ಮಹಿಳೆಯರು ಕೌಶಲ್ಯ ಸದ್ಬಳಕೆ ಮಾಡಿಕೊಳ್ಳಲಿ: ಗಣೇಶ್

| Published : Jan 20 2024, 02:01 AM IST

ಸಾರಾಂಶ

ಕುಟುಂಬದ ಸರ್ವತೋಮುಖ ಅಭಿವೃದ್ಧಿಗೆ ಬೇಕಾಗುವ ಸಲಹೆ ನೀಡುವುದೇ ಮಹಿಳಾ ಸಂಗಮ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.

ಕಂಪ್ಲಿ: ಪ್ರತಿಯೊಬ್ಬ ಮಹಿಳೆಯರು ತಮ್ಮಲ್ಲಿರುವ ಕೌಶಲ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಹಾಗಾದಾಗ ಮಾತ್ರ ಯಾವುದಾದರೂ ಕ್ಷೇತ್ರದಲ್ಲಿ ಸಾಧನೆಗೈಯಲು ಸಾಧ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಕಲ್ಯಾಣ ಕರ್ನಾಟಕ ಪ್ರಾದೇಶಿಕ ವಿಭಾಗದ ನಿರ್ದೇಶಕರಾದ ಬಿ. ಗಣೇಶ್ ತಿಳಿಸಿದರು.

ಪಟ್ಟಣದ ಸಂಗಾತ್ರಯ ಸಂಸ್ಕೃತ ಪಾಠಶಾಲೆಯಲ್ಲಿನ ವೀರಶೈವ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್‌ನ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಮಂಗಳವಾರ ನಡೆದ ಮಹಿಳಾ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಿಳೆಯರಲ್ಲಿ ಜ್ಞಾನ, ಕಲಿಕೆ, ಕಾನೂನಿನ ಅರಿವು, ಸರ್ಕಾರದ ಸೌಲಭ್ಯಗಳ ಸದ್ಬಳಕೆ ಕುರಿತು ಮಾಹಿತಿ ನೀಡುವ ಮೂಲಕ ಅವರೊಂದಿಗೆ, ಅವರ ಕುಟುಂಬದ ಸರ್ವತೋಮುಖ ಅಭಿವೃದ್ಧಿಗೆ ಬೇಕಾಗುವ ಸಲಹೆ ನೀಡುವುದೇ ಮಹಿಳಾ ಸಂಗಮ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಸರಳ ಜೀವನದೊಂದಿಗೆ ಸರ್ವರೊಂದಿಗೂ ವಾತ್ಸಲ್ಯದಿಂದ ಜೀವನ ಸಾಗಿಸಬೇಕು. ಮಕ್ಕಳನ್ನು ಸುಸಂಸ್ಕೃತರನ್ನಾಗಿ ಬೆಳೆಸುವ ಜವಾಬ್ದಾರಿ ತಾಯಂದಿರ ಮೇಲಿದೆ ಎಂದರು.

ಬಳಿಕ ಹಿರಿಯ ವಕೀಲರಾದ ಶ್ವೇತಾಂಬರಿ ಎಸ್.ಪಿ. ಅವರು ಮಹಿಳೆಯರಿಗೆ ಕಾನೂನಿನಲ್ಲಿ ರಕ್ಷಣೆ ಕುರಿತು ಹಾಗೂ ಬ್ಲಾಕ್ ಕಾಂಗ್ರೆಸ್ ಮಹಿಳಾ ತಾಲೂಕು ಅಧ್ಯಕ್ಷ ಮುಕ್ಕುಂದಿ ಮಮತಾ ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರದ ಕುರಿತಾಗಿ ಮಾಹಿತಿ ನೀಡಿದರು.

ಶಾಸಕ ಜೆ.ಎನ್. ಗಣೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪುರಸಭೆ ಸದಸ್ಯರಾದ ನಿರ್ಮಲಾ ವಸಂತ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷರಾದ ಕೆ.ಎಂ. ಹೇಮಯ್ಯಸ್ವಾಮಿ, ಟ್ರಸ್ಟ್‌ನ ಜಿಲ್ಲಾ ನಿರ್ದೇಶಕರಾದ ರೋಹಿತಾಕ್ಷ, ಜಿಪಂ ಮಾಜಿ ಸದಸ್ಯೆ ಎ.ವಿ. ಬನಶಂಕರಿ, ಪಿಎಸ್‌ಐ ನಿಂಗಪ್ಪ, ಭೈರವ ಫೌಂಡೇಶನ್‌ನ ಸಂಸ್ಥಾಪಕರಾದ ಕನಕಪ್ಪ ಸುಣಗಾರ, ಪುರಸಭೆ ಮಾಜಿ ಅಧ್ಯಕ್ಷ ಎಂ. ಸುಧೀರ್, ಸಪ್ತಗಿರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಾ. ವೆಂಕಟೇಶ್ ಭರಮಕ್ಕನವರ್, ಟ್ರಸ್ಟ್‌ನ ಕ್ಷೇತ್ರ ಯೋಜನಾಧಿಕಾರಿ ಎಂ.ಎ. ಹಾಲಪ್ಪ, ಜಿಲ್ಲಾ ವಿಕಾಸ ಸಮನ್ವಯಾಧಿಕಾರಿ ರೇಖಾ, ಮೇಲ್ವಿಚಾರಕರಾದ ರವಿಚಂದ್ರ, ಮಂಜುಳಾ, ರಾಜೇಶ್ವರಿ, ಕೃಷಿ ಅಧಿಕಾರಿ ಸಂಜೀವ್ ಕುಮಾರ್ ಸೇರಿದಂತೆ ಇತರರಿದ್ದರು.