ಸಾರಾಂಶ
ಧಾರವಾಡ: ಆಧುನಿಕ ಕಾಲಘಟ್ಟದಲ್ಲಿ ಮಹಿಳೆಯರು ಸಾವಲಂಬಿಗಳಾಗುವತ್ತ ಮುನ್ನಡೆಯಬೇಕು. ಈ ನಿಟ್ಟಿನಲ್ಲಿ ಸೆಲ್ಕೋ ಫೌಂಡೇಶನ್ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಹುಬ್ಬಳ್ಳಿ ಸ್ಲಂ ಸಮಿತಿ ಅಧ್ಯಕ್ಷ ರಮೇಶ್ ಮಹಾದೇವಪ್ಪನವರ ಹರ್ಷ ವ್ಯಕ್ತಪಡಿಸಿದರು.
ನಗರದಲ್ಲಿ ಸೆಲ್ಕೋ ಫೌಂಡೇಶನ್, ಸೆಲ್ಕೋ ಇಂಡಿಯಾ ಹಾಗೂ ಬಿಡಿಎಸ್ಎಸ್ ಸಂಸ್ಥೆಯ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಸ್ಮಾರ್ಟ್ ಸ್ತ್ರೀ ನಗರ ಮಹಿಳಾ ಉದ್ಯಮಿಗಳಿಗೆ ಸುಸ್ಥಿರ ಜೀವನೋಪಾಯ ಪರಿಹಾರಗಳು ಎಂಬ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.ಬಿಡಿಎಸ್ಎಸ್‌ನ ಪೀಟರ್ ಆಶೀರ್ವಾದಪ್ಪ ಮಾತನಾಡಿ, ನಗರ ಪ್ರದೇಶದಲ್ಲಿರುವ ಸೌಲಭ್ಯ ವಂಚಿತ ಮಹಿಳೆಯರು ಸೆಲ್ಕೋ ಫೌಂಡೇಶನ್ ಮೂಲಕ ಹಮ್ಮಿಕೊಂಡಿರುವ ಈ ಸ್ಮಾರ್ಟ್ ಸ್ತ್ರೀ ಕಾರ್ಯಾಗಾರದ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕೆವಿಜಿ ಬ್ಯಾಂಕ್ ವ್ಯವಸ್ಥಾಪಕಿ ಶ್ರೀದೇವಿ ಬಡಿಗೇರ ಮಾತನಾಡಿ, ಸೌರಶಕ್ತಿ ಸಂಯೋಜಿತ ಜೀವನೋಪಾಯ ಪರಿಹಾರಗಳ ಕುರಿತು ಚಾಂಪಿಯನ್ ಉದ್ಯಮಿಗಳ ದೃಷ್ಟಿಕೋನ ಎಂಬ ವಿಷಯದ ಮೇಲೆ ಉದ್ಯಮಿಗಳು ಮತ್ತು ಬ್ಯಾಂಕ್ ಹಣಕಾಸು ವ್ಯವಹಾರ ಯಾವ ರೀತಿ ಇರಬೇಕೆಂದು ಸಮಗ್ರ ಮಾಹಿತಿ ಒದಗಿಸಿದರು.ಬಿಡಿಎಸ್ಎಸ್ ಸಂಸ್ಥೆಯ ಪಿಲೀಪ್ ಕುಟ್ಟಿ, ಮಹಿಳೆಯರು ಪ್ರಸ್ತುತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಛಲದಿಂದ ಮುನ್ನುಗ್ಗಿ ಕಾರ್ಯನಿರ್ವಹಿಸಲು ಈ ಕಾರ್ಯಾಗಾರ ಸೂಕ್ತ ವೇದಿಕೆಯಾಗಿದೆ ಎಂದು ಅಭಿಪ್ರಾಯ ಪಟ್ಟರು.
