ಸಾರಾಂಶ
ನಾವೆಲ್ಲ ಈಗ ಲೋಕಸಭಾ ಚುನಾವಣೆ ಎದುರಿಸಲು ಸರ್ವ ಸನ್ನದ್ಧರಾಗಬೇಕಿದೆ. ನಮ್ಮ ದೃಷ್ಟಿ ಏನಿದ್ದರೂ ಮುಂಬರುವ ಲೋಕಸಭಾ ಚುನಾವಣೆ ಗೆಲ್ಲುವುದಾಗಿರಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಸ್. ಹೆಗಡೆ ಹೇಳಿದರು.
ಕನ್ನಡಪ್ರಭ ವಾರ್ತೆ ಮುಂಡಗೋಡ
ಹಿಂದೆ ನಮ್ಮ ಪಕ್ಷದಿಂದ ರಾಮಮಂದಿರ, ಆರ್ಟಿಕಲ್ ೩೭೦ ಮುಂತಾದ ವಿಷಯಗಳನ್ನಿಟ್ಟುಕೊಂಡು ಲೋಕಸಭಾ ಚುನಾವಣೆಗೆ ಹೋಗುತ್ತಿದ್ದೆವು. ಆದರೆ, ಈ ಬಾರಿಯ ಚುನಾವಣೆಯಲ್ಲಿ ೨೦೧೪ರಿಂದ ೨೦೨೪ರ ವರೆಗೆ ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ಜನರಿಗೆ ಹೇಳುವ ಮೂಲಕ ಮತ ಪಡೆಯುವ ಕೆಲಸವನ್ನು ನಾವು ಮಾಡಬೇಕಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಸ್. ಹೆಗಡೆ ಹೇಳಿದರು.ಶನಿವಾರ ಇಲ್ಲಿ ಮುಂಡಗೋಡ ಬಿಜೆಪಿ ಮಂಡಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು. ನಾವೆಲ್ಲ ಈಗ ಲೋಕಸಭಾ ಚುನಾವಣೆ ಎದುರಿಸಲು ಸರ್ವ ಸನ್ನದ್ಧರಾಗಬೇಕಿದೆ. ನಮ್ಮ ದೃಷ್ಟಿ ಏನಿದ್ದರೂ ಮುಂಬರುವ ಲೋಕಸಭಾ ಚುನಾವಣೆ ಗೆಲ್ಲುವುದಾಗಿರಬೇಕು ಎಂದು ಹೇಳಿದರು.
ರಾಷ್ಟ್ರೀಯ ವಿಚಾರ, ತತ್ವ, ಸಿದ್ಧಾಂತದಡಿ ಜನಸಂಘದ ಮೂಲಕ ಬಂದಿರುವ ಬಿಜೆಪಿ ಕೇವಲ ಇಬ್ಬರು ಸಂಸದರಿಂದ ಹಿಡಿದು ಇಂದು ೩೦೩ ಸಂಸದರು ಆಯ್ಕೆಯಾಗುತ್ತಾರೆ ಎಂದರೆ ಈ ಪಕ್ಷದಲ್ಲಿ ಏನೋ ವಿಶೇಷವಿದೆ ಎಂದರ್ಥ. ಸುಮ್ಮನೆ ಇದು ಆಗುವಂತಹದಲ್ಲ. ಸಾಕಷ್ಟು ಜನ ಬೆವರು ಹರಿಸಿ ತ್ಯಾಗ, ಬಲಿದಾನ ಮಾಡಿದ ಫಲವಾಗಿ ಇಂದು ಬಿಜೆಪಿ ಇಷ್ಟು ದೊಡ್ಡ ಪಕ್ಷವಾಗಿ ಬೆಳೆಯಲು ಸಾಧ್ಯವಾಗಿದೆ ಎಂದರು.ಈಗಾಗಲೇ ಮತ್ತೊಮ್ಮೆ ಮೋದಿ ಸರ್ಕಾರ ಎಂಬ ಗೋಡೆಬರಹ ಕೂಡ ಪೂರ್ಣಗೊಳಿಸಲಾಗಿದೆ. ನಾರಿಶಕ್ತಿ ವಂದನಾ ಕಾರ್ಯಕ್ರಮ ಅಭಿಯಾನದಡಿ ಸ್ವಸಹಾಯ ಸಂಘದ ಮಹಿಳೆಯರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೀಡಿದ ಯೋಜನೆಗಳ ಬಗ್ಗೆ ಚರ್ಚಿಸಿ ಪ್ರತಿಯೊಬ್ಬ ಸ್ತ್ರೀಗೆ ಮನವರಿಕೆ ಮಾಡುವ ಕೆಲಸ ನಮ್ಮದಾಗಿದೆ. ಸಮಾಜದಲ್ಲಿ ಏನೋ ಬದಲಾವಣೆ ತರುವ ಕೆಲಸವನ್ನು ಬಿಜೆಪಿ ಮಾಡುತ್ತದೆ ಎಂಬ ವಿಶ್ವಾಸ ಜನರಲ್ಲಿ ಮೂಡಿದೆ. ಜನರ ಆ ಭಾವನೆಗೆ ಧಕ್ಕೆ ಬರದಂತೆ ನಮ್ಮ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ, ಜಿಪಂ ಮಾಜಿ ಅಧ್ಯಕ್ಷ ಎಲ್.ಟಿ. ಪಾಟೀಲ, ಮಾಜಿ ಶಾಸಕ ಸುನೀಲ ಹೆಗಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ, ಜಿಲ್ಲಾ ಉಪಾಧ್ಯಕ್ಷ ಚಂದ್ರು ಎಸಳೆ, ಅಶೋಕ ಚಲವಾದಿ, ರೇಖಾ ಅಂಡಗಿ, ಶಿವಾಜಿ ನರಸಾನಿ, ಬಸವರಾಜ ಓಶಿಮಠ, ತಾಲೂಕಾಧ್ಯಕ್ಷ ಮಂಜುನಾಥ ಪಾಟೀಲ, ಪ್ರಧಾನ ಕಾರ್ಯದರ್ಶಿ ಭರತರಾಜ ಹದಳಗಿ, ವಿಠ್ಠಲ ಬಾಳಂಬೀಡ, ಪಪಂ ಸದಸ್ಯ ಶ್ರೀಕಾಂತ ಸಾನು, ಉಮೇಶ ಬಿಜಾಪುರ, ಬಸವರಾಜ ಠಣಕೆದಾರ, ಮಹೇಶ ಹೊಸಕೊಪ್ಪ, ಸಂತೋಷ ತಳವಾರ ಮುಂತಾದವರು ಉಪಸ್ಥಿತರಿದ್ದರು.