ಸಾರಾಂಶ
ಕನ್ನಡಪ್ರಭ ವಾರ್ತೆ ಹಾನಗಲ್ಲ
ಇಡೀ ಪ್ರಪಂಚಕ್ಕೆ ಮಹರ್ಷಿ ವಾಲ್ಮೀಕಿ ಸಂದೇಶಗಳು ತಲುಪಬೇಕಾಗಿದೆ. ಅವರ ತಪಸ್ಸಿನ ಫಲವೇ ರಾಮಾಯಣ. ಅದು ನಮ್ಮ ಸಂಸ್ಕೃತಿ. ಸಂಪ್ರದಾಯದ ಮಹಾಕಾವ್ಯ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ಶನಿವಾರ ಹಾನಗಲ್ಲಿನ ಡಾ. ಬಾಬು ಜಗಜೀವನರಾಮ ಸಮುದಾಯ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ, ಮಹರ್ಷಿ ವಾಲ್ಮೀಕಿ ನಾಯಕ ಸಂಘ ಸಂಯುಕ್ತವಾಗಿ ಆಯೋಜಿಸಿದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಾತ್ಮರ ಜಯಂತಿ ಸಂದರ್ಭದ ಭಾವ ಬಿಂಬದ ಮೆರಣಿಗೆಗಳಲ್ಲಿ ಅವರ ಆದರ್ಶವನ್ನು ಪ್ರತಿಪಾದಿಸುವ ಹಾಡು, ಕೀರ್ತನೆ ಭಜನೆ ಶ್ಲೋಕಗಳನ್ನು ಕೇಳುವಂತಾಗಬೇಕು. ಮಹಾಪುರುಷರು ಸಮಾಜಕ್ಕೆ ಒಳಿತನ್ನೇ ನೀಡಿದರು. ಆದರೆ ನಾವು ಅವರನ್ನು ನಾಡಿನ ಹಿತಕ್ಕೆ ಬಳಸಿಕೊಳ್ಳಬೇಕು. ದ್ವೇಷ-ದಳ್ಳುರಿ ನಮ್ಮ ಸಂಸ್ಕೃತಿ ಅಲ್ಲ. ಶಾಂತಿ-ಸತ್ಯವಿರುವಲ್ಲಿ ಶ್ರೀರಾಮಚಂದ್ರ ಹಾಗೂ ಮಹರ್ಷಿ ವಾಲ್ಮೀಕಿ ಅವರನ್ನು ಕಾಣಬೇಕಾಗಿದೆ. ಶೈಕ್ಷಣಿಕ ಉನ್ನತಿಯನ್ನ ಬಯಸಿ ಅತ್ತ ನಾವೆಲ್ಲ ಸಾಗಬೇಕಾಗಿದೆ. ಬದುಕು ಕಟ್ಟಿಕೊಳ್ಳುವ ಶಿಕ್ಷಣ ನೀಡಬೇಕಾಗಿದೆ ಎಂದರು.
ಅಭಿವೃದ್ಧಿ ಕಾಮಗಾರಿಗಳಲ್ಲಿ ಕೂಡ ಈಗ ರೋಸ್ಟರ್ ಇದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಪ್ರತ್ಯೇಕ ಯೋಜನೆಗಳನ್ನು ಸರ್ಕಾರ ರೂಪಿಸಿದೆ. ಸಮಾಜದ ಆರ್ಥಿಕ ಸುಧಾರಣೆಗೆ ವಿಶೇಷ ಕಾಳಜಿ ವಹಿಸಿದೆ. ತಾಲೂಕಿನಲ್ಲಿ ಶೀಘ್ರ ೫ ವಾಲ್ಮೀಕಿ ಭವನ ನಿರ್ಮಾಣವಾಗಲಿವೆ. ಈಗಿರುವ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ವಾಲ್ಮೀಕಿ ಭವನ ನಿರ್ಲಕ್ಷಕ್ಕೆ ಒಳಗಾಗಿದ್ದು, ಅದಕ್ಕೆ ಮೇಲ್ಮಹಡಿ ನಿರ್ಮಿಸಿ ದುರಸ್ತಿಗೊಳಿಸಿ ಸಮಾಜದ ಕಾರ್ಯಗಳಿಗೆ ಬಳಸಲು ಅನುಕೂಲ ಮಾಡಿಕೊಡಲಾಗುವುದು. ಜನಸಂಖ್ಯೆಗನುಗುಣವಾಗಿ ವಿದ್ಯಾರ್ಥಿ ವಸತಿ ನಿಲಯಗಳು ಬೇಕಾಗಿದ್ದು ಅದಕ್ಕಾಗಿ ಪ್ರಯತ್ನ ನಡೆದಿದೆ ಎಂದು ಮಾನೆ ತಿಳಿಸಿದರು.ತಾಲೂಕಿನಲ್ಲಿ ಏಕಲವ್ಯ ಶಾಲೆ ಸ್ಥಾಪಿಸಲು ಕಾನೂನಿನ ಅಡಚಣೆ ನಿವಾರಿಸಿ ಶಾಲೆ ಆರಂಭಿಸಲಾಗುವುದು. ವೈದ್ಯರ ಕೊರತೆ ಆಸ್ಪತ್ರೆಗಳಿಗೆ ಕಾಡುತ್ತಿದೆ. ಬಂದವರು ಒಂದು ತಿಂಗಳಲ್ಲಿ ಬಿಟ್ಟು ಹೋಗುತ್ತಾರೆ. ಗುತ್ತಿಗೆ ಆಧಾರದ ಮೇಲೆ ವೈದ್ಯರನ್ನು ಕರೆಯಲಾಗುತ್ತಿದೆ. ಸಾರ್ವಜನಿಕರು ಕೂಡ ವೈದ್ಯರನ್ನು ಉಳಿಸಿಕೊಳ್ಳುವ ರೀತಿ ನಡೆದುಕೊಳ್ಳಬೇಕು ಎಂದು ಮಾನೆ ತಿಳಿಸಿದರು.
