ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ ನವೆಂಬರ್ ೧ರ ಶುಕ್ರವಾರ ಬೆಳಿಗ್ಗೆ ೮ ಗಂಟೆಗೆ ಚೆನ್ನಾಂಬಿಕ ವೃತ್ತದಿಂದ ಅಲಂಕೃತ ವಾಹನದಲ್ಲಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಪಥಸಂಚಲನ, ಬ್ಯಾಂಡ್‌ಸೆಟ್ ಮೂಲಕ ಬಯಲು ಮಂದಿರದ ವೇದಿಕೆಗೆ ಕರೆ ತರುವುದು ಸೇರಿದಂತೆ ಕನ್ನಡ ರಾಜ್ಯೋತ್ಸವವನ್ನು ವೈಭವದಿಂದ ನಡೆಸೋಣವೆಂದು ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಸಲಹೆ ನೀಡಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಶಾಸಕ ಎಚ್.ಡಿ. ರೇವಣ್ಣ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಪ್ರಧಾನ ಭಾಷಣ ಜತೆಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಸನ್ಮಾನ ಮಾಡಲು ನಿರ್ಧರಿಸಲಾಯಿತು. ಹಿಂದುಳಿದ ವರ್ಗಗಳ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಾಗೂ ಆಹಾರ ಇಲಾಖೆಯವರು ರಾಜ್ಯೋತ್ಸವದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಉಪಾಹಾರದ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ರಾಜ್ಯೋತ್ಸವ ದಿನದಂದು ಸ್ವಚ್ಛತೆ, ಮೆರವಣಿಗೆ ವಾಹನ ಸಿದ್ಧಪಡಿಸುವ ಜವಾಬ್ದಾರಿಯನ್ನು ಪುರಸಭೆಗೆ, ಭದ್ರತೆ ಜವಾಬ್ದಾರಿಯನ್ನು ಪೊಲೀಸರಿಗೆ, ಧ್ವಜಾರೋಹಣ ವ್ಯವಸ್ಥೆಯ ಉಸ್ತುವಾರಿಯನ್ನು ಅಗ್ನಿಶಾಮಕ ಇಲಾಖೆಗೆ ನೀಡಲಾಯಿತು.ಬಿಇಒ ಸೋಮಲಿಂಗೇಗೌಡ, ಮುಖ್ಯಾಧಿಕಾರಿ ನಾಗೇಂದ್ರಕುಮಾರ್, ತಾ. ಪಂಚಾಯ್ತಿ ತಾಂತ್ರಿಕ ಅಧಿಕಾರಿ ಗೋಪಾಲ್, ಪ್ರಾಂಶುಪಾಲ ದೇವರಾಜ್, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಹರೀಶ್, ಕೃಷಿ ಅಧಿಕಾರಿ ಸಪ್ನಾ, ದೈಹಿಕ ಶಿಕ್ಷಣ ಶಿಕ್ಷಕ ಸುಜತ್ ಅಲಿ, ಕರ್ನಾಟಕ ರಕ್ಷಣಾ ವೇದಿಕೆಯ ಓಹಿಲೇಶ್, ತಾ. ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರೇಮಾ ಮಂಜುನಾಥ್, ಎಚ್.ಎಸ್.ಪುಟ್ಟಸೋಮಪ್ಪ, ಆರ್.ಬಿ. ಪುಟ್ಟೇಗೌಡ, ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ಕುಮುದಾ, ಪೊಲೀಸ್ ಇಲಾಖೆಯ ಬಸವರಾಜು, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಅಗ್ನಿಶಾಮಕ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು