ಯೋಗ ನಿರಂತರ ಅಭ್ಯಾಸವಾಗಲಿ: ಜಿಲ್ಲಾಧಿಕಾರಿ ಡಾ.ಕುಮಾರ

| Published : May 15 2024, 01:34 AM IST

ಯೋಗ ನಿರಂತರ ಅಭ್ಯಾಸವಾಗಲಿ: ಜಿಲ್ಲಾಧಿಕಾರಿ ಡಾ.ಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚಿನ ದಿನಗಳಲ್ಲಿ ದೇಶ ಆಧುನಿಕ,ಯಾಂತ್ರಿಕ ಹಾಗೂ ತಾಂತ್ರಿಕವಾಗಿ ಮುಂದೆ ಇದ್ದು, ಪ್ರತಿಯೊಬ್ಬರೂ ಒತ್ತಡದ ಜೀವನವನ್ನು ನಡೆಸುತ್ತಿದ್ದಾರೆ. ಯೋಗವನ್ನು ರೂಢಿಸಿಕೊಳ್ಳುವ ಮೂಲಕ ಒತ್ತಡ ದೂರ ಮಾಡಬಹುದು. ಒಳ್ಳೆಯ ಆಲೋಚನೆ ಹಾಗೂ ಒಳ್ಳೆಯ ಕಾರ್ಯಗಳನ್ನು ಮಾಡಲು ಯೋಗದಿಂದ ಮಾತ್ರ ಸಾಧ್ಯ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಯೋಗಾಭ್ಯಾಸದಿಂದ ಅನೇಕ ರೋಗಗಳನ್ನು ದೂರವಿಡಬಹುದಾಗಿದ್ದು, ಪ್ರತಿಯೊಬ್ಬರ ಬದುಕಿನಲ್ಲೂ ಯೋಗವು ನಿರಂತರ ಅಭ್ಯಾಸವಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಹೇಳಿದರು.

ಮಂಗಳವಾರ ಪಟ್ಟಣದ ಡಿ.ಎಂ.ಎಸ್ ಚಂದ್ರವನದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಲಾಗಿದ್ದ ಯೋಗೋತ್ಸವ ಉದ್ಘಾಟಿಸಿ, ಯೋಗದ ಪಿತಾಮಹ ಪತಂಜಲಿ ಮಹರ್ಷಿ ಮತ್ತು ಧನ್ವಂತರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.

ಪ್ರತಿಯೊಬ್ಬರೂ ಕೂಡ ಯೋಗದ ಬಗ್ಗೆ ಅಭಿರುಚಿಯನ್ನು ಬೆಳೆಸಿಕೊಂಡು ಬದುಕಿನ ಭಾಗವನ್ನಾಗಿಸಿಕೊಳ್ಳಬೇಕು. ಭಾರತ ಯೋಗದಲ್ಲಿ ಇಡೀ ವಿಶ್ವಕ್ಕೆ ಗುರುವಾಗಿದೆ. ಯೋಗವು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು, ದೇಹ, ಮನಸ್ಸು ಮತ್ತು ಆತ್ಮವನ್ನು ಒಂದುಗೂಡಿಸುವ ಪ್ರಕ್ರಿಯೆಯೇ ಯೋಗವಾಗಿದೆ ಎಂದು ನುಡಿದರು.

ಇತ್ತೀಚಿನ ದಿನಗಳಲ್ಲಿ ದೇಶ ಆಧುನಿಕ,ಯಾಂತ್ರಿಕ ಹಾಗೂ ತಾಂತ್ರಿಕವಾಗಿ ಮುಂದೆ ಇದ್ದು, ಪ್ರತಿಯೊಬ್ಬರೂ ಒತ್ತಡದ ಜೀವನವನ್ನು ನಡೆಸುತ್ತಿದ್ದಾರೆ. ಯೋಗವನ್ನು ರೂಢಿಸಿಕೊಳ್ಳುವ ಮೂಲಕ ಒತ್ತಡ ದೂರ ಮಾಡಬಹುದು. ಒಳ್ಳೆಯ ಆಲೋಚನೆ ಹಾಗೂ ಒಳ್ಳೆಯ ಕಾರ್ಯಗಳನ್ನು ಮಾಡಲು ಯೋಗದಿಂದ ಮಾತ್ರ ಸಾಧ್ಯ ಎಂದರು.

