ಬಡವರ ಮಕ್ಕಳೇ ಹೆಚ್ಚು ಸಂಖ್ಯೆಯಲ್ಲಿ ಕಲಿಯುವ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಅನುಭವವೇ ವಿಭಿನ್ನವಾಗಿದ್ದು, ನಾವುಗಳು ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದಾಗ ಮಾತ್ರ ಶಿಕ್ಷಕ ವೃತ್ತಿಗೆ ನ್ಯಾಯ ದೊರಕಿಸಬಹುದಾಗಿದೆ. ಪ್ರಸ್ಥುತ ಸಮಾಜದಲ್ಲಿ ನಡೆದಿರುವ ಬೆಳವಣಿಗೆ ತೀವ್ರ ಆತಂಕಕಾರಿಯಾಗಿದ್ದು, ಶಿಕ್ಷಕರಾದ ನಾವುಗಳು ಮಕ್ಕಳ ವಿಚಾರದಲ್ಲಿ ಎಚ್ಚರ ವಹಿಸುವ ಅಗತ್ಯವಿದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ ರತ್ನಾ ಕುಮಾರಿ ಹೇಳಿದರು.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಬಡವರ ಮಕ್ಕಳೇ ಹೆಚ್ಚು ಸಂಖ್ಯೆಯಲ್ಲಿ ಕಲಿಯುವ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಅನುಭವವೇ ವಿಭಿನ್ನವಾಗಿದ್ದು, ನಾವುಗಳು ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದಾಗ ಮಾತ್ರ ಶಿಕ್ಷಕ ವೃತ್ತಿಗೆ ನ್ಯಾಯ ದೊರಕಿಸಬಹುದಾಗಿದೆ. ಪ್ರಸ್ಥುತ ಸಮಾಜದಲ್ಲಿ ನಡೆದಿರುವ ಬೆಳವಣಿಗೆ ತೀವ್ರ ಆತಂಕಕಾರಿಯಾಗಿದ್ದು, ಶಿಕ್ಷಕರಾದ ನಾವುಗಳು ಮಕ್ಕಳ ವಿಚಾರದಲ್ಲಿ ಎಚ್ಚರ ವಹಿಸುವ ಅಗತ್ಯವಿದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ ರತ್ನಾ ಕುಮಾರಿ ಹೇಳಿದರು.ತುಂಗಾ ವಿಧ್ಯಾವರ್ಧಕ ಸಂಘ, ತುಂಗಾ ಮಹಾವಿದ್ಯಾಲಯದ ವತಿಯಿಂದ ಕಾಲೇಜಿನ ಸೆಮಿನಾರ್ ಸಭಾಂಗಣದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿ, ಸರ್ಕಾರಿ ಅನುದಾನದ ಕೊರತೆ ಇರುವುದು ಸಹಜ. ಆದರೆ ಅದನ್ನೇ ಸಮಸ್ಯೆಯಾಗಿ ಕಾಣದೇ ದಾನಿಗಳ ನೆರವನ್ನು ಪಡೆದು ಕೊರತೆಯನ್ನು ನೀಗಿಸಿಕೊಳ್ಳುವ ಅನಿವಾರ್ಯತೆಯೂ ಇದೆ. ನಾನು ಕಲಿತ ಕಾಲೇಜಿನಲ್ಲಿ ಈ ದಿನ ನನಗೆ ಪಾಠ ಮಾಡಿದ ಶಿಕ್ಷಕರ ಸಮ್ಮುಖದಲ್ಲಿ ದೊರೆತ ಈ ಗೌರವದಿಂದ ಹೃದಯ ತುಂಬಿ ಬಂದಿದೆ. ನನಗೆ ದೊರೆತಿರುವ ಪ್ರಶಸ್ತಿಯ ಗೌರವ ನನಗೆ ಸಹಕಾರ ನೀಡಿದ ಸರ್ವರಿಗೂ ಸಲ್ಲುತ್ತದೆ ಎಂದರು.
