ಗದಗ: ಮಹಿಳೆಯರು ಅನ್ಯಾಯ ಮತ್ತು ದೌರ್ಜನ್ಯದ ವಿರುದ್ಧ ಧ್ವನಿ ಎತ್ತಬೇಕು. ಜಿಲ್ಲೆಯ ಮಹಿಳೆಯರು ದೌರ್ಜನ್ಯ ರಹಿತರಾಗಿರಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಹೇಳಿದರು.

ಶುಕ್ರವಾರ ಗದಗ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ರಾಜ್ಯ ಮಹಿಳಾ ಆಯೋಗ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಸ್ಥಳೀಯ ಹಾಗೂ ಆಂತರಿಕ ದೂರು ನಿವಾರಣಾ ಸಮಿತಿ ಸದಸ್ಯರಿಗೆ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ-2013 (POSH ACT ) ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹೆಣ್ಣುಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು. ಮಹಿಳೆಯರ ಯಶಸ್ಸಿಯಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಪುರುಷರ ಸಹಕಾರವೂ ಅಗತ್ಯವಾಗಿರುತ್ತದೆ. ಮಹಿಳೆಯರು ತಮಗಾದ ದೌರ್ಜನ್ಯವನ್ನು ಸಹಿಸಿಕೊಳ್ಳಬಾರದು. ಸಾಕಷ್ಟು ಕಾನೂನು ಮಹಿಳಾ ಸಬಲೀಕರಣಕ್ಕಾಗಿ ಜಾರಿಗೊಂಡಿವೆ. ಹೆಣ್ಣುಮಕ್ಕಳಿಗೆ ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯವಾಗುತ್ತಿದ್ದರೆ ಪೋಸ್ಟ್ ಆ್ಯಕ್ಟ್‌ನಡಿ ರಚಿತವಾಗಿರುವ ಸಮಿತಿಗೆ ದೂರು ಕೊಟ್ಟು ಪರಿಹಾರ ಕಂಡುಕೊಳ್ಳಬಹುದು. ಈ ಅಧಿನಿಯಮ ಜಾರಿಯಾದ ಬಗೆಯನ್ನು ವಿವರಿಸಿದ ಅವರು ಕಾಯ್ದೆಯ ದುರ್ಬಳಕೆಯಾಗಬಾರದು ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಮಾತನಾಡಿ, ಕಾನೂನು ಸೇವಾ ಪ್ರಾಧಿಕಾರದಿಂದ ವಿವಿಧ ಇಲಾಖೆಯ ಸಹಯೋಗದೊಂದಿಗೆ POSH ACTನ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. POSH ನ ಉದ್ದೇಶವನ್ನು ಎಲ್ಲರೂ ತಿಳಿದುಕೊಳ್ಳಬೇಕು. ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ತೊಂದರೆಯಾದರೆ ಅಲ್ಲಿಯೇ ಇರುವ ಕಮಿಟಿಗೆ ದೂರು ಕೊಡಬಹುದು. ಸಿವಿಲ್ ಕೋರ್ಟ್‌ಗೆ ಇರುವ ಅಧಿಕಾರವೇ ಆ ಕಮಿಟಿಗೂ ಇರುತ್ತದೆ. ಈ ಕಾಯ್ದೆಯು ಸರ್ಕಾರಿ ಕ್ಷೇತ್ರವಲ್ಲದೇ ಖಾಸಗಿ, ಸಂಘ-ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೂ ಸಂಬಂಧಿಸಿದ್ದಾಗಿರುತ್ತದೆ. ಕಾಯ್ದೆಯ ಸದ್ಬಳಕೆಯಾಗಬಾರದು. ಒಂದು ವೇಳೆ ಕಾಯ್ದೆಯ ಉದ್ದೇಶಪೂರ್ವಕವಾದ ದುರ್ಬಳಕೆಯಾದರೆ ದೂರುದಾರರಿಗೂ ಶಿಕ್ಷೆಯಾಗುತ್ತದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿದರು. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಟಿ.ಎಸ್. ಚಂದ್ರಿಕಾ ಅವರು ಸ್ಥಳೀಯ ಹಾಗೂ ಆಂತರಿಕ ದೂರು ನಿವಾರಣಾ ಸಮಿತಿ ಸದಸ್ಯರಿಗೆ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ 2013ರ ಕುರಿತು ಉಪನ್ಯಾಸ ನೀಡಿದರು.


ಎಸ್ಪಿ ರೋಹನ ಜಗದೀಶ್, ಎಡಿಸಿ ಡಾ. ದುರಗೇಶ್ ಕೆ.ಆರ್., ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ರೂಪಾ, ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ರಾಧಾ ಮಣ್ಣೂರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಯಶ್ರೀ ಆರ್. ಹಾಜರಿದ್ದರು. ಮಲ್ಲಪ್ಪ ಹೊಸಳ್ಳಿ ಕಾರ್ಯಕ್ರಮ ನಿರೂಪಿಸಿದರು. ನಿರೂಪಣಾಧಿಕಾರಿ ಮಹಾಂತಸ್ವಾಮಿ ಪೂಜಾರ ವಂದಿಸಿದರು.