ನಲ್ಮ್ ಸಮುದಾಯ ವ್ಯವಹಾರ ಅಧಿಕಾರಿ ಟಿ.ಆರ್. ವಿದ್ಯಾವತಿ ಮಾತನಾಡಿ, ನಲ್ಮ ಯೋಜನೆ ಅಡಿ ನಗರ ವ್ಯಾಪ್ತಿಯಲ್ಲಿ ಬರುವ ಮಹಿಳೆಯರಿಗೆ ಮಹಿಳಾ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಸಣ್ಣ ಉಳಿತಾಯ ಮಾಡುವುದರ ಜತೆಗೆ ಆರ್ಥಿಕ ಸಬಲೀಕರಣಗೊಳಿಸುವುದು ಹಾಗೂ ನಗರ ವಸತಿ ರಹಿತರಿಗೆ ಆಶ್ರಯ ಕಲ್ಪಿಸುವ ಯೋಜನೆಗಳು ಪ್ರಚಲಿತವಾಗಿವೆ. ಇನ್ನೂ ವಿವಿಧ ಯೋಜನೆಗಳಿದ್ದು, ಸದುಪಯೋಗಪಡಿಸಿಕೊಳ್ಳಲು ಮಹಾನಗರ ಪಾಲಿಕೆ ಕಚೇರಿ ಸಂಪರ್ಕಿಸಬೇಕು ಎಂದರು.ಸೆಲ್ಕೋ ಫೌಂಡೇಶನ್ ಪ್ರಾಜೆಕ್ಟ್ ಮ್ಯಾನೇಜರ್ ಪ್ರಕಾಶ್ ಮೇಟಿ, ಜೀವನೋಪಾಯ ತಂತ್ರಜ್ಞಾನದ ಕುರಿತು ವಿಡಿಯೋ ಪ್ರಶಂಸನಾಪತ್ರಗಳು, ಸಾಕ್ಷ ಚಿತ್ರಗಳ ಪ್ರದರ್ಶನ ಹಾಗೂ ಮಾಹಿತಿ ನೀಡಿದರು.
ಈಗಾಗಲೇ ನಲ್ಮ ಯೋಜನೆ ಹಾಗೂ ಸೆಲ್ಕೋ ಫೌಂಡೇಶನ್ ಸಹಾಯ ಧನಪಡೆದು ಯಶಸ್ವಿ ಮಹಿಳಾ ಉದ್ಯಮಿಗಳಾಗಿರುವವರ ಜತೆ ವೀರೇಶ್ ತಡಹಳ ಸಂವಾದ ನಡೆಸಿದರು.ವ್ಯವಸ್ಥಾಪಕಿ ಅನಿತಾ ಮಹೇಂದ್ರ ಜೀವನೋಪಾಯ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡಿದರು. ಪ್ರಕಾಶ್ ಮೇಟಿ ಮಾತನಾಡಿದರು. ಮಹಿಳಾ ಉದ್ಯಮಿಗಳಾದ ಪದ್ಮಾಕ್ಷಿ ಅಮ್ಮ, ಸಂಪೂರ್ಣ ಆಹಾರ ಉತ್ಪನ್ನಗಳ ಉದ್ಯಮಿ, ರೂಪಾ ಹರಿ, ಚೈತ್ರಾ ಧೂಪ್ಲಾಪುರ, ಚೆನ್ನವ್ವ ಸೌದತ್ತಿ, ವಿಶೇಷ ಚೇತನ ಉದ್ಯಮಿ ಫಕೀರಪ್ಪ ಬಡಿಗೇರ ಹಾಗೂ ಆರೂಢ ಸಂಸ್ಥೆಯ ಮುಖ್ಯಸ್ಥರಾದ ನಾಗರಾಜ ಎಸ್. ಹೂಗಾರ, ಮಹಿಳಾ ಉದ್ಯಮಿಗಳು, ಸ್ವ ಉದ್ಯೋಗ ಆಧಾರಿತ ಸಂಸ್ಥೆಗಳ ಪ್ರತಿನಿಧಿಗಳು, ಸ್ವಸಹಾಯ ಗುಂಪುಗಳ ಸದಸ್ಯರು, ಗೃಹ ಆಧಾರಿತ ಉದ್ಯಮಿಗಳು ಇತರರು ಉಪಸ್ಥಿತರಿದ್ದರು. ವಿವಿಧ ಮಹಿಳಾ ಸಂಘಟನೆಗಳ ಗೃಹ ಉತ್ಪನ್ನಗಳ ಪ್ರದರ್ಶನ, ಮಾರಾಟ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಿಡಿಎಸ್ಎಸ್ ಸಂಸ್ಥೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶೋಭಾ ಸಾಲಿಮಠ ಸ್ವಾಗತಿಸಿದರು.