ಮಾನವನ ದೇಹವನ್ನು ಹಾರ್ಡ್‌ವೇರ್‌ಗೆ ಹಾಗೂ ಮನಸ್ಸನ್ನು ಸಾಫ್ಟ್‌ವೇರ್‌ಗೆ ಹೋಲಿಸಬಹುದು. ದೇಹದ ಪ್ರತಿಯೊಂದು ಅಂಗವನ್ನು ಸರಿಪಡಿಸಲು ವೈದ್ಯರಿದ್ದಾರೆ. ಆದರೆ, ಮನಸ್ಸನ್ನು ಆರೋಗ್ಯವಾಗಿರಿಸಲು ಯೋಗಭ್ಯಾಸದಿಂದ ಸಾಧ್ಯ. ಯೋಗ ಮಾಡುವುದರಿಂದ ಎಲ್ಲರೂ ಉತ್ತಮ ವ್ಯಕ್ತಿತ್ವವನ್ನು ರೂಡಿಸಿಕೊಳ್ಳಬಹುದು ಎಂದರು.

ಚಂದ್ರವನ ಆಶ್ರಮದ ಶ್ರೀತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿ ಮಾತನಾಡಿ, ಯೋಗವೆಂದರೆ ತಮ್ಮ ಯೋಗ್ಯತೆಗಳನ್ನು ಹೆಚ್ಚು ಮಾಡುವ ಅಂಶ. ಯೋಗದಲ್ಲಿ ಆರೋಗ್ಯವಿದೆ, ಆರೋಗ್ಯದಿಂದ ಉತ್ತಮ ಬದುಕು ನಡೆಸಲು ಸಾಧ್ಯ. ಕೋವಿಡ್ ಸಂದರ್ಭದಲ್ಲಿ ಅನೇಕ ಜನರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾಗ, ಪ್ರಾಣಾಯಾಮವನ್ನು ಮಾಡುವ ಮೂಲಕ ಅನೇಕ ಜನರು ಗುಣಮುಖರಾಗಿದ್ದಾರೆ ಎಂದರು.

ವೇದಿಕೆಯ ಮೇಲಿದ್ದ ಎಲ್ಲಾ ಅತಿಥಿ ಗಣ್ಯರು ತಾಡಸನ, ಅರ್ಧ ಚಕ್ರಾಸನ, ಉದ್ದಂಡಾಸನ, ಪದ್ಮಾಸನ, ಪರ್ವಾತಾಸನ, ನಾಡಿ ಶೋಧನಾ ಪ್ರಾಣಾಯಾಮ ಯೋಗಗಳನ್ನು ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ತಂದರು.

೧೦ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ನಡೆದ ಯೋಗೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಶಾಲಾ- ಕಾಲೇಜು ವಿದ್ಯಾ ಸಂಸ್ಥೆಗಳಿಂದ ಹಲವಾರು ವಿದ್ಯಾರ್ಥಿಗಳು ಯೋಗದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಅಹಲ್ಯಾ, ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್. ನಾಗರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಮಂಡ್ಯ ಜಿಲ್ಲಾ ಆಯುಷ್ ಅಧಿಕಾರಿ ಡಾ.ಸೀತಾಲಕ್ಷ್ಮಿ, ಮೈಸೂರಿನ ಜಿ.ಎ.ಆರ್.ಸಿ.ಯ ಸಹಾಯಕ ನಿರ್ದೇಶಕ ಡಾ. ಲಕ್ಷ್ಮೀನಾರಾಯಣ ಶೆಣೈ, ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ, ತ್ರಿನೇತ್ರ ಅಂತಾರಾಷ್ಟ್ರೀಯ ಯೋಗ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಎನ್.ನಾಗೇಶ್, ಪ್ರಾಂಶುಪಾಲ ಡಾ.ಎಂ.ಎಸ್.ಮಧುಮತಿ ಇತರರಿದ್ದರು.