ಸಾರಾಂಶ
ಯಲಬುರ್ಗಾ : ಪ್ರತಿಯೊಬ್ಬ ಕಟ್ಟಡ ಕಾರ್ಮಿಕರು ಅತ್ಯಂತ ಶ್ರದ್ಧೆ-ಪ್ರಾಮಾಣಿಕತೆಯಿಂದ ದುಡಿಯುವ ಮೂಲಕ ಶ್ರಮಜೀವಿಗಳಾಗಿದ್ದಾರೆ ಎಂದು ಸಿವಿಲ್ ಶ್ರೇಣಿ ನ್ಯಾಯಾಧೀಶೆ ಆಯಿಷಾಬಿ ಮಜೀದ್ ಹೇಳಿದರು.
ಪಟ್ಟಣದ ಶ್ರೀಶಕ್ತಿ ಭವನದಲ್ಲಿ ಗುರುವಾರ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕಾಡಳಿತ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಸರ್.ಎಂ. ವಿಶ್ವೇಶ್ವರಯ್ಯ ಎಲೆಕ್ಟ್ರಿಕಲ್, ಪ್ಲಂಬಿಂಗ್ ಮತ್ತು ಕಾರ್ಮಿಕ ಸಂಘ ಇವುಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಅಂಗವಾಗಿ ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಮಿಕರು ತಮ್ಮ ನೂರೆಂಟು ಕಷ್ಟವನ್ನು ಬದಿಗೊತ್ತಿ ನಮಗೆಲ್ಲ ಸುಂದರ ಮನೆ ನಿರ್ಮಾಣ ಮಾಡಿಕೊಡುತ್ತಾರೆ. ಆದರೆ ಇವರ ಬದುಕು ಮಾತ್ರ ಅತಂತ್ರವಾಗಿದೆ. ದುಡಿಯುವ ಕಾರ್ಮಿಕರು ಅನೇಕ ದುಶ್ಚಟಗಳಿಗೆ ಅಂಟಿಕೊಂಡು ತಮ್ಮ ಅಮೂಲ್ಯ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಜೀವನದಲ್ಲಿ ಏನನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ನಿಮ್ಮನ್ನು ನಂಬಿಕೊಂಡ ಹೆಂಡತಿ, ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ಜೊತೆಗೆ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ತಹಸೀಲ್ದಾರ ಬಸವರಾಜ ತೆನ್ನಳ್ಳಿ ಹಾಗೂ ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ ಮಾತನಾಡಿ, ಕಾರ್ಮಿಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಕಾಳಜಿ ವಹಿಸಬೇಕು. ಸರ್ಕಾರ ಇಂತಹ ಮಕ್ಕಳ ಶಿಕ್ಷಣಕ್ಕೆ ಸಾಕಷ್ಟು ಆರ್ಥಿಕ ನೆರವು ನೀಡುತ್ತಿದೆ. ಇದರ ಸದುಪಯೋಗವನ್ನು ಕಾರ್ಮಿಕರು ಪಡೆದುಕೊಳ್ಳಲು ಮುಂದಾಗಬೇಕೆಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪ್ರಕಾಶ ಬೇಲೇರಿ ಅಧ್ಯಕ್ಷತೆ ವಹಿಸಿದ್ದರು.
ಕುಷ್ಟಗಿ ಕಾರ್ಮಿಕ ಇಲಾಖೆ ನಿರೀಕ್ಷಕ ಶಿವಶಂಕರ ತಳವಾರ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ ಮಾತನಾಡಿದರು. ಅತಿಥಿಗಳಾಗಿ ಸಹಾಯಕ ಅಭಿಯೋಜಕ ರವಿ ಹುಣಸಿಮರದ, ಪ್ರಮುಖರಾದ ರಮೇಶ ಘೋರ್ಪೆಡೆ, ಮಲ್ಲಪ್ಪ ಭೂತೆ ಮತ್ತಿತರರಿದ್ದರು.