- 12ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿ ಸಭೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಜೂನ್ 21ರಂದು ನಡೆಯಲಿರುವ 12ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಈ ವರ್ಷದ ಧ್ಯೇಯವಾಕ್ಯವಾದ "ಆರೋಗ್ಯಕರ ವೃದ್ಧಾಪ್ಯಕ್ಕಾಗಿಯೋಗ " ಪರಿಕಲ್ಪನೆಯಡಿ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸೂಚನೆ ನೀಡಿದರು.ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 12ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯೋಗ ದಿನಾಚರಣೆಯನ್ನು ಆಚರಿಸಲು ಸಮತಟ್ಟಾದ ಮೇಲ್ಮೈ ಹಾಗೂ ಸುಸಜ್ಜಿತ ವೇದಿಕೆ ಲಭ್ಯವಿದೆ. ಆದ್ದರಿಂದ , ಈ ಬಾರಿಯ ಯೋಗ ಪ್ರದರ್ಶನಕ್ಕೆ ಸ್ಥಳೀಯ ಪೊಲೀಸ್ ಕ್ರೀಡಾಂಗಣವೇ ಸೂಕ್ತ ಸ್ಥಳವಾಗಿದೆ. ಅಂದು ಬೆಳಗ್ಗೆ 6 ಗಂಟೆಯಿಂದಲೇ ಯೋಗ ಪ್ರದರ್ಶನ ಏರ್ಪಡಿಸಬೇಕು. ಯೋಗ ತರಬೇತಿಯಲ್ಲಿ ಸುದೀರ್ಘ ಅನುಭವ ಹೊಂದಿರುವ ಖ್ಯಾತ ಯೋಗಪಟು ಮುರಳಿ ಅವರನ್ನು ಈ ಬಾರಿ ಯೋಗಾಸನಗಳ ಮಾರ್ಗದರ್ಶನ ನೀಡಲು ಆಹ್ವಾನಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಕುಡಿಯುವ ನೀರು, ಲಘು ಉಪಾಹಾರ:
ಶಿಷ್ಟಾಚಾರದ ಪ್ರಕಾರ ಗೌರವಾನ್ವಿತ ಸಚಿವರು, ಸಂಸದರು, ಶಾಸಕರು ಹಾಗೂ ಜನಪ್ರತಿನಿಧಿಗಳಿಗೆ ಸಕಾಲದಲ್ಲಿ ಆಹ್ವಾನ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಗೌರವಪೂರ್ವಕವಾಗಿ ಕರೆತರಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಯೋಗ ದಿನಾಚರಣೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ತಾವೇ ಸ್ವತಃ ಯೋಗ ಮ್ಯಾಟ್‌ಗಳನ್ನು ತರಬೇಕು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ವಸತಿ ನಿಲಯದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸ್ಥಳದಲ್ಲೇ ಮ್ಯಾಟ್‌ಗಳ ವ್ಯವಸ್ಥೆ ಮಾಡಲಾಗುವುದು. ಜೊತೆಗೆ ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ಕುಡಿಯುವ ನೀರು ಮತ್ತು ಲಘು ಉಪಾಹಾರ ವ್ಯವಸ್ಥೆ ಸಮರ್ಪಕವಾಗಿ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಗ್ರಾ.ಪಂ.ಮಟ್ಟದಲ್ಲಿ ಜಾಗೃತಿ:ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲ ರಾವ್ ಮಾತನಾಡಿ, ಜಿಲ್ಲೆಯ ವಿವಿಧ ಆಯುಷ್ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳ ವ್ಯಾಪ್ತಿ ಹಾಗೂ ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕನಿಷ್ಠ 100 ಜನರನ್ನು ಒಟ್ಟುಗೂಡಿಸಿ ದೊಡ್ಡಮಟ್ಟದಲ್ಲಿ ಯೋಗ ದಿನ ಕಾರ್ಯಕ್ರಮ ಆಚರಿಸಲು ಸೂಚಿಸಲಾಗುವುದು. ಈ ಮೂಲಕ ಸರ್ಕಾರದ ಆಯುಷ್ ಕೇಂದ್ರಗಳ ಸೌಲಭ್ಯಗಳು ಮತ್ತು ಆರೋಗ್ಯ ಲಾಭಗಳ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ ಎಂದರು.
ಗೂಗಲ್ ಮೀಟ್ ಲಿಂಕ್:ಜಿಲ್ಲಾ ಆಯುಷ್ ಅಧಿಕಾರಿ ಡಾ.ಯೋಗೇಂದ್ರ ಮಾತನಾಡಿ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ 14 ದಿನಗಳ ಪ್ರಾಥಮಿಕ ತರಬೇತಿ ಹಾಗೂ ನಂತರ 1 ವರ್ಷದ ಉಚಿತ ಆನ್‌ಲೈನ್ ಯೋಗ ತರಬೇತಿಯನ್ನು ಆರಂಭಿಸಲಾಗಿದೆ. ಆಸಕ್ತ ಸಾರ್ವಜನಿಕರು ತಮಗೆ ಅನುಕೂಲಕರವಾದ ಸಮಯದಲ್ಲಿ (ಬೆಳಗ್ಗೆ ಅಥವಾ ಸಂಜೆ) ಗೂಗಲ್ ಮೀಟ್ ಲಿಂಕ್ ಮೂಲಕ ಉಚಿತವಾಗಿ ಭಾಗವಹಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಡಿವೈಎಸ್ಪಿ ಶರಣಪ್ಪ, ಜಿಪಂ ಯೋಜನಾ ನಿರ್ದೇಶಕಿ ರೇಶ್ಮಾ ಕೌಸರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಷಣ್ಮುಖಪ್ಪ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ರಾಘವೇಂದ್ರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಧುಸೂಧನ್, ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.- - -
-9ಕೆಡಿವಿಜಿ34:ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಧ್ಯಕ್ಷತೆಯಲ್ಲಿ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿ ಸಭೆ ನಡೆಯಿತು.