ವಾಲ್ಮೀಕಿ ಸಮಾಜದ ಮುಖಂಡ ಪುಟ್ಟಪ್ಪ ನರೇಗಲ್ಲ ಮಾತನಾಡಿ, ತಾಲೂಕಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿ ವಸತಿ ನಿಲಯಗಳು ವ್ಯವಸ್ಥಿತವಾಗಿಲ್ಲ. ಈ ಬಗ್ಗೆ ಅಧಿಕಾರಿಗಳ ನಿರ್ಲಕ್ಷ ಸಲ್ಲದು. ಈ ಕುರಿತು ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿದರೂ ಏನೂ ಪ್ರಯೋಜನವಾಗಿಲ್ಲ. ಇಂಥ ವಸತಿ ನಿಲಯಗಳಲ್ಲಿ ಮಕ್ಕಳಿಗೆ ಶೈಕ್ಷಣಿಕ ವಾತಾವರಣವಿಲ್ಲ ಎಂದು ದೂರಿದರಲ್ಲದೆ, ಊರ ಹೊರಗಿನ ನಿರ್ಲಕ್ಷಕ್ಕೊಳಗಾದ ವಾಲ್ಮೀಕಿ ಭವನ ಬೇರೆ ಇಲಾಖೆಗೆ ಕೊಟ್ಟು, ಹಾನಗಲ್ಲ ಪಟ್ಟಣದಲ್ಲಿ ಜಾಗೆ ಕೊಡಿಸಿ ಭವನ ನಿರ್ಮಿಸಿ ಕೊಡಲು ಶಾಸಕರಿಗೆ ಮನವಿ ಮಾಡಿದರು.ತಾಲೂಕು ತಹಸೀಲ್ದಾರ ರವಿಕುಮಾರ ಕೊರವರ ಮಾತನಾಡಿ, ಮಹಾತ್ಮರ ಉತ್ಸವಗಳು ಅರ್ಥಪೂರ್ಣವಾಗಿ ಆಚರಣೆಗೊಂಡು ಅವರ ಸಂದೇಶಗಳು ಸಮಾಜಕ್ಕೆ ತಲುಪುವಂತಾಗಬೇಕು. ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರಗಳು ನಡೆಯುವ ಮೂಲಕ ಉಳಿದ ಮಕ್ಕಳಿಗೆ ಸ್ಪೂರ್ತಿಯಾಗಬೇಕು ಎಂದರು.ಶಿಕ್ಷಕ ಶ್ರೀಕಾಂತ ಹುಲ್ಮನಿ ಮಹರ್ಷಿ ವಾಲ್ಮೀಕಿ ಅವರ ಕುರಿತು ಉಪನ್ಯಾಸ ನೀಡಿದರು. ಗಣ್ಯರಾದ ಉಮೇಶ ಗೌಳಿ, ಭರಮಣ್ಣ ಶಿವೂರ, ಚಂದ್ರಪ್ಪ ಜಾಲಗಾರ, ಪುಟ್ಟಪ್ಪ ನರೇಗಲ್ಲ, ವೀರೇಶ ಬೈಲವಾಳ, ಹೊನ್ನಪ್ಪ ಅಕ್ಕಿವಳ್ಳಿ, ಚೇತನ್‌ಕುಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್. ದೇವರಾಜು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಗಂಗಾ ಹಿರೇಮಠ, ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಸಿಪಿಐ ಎಸ್.ಆರ್. ಶ್ರೀಧರ ಮೊದಲಾದವರಿದ್ದರು.
ಸಂಗೀತ ಶಿಕ್ಷಕ ಜಗದೀಶ ಮಡಿವಾಳರ ಸಂಗಡಿಗರು ಪ್ರಾರ್ಥನೆ ಹಾಡಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಗಂಗಾ ಹಿರೇಮಠ ಸ್ವಾಗತಿಸಿದರು. ಪುರಸಭೆ ಅಧಿಕಾರಿ ಶಿವಾನಂದ ಕ್ಯಾಲಕೊಂಡ ಕಾರ್ಯಕ್ರಮ ನಿರೂಪಿಸಿದರು.ಇದೇ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಬೆಳಗ್ಗೆ ಶ್ರೀ ಕುಮಾರೇಶ್ವರ ವಿರಕ್ತಮಠದಿಂದ ಡಾ. ಬಾಬು ಜಗಜೀವನರಾಮ ಭವನದವರೆಗೆ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು.