ಎಲ್ಲರೂ ಒಂದಾಗಿ ಬಸವಾದಿ ಶರಣರ ತತ್ವಾದರ್ಶಗಳೊಂದಿಗೆ ಗದುಗಿನಲ್ಲಿ ನಡೆಯಲಿರುವ ಹಿಂದೂ ಸಮಾವೇಶವನ್ನು ಎಲ್ಲರೂ ಸೇರಿಕೊಂಡು ಯಶಸ್ವಿಗೊಳಿಸೋಣ ಎಂದು ಯುವ ಮುಖಂಡ ರವಿಕಾಂತ ಅಂಗಡಿ ಹೇಳಿದರು.

ಮುಂಡರಗಿ: ವಿವಿಧತೆಯಲ್ಲಿ ಏಕತೆ ಹೊಂದಿದ ಭಾರತ ಬಹುಸಂಸ್ಕೃತಿ ದೇಶ. ಹೀಗಾಗಿ ಯಾವುದೇ ಭೇದ-ಭಾವ ಇಲ್ಲದೆ ಇಲ್ಲಿ ಎಲ್ಲರೂ ಒಂದಾಗಿ ಬಸವಾದಿ ಶರಣರ ತತ್ವಾದರ್ಶಗಳೊಂದಿಗೆ ಗದುಗಿನಲ್ಲಿ ನಡೆಯಲಿರುವ ಹಿಂದೂ ಸಮಾವೇಶವನ್ನು ಎಲ್ಲರೂ ಸೇರಿಕೊಂಡು ಯಶಸ್ವಿಗೊಳಿಸೋಣ ಎಂದು ಯುವ ಮುಖಂಡ ರವಿಕಾಂತ ಅಂಗಡಿ ಹೇಳಿದರು.

ಅವರು ಮುಂಡರಗಿಯಲ್ಲಿ ಶನಿವಾರ ಬಸವಾದಿ ಶಿವಶರಣರ ಹಿಂದೂ ಸಮಾವೇಶದ ಕರಪತ್ರ ಬಿಡುಗಡೆಗೊಳಿಸಿ ಆನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ನಮ್ಮ ಲಂಬಾಣಿ ಸಮುದಾಯದ ಜನರನ್ನು ಹೆಚ್ಚು ಮತಾಂತರ ಮಾಡುತ್ತಿದ್ದು, ಏನೂ ಅರಿಯದ ನಮ್ಮ ಜನಾಂಗ ಬಲಿಯಾಗುತ್ತಿದ್ದಾರೆ. ಇಂತಹ ಮೋಸ, ವಂಚನೆಯಿಂದ ನಮ್ಮ ಸಮುದಾಯದ ಜನ ಪಾರಾಗಬೇಕಾದರೆ ನಮ್ಮ ಸನಾತನ ಹಿಂದೂ ಧರ್ಮ ಅವಶ್ಯಕವಾಗಿದೆ. ಆದ್ದರಿಂದ ಪ್ರತಿ ಗ್ರಾಮದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಸಮಾವೇಶವನ್ನು ಯಶಸ್ವಿಗೊಳಿಸೋಣ ಎಂದರು.

ವಿಜಯಪುರದ ಕೇಸರಟ್ಟಿ ಗುರುಪೀಠದ ಸೋಮಲಿಂಗ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ಹಿಂದೂ ಧರ್ಮ, ಸಂಸ್ಕೃತಿ, ಪರಂಪರೆ ಉಳಿಯಲು ಮಠ-ಮಾನ್ಯಗಳ ಅದರಲ್ಲಿಯೂ ಸ್ವಾಮಿಗಳ ಪಾತ್ರ ಪ್ರಮುಖವಾಗಿದೆ. ಸರ್ವಧರ್ಮದವರು ಒಂದಾಗಿ ದೇಶ ರಕ್ಷಣೆ ಜಾಗೃತಿ ಮೂಡಿಸಲು ಮತ್ತು ಬಸವಣ್ಣನವರ ಸಮಾನತೆ ಸಂದೇಶ ಸಾರಲು ಬಸವಾದಿ ಶಿವಶರಣರ ಹಿಂದೂ ಸಮಾವೇಶ ಗದಗನಲ್ಲಿ ಮೇ 31ರಂದು ನಡೆಯಲಿದೆ. ಅದರ ಯಶಸ್ಸಿಗೆ ಎಲ್ಲರೂ ಕೈ ಜೋಡಿಸಬೇಕು. ಈ ಸಮಾವೇಶವು ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿದ್ದು, 300ಕ್ಕೂ ಹೆಚ್ಚು ಸ್ವಾಮೀಜಿಗಳು ಈ ಸಮಾವೇಶದಲ್ಲಿ ಪಾಲ್ಗೊಂಡು, ಹಿಂದೂ ಜಾಗೃತಿ ಮೂಡಿಸುವ ಜತೆಗೆ ಭಾರತೀಯ ಸನಾತನ ಧರ್ಮ ಸಂಸ್ಕೃತಿ ಉಳಿಸಲು ಬದ್ಧರಾಗಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸುಭಾಷ ಗುಡಿಮನಿ, ಬೆನಕರಾಜ ಪೂಜಾರ, ಪರಮೇಶ ನಾಯಕ, ಬಸವರಾಜ ಕರಿ, ವಸಂತ ನಾಯ್ಕ್, ಚನ್ನಪ್ಪ ಮುರಡಿ, ತುಕಾರಾಮ ಲಮಾಣಿ, ಸುರೇಶ ಲಮಾಣಿ, ಅನಿಲ ಮುರಡಿ, ಕೃಷ್ಣ ಕಾರಬಾರಿ, ಗುರಪ್ಪ ನಾಯಕ ಉಪಸ್ಥಿತರಿದ್ದರು.