ಸರ್ಕಾರಿ ಶಾಲೆಗಳಿಗೆ ಬರುವ ವಿಧ್ಯಾರ್ಥಿಗಳು ಮುಗ್ದರಾಗಿದ್ದು, ಯೂನಿಫಾರಂ ಸೇರಿದಂತೆ ಯಾವುದೇ ಬಾಹ್ಯ ಅಲಂಕಾರಗಳ ಬಗ್ಗೆ ಅವರಲ್ಲಿ ವಿಶೇಷ ವ್ಯಾಮೋಹ ಇರುವುದಿಲ್ಲ. ಈ ವಿಧ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ನಾವುಗಳು ಈ ಮಕ್ಕಳನ್ನು ಮಾತೃ ಹೃದಯದಿಂದ ಕಾಣುವ ಅನಿವಾರ್ಯತೆ ಇದೆ ಹಾಗೂ ಅವರ ಸರ್ವಾಂಗೀಣ ಅಭಿವೃದ್ಧಿಗೂ ಆದ್ಯತೆಯನ್ನು ನೀಡಬೇಕಿದೆ ಎಂದು ಹೇಳಿದರು.ಗೌರವ ಸ್ವೀಕರಿಸಿ ಮಾತನಾಡಿದ ವಿಶೇಷ ಸಾಧಕ ಹಾಗೂ ಕಾಲೇಜಿನ ಹಿರಿಯ ವಿಧ್ಯಾರ್ಥಿ ಕೊಂಡ್ಲೂರು ಸರ್ಕಾರಿ ಪ್ರೌಡಶಾಲೆಯ ಶಿಕ್ಷಕ ಎಚ್.ವಿ.ಸಂಪತ್, ಜೀವನದಲ್ಲಿ ಸೋಲು ಎನ್ನುವ ಪದವೇ ಇಲ್ಲ. ಗುರಿ ತಲುಪುವ ಪ್ರಯತ್ನದಿಂದ ಹಿಂದೆ ಸರಿಯಬಾರದು. ಗೆಲುವಿನ ಹತ್ತಿರಕ್ಕೆ ಹೋಗುವ ಪ್ರಯತ್ನ ಮಾಡದೇ ಸೋಲುತ್ತೇವೆ. ವಿಧ್ಯಾರ್ಥಿಗಳು ನಕಾರಾತ್ಮಕ ವಿಚಾರಗಳಿಗೆ ಆದ್ಯತೆ ನೀಡದೆ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ನನಗೆ ಬದುಕನ್ನು ನೀಡಿದ ಈ ಕಾಲೇಜು ನನ್ನ ಪಾಲಿನ ದೇಗುಲವಾಗಿದೆ. ನನ್ನ ಜ್ಞಾನದ ವಿಕಾಸಕ್ಕೆ ಈ ಕಾಲೇಜಿನ ಗ್ರಂಥಾಲಯದಲ್ಲಿರುವ ಅಮೂಲ್ಯವಾದ ಸಂಗ್ರಹ ಬಹುಮುಖ್ಯ ಕಾರಣ. ಈ ಕಾಲೇಜಿನ ಎದುರು ಹೆದ್ದಾರಿಯಲ್ಲಿ ಹಾದು ಹೋಗುವ ವೇಳೆ ಮನಸ್ಸಿನಲ್ಲಿ ನಮಸ್ಕರಿಸಿ ಹೋಗುತ್ತೇನೆ ಮತ್ತು ಕಾಲೇಜಿನ ಮೇಲಿನ ಅಭಿಮಾನದಿಂದ ಕಾಲೇಜಿಗೆ ಸಮೀಪದಲ್ಲೇ ನೆಲೆಸಿದ್ದೇನೆ ಹಾಗೂ ನನಗೆ ವಿದ್ಯೆ ಕಲಿಸಿದ ಎಲ್ಲ ಗುರುಗಳು ಪ್ರಾರ್ಥಸ್ಮರಣೀಯರಾಗಿದ್ದಾರೆ ಎಂದು ಸ್ಮರಿಸಿದರು.ತುಂಗಾ ಮಹಾವಿದ್ಯಾಲಯದ ಪ್ರಾಂಶುಪಾಲ ಆರ್.ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ತುಂಗಾ ವಿಧ್ಯಾವರ್ಧಕ ಸಂಘ,ದ ಅಧ್ಯಕ್ಷ ಎಂ.ಎನ್.ರಮೇಶ್, ನಿಕಟಪೂರ್ವ ಅಧ್ಯಕ್ಷ ಪಟಮಕ್ಕಿ ಮಹಾಬಲೇಶ್, ಕಾರ್ಯದರ್ಶಿ ಬಿ.ಗಣಪತಿ, ನಿಕಟಪೂರ್ವ ಡಾನ್ ರಾಮಣ್ಣ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ನಟರಾಜ್ ಅರಳಸುರುಳಿ, ಪಿಯು ಕಾಲೇಜು ಪ್ರಾಂಶುಪಾಲ ಸಿ.ಪ್ರಕಾಶ್, ಐಕ್ಯೂಎಸಿ ಸಂಚಾಲಕ ಎಂ. ನಾಗರಾಜ್ ಸೇರಿದಂತೆ ಕಾಲೇಜಿನ ಉಪನ್ಯಾಸಕರು,ವಿದ್ಯಾರ್ಥಿಗಳು ಇದ್ದರು.