ಸಾರಾಂಶ
ಇಂದಿನ ಬದಲಾದ ನಮ್ಮ ಜೀವನ ಶೈಲಿಯಲ್ಲಿ ಪಾರಂಪರಿಕ ಹಳೇ ಆಹಾರ ಪದ್ಧತಿಯನ್ನು ನಾವು ದೂರ ಇಟ್ಟಿದ್ದೇವೆ. ಹೀಗಾಗಿ ಚಿಕ್ಕ ಮಕ್ಕಳಲ್ಲಿ ಅಪೌಷ್ಟಿಕತೆ ಕಾಡುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಂಗಸ್ವಾಮಿ ಜೆ. ಹೇಳಿದರು.
ಯಲಬುರ್ಗಾ: ಪ್ರತಿಯೊಬ್ಬ ಮಹಿಳೆಯರು ತಮ್ಮ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುವ ಮೂಲಕ ಅವರನ್ನು ಆರೋಗ್ಯವಂತರನ್ನಾಗಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಂಗಸ್ವಾಮಿ ಜೆ. ಹೇಳಿದರು.
ಪಟ್ಟಣದ ಡಾ. ಬಾಬು ಜಗಜೀವನ್‌ರಾಂ ಭವನದಲ್ಲಿ ಶುಕ್ರವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸಿಡಿಪಿಒ ಇಲಾಖೆಯ ಸಹಯೋಗದಲ್ಲಿ ನಡೆದ ಪೋಷಣಾ ಮಾಸಾಚರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರ ಆಯೋಜಿಸಿರುವ ಪೋಷಣ್ ಮಾಸಾಚರಣೆ ಅಭಿಯಾನ ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದರು.ಇಂದಿನ ಬದಲಾದ ನಮ್ಮ ಜೀವನ ಶೈಲಿಯಲ್ಲಿ ಪಾರಂಪರಿಕ ಹಳೇ ಆಹಾರ ಪದ್ಧತಿಯನ್ನು ನಾವು ದೂರ ಇಟ್ಟಿದ್ದೇವೆ. ಹೀಗಾಗಿ ಚಿಕ್ಕ ಮಕ್ಕಳಲ್ಲಿ ಅಪೌಷ್ಟಿಕತೆ ಕಾಡುತ್ತಿದೆ. ಇತ್ತೀಚಿನ ಆಹಾರದಲ್ಲಿ ಗುಣಮಟ್ಟದ ಸರಿಯಾದ ಪೋಷಕಾಂಶಗಳು ಸಿಗುತ್ತಿಲ್ಲ. ಇದರಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಕಂಡು ಬರಲು ಮುಖ್ಯವಾದ ಕಾರಣವಾಗಿದೆ. ಪ್ರತಿ ಅಂಗನವಾಡಿ, ಶಾಲೆಗಳಲ್ಲಿ ಸಿರಿಧಾನ್ಯ ಹಾಗೂ ಹೆಚ್ಚು ಪೋಷಕಾಂಶ ಇರುವ ಮೊಳಕೆಕಾಳು ಸೇವನೆಗೆ ಕೊಡಬೇಕು ಎಂದು ಹೇಳಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಡದಪ್ಪ ಮಾಳೇಕೊಪ್ಪ ಮಾತನಾಡಿ, ತಾಲೂಕಿನ ಎಲ್ಲ ಕೇಂದ್ರದಲ್ಲಿ ಇಲಾಖೆಯಿಂದ ಶಿಶುಮಕ್ಕಳು, ಗರ್ಭಿಣಿಯರು, ಮಹಿಳೆಯರು ಮತ್ತು ಮಕ್ಕಳನ್ನು ಅಪೌಷ್ಟಿಕತೆಯಿಂದ ಮುಕ್ತಗೊಳಿಸುವ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಪೋಷಣ್ ಅಭಿಯಾನ ಮೂಲಕ ಹೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ವಕೀಲರ ಸಂಘದ ಅಧ್ಯಕ್ಷ ಪ್ರಕಾಶ ಬೇಲೇರಿ ಹಾಗೂ ಟಿಎಚ್‌ಒ ಡಾ. ಅಂಬರೀಶ್ ನಾಗರಾಳ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ, ಮಹಿಳೆಯರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಪಪಂ ಸದಸ್ಯೆ ಬಸಮ್ಮ ಈರಪ್ಪ ಬಣಕಾರ, ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ, ವಕೀಲರಾದ ಎಸ್.ಎನ್. ಶ್ಯಾಗೋಟಿ, ಈರಣ್ಣ ಕೋಳೂರು, ಅಂಗನವಾಡಿ ಮೇಲ್ವಿಚಾರಕರಾದ ಲಲಿತಾ ನಾಯ್ಕರ್, ಶಿವಪುತ್ರಮ್ಮ ಅಂಗಡಿ, ರಾಜೇಶ್ವರಿ ರಡ್ಡೇರ, ಮಾಧವಿ ವೈದ್ಯ, ವಿಜಯಲಕ್ಷ್ಮೀ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.