ಸಾರಾಂಶ
ಸಿರುಗುಪ್ಪದಲ್ಲಿ ಮಹಿಳೆಯರಿಗೆ ತರಬೇತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಸಿರುಗುಪ್ಪಗ್ರಾಮೀಣ ಭಾಗದ ಮಹಿಳೆಯರು ಸ್ವ ಉದ್ಯಮ ಸ್ಥಾಪಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ತಾಪಂ ಸಹಾಯಕ ನಿರ್ದೇಶಕ ಬಸವರಾಜ ಹೇಳಿದರು.
ನಗರದ ತಾಪಂ ಸಭಾಂಗಣದಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಜೀವಿನಿ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಅಭಿಯಾನ ಘಟಕ, ತಾಪಂ ಅಭಿಯಾನ ನಿರ್ವಹಣಾ ಘಟಕ ಸಹಯೋಗದಲ್ಲಿ ಗ್ರಾಮೀಣ ಸಮೃದ್ಧಿ ಸ್ಥಿತಿಸ್ಥಾಪಕ ಯೋಜನೆ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡ ಒಂದು ದಿನದ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.ಗ್ರಾಮೀಣ ಜೀವನೋಪಾಯ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳು ಗೃಹಪಯೋಗಿ ಮತ್ತು ಕರಕುಶಲ ವಸ್ತುಗಳ ಉತ್ಪಾದಿಸುವ ತರಬೇತಿ ಪಡೆದು ವಿವಿಧ ರಾಷ್ಟ್ರೀಯ ಕೃತ ಬ್ಯಾಂಕ್‌ಗಳ ಮೂಲಕ ಆರ್ಥಿಕ ನೆರವನ್ನು ಪಡೆದ ಮಹಿಳೆಯರು ವೈಯಕ್ತಿಕ ಉದ್ಯಮ ಹಾಗೂ ಗುಂಪುಗಳಿಂದ ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲಾಗುತ್ತದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ಬಡಕುಟುಂಬದ ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳಿಗೆ ಯೋಗ್ಯ ಮಾರುಕಟ್ಟೆ ಒದಗಿಸಿ, ಆರ್ಥಿಕವಾಗಿ ಸಬಲೀಕರಣಗೊಳಿಸುವುದು ಹಾಗೂ ಗ್ರಾಮೀಣ ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡುವುದು ನಮ್ಮ ಉದ್ದೇಶವಾಗಿದೆ ಎಂದರು.ಜಿಪಂ ತಾಂತ್ರಿಕ ವಿಭಾಗದ ಜಿಲ್ಲಾ ಸಂಯೋಜಕ ಮಾರೇಶ್, ತಾಲೂಕು ವ್ಯವಸ್ಥಾಪಕ ಗೌಸಲ್ ಅಜೀಮ್, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸಣ್ಣ ಹನುಮಾನ ಗೌಡ, ತಾಲೂಕು ಸಮುದಾಯ ಸಂಪನ್ಮೂಲ ಅಧಿಕಾರಿಗಳಾದ ಆಲಂಬಾಷಾ, ಯಶೋದಾ, ತಾಲೂಕು ತಾಂತ್ರಿಕ ವಿಭಾಗದ ಜಿ.ಪಿ.ಎಲ್.ಎಫ್. ಅಧಿಕಾರಿ ನಾಯಕರ ಹುಲಿಗೆಮ್ಮ ಹಾಗೂ ತಾಲೂಕಿನ 27 ಗ್ರಾಪಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷಿ ಸಖಿ, ಪಶುಸಖಿ, ಮುಖ್ಯ ಪುಸ್ತಕ ಬರಹಗಾರರು, ಸಮುದಾಯ ಸಂಪನ್ಮೂಲ ಮಹಿಳೆಯರು ಭಾಗವಹಿಸಿದ್ದರು.