂಬ್ಳೆ, ಲತಾ ಬಿ.ಎಚ್. ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.