ಪರಸ್ಪರ ಭಾವನಾತ್ಮಕ ಸಂಬಂಧ ಹೊಂದಿರುವ ಭಾರತದಲ್ಲಿ ಮಕ್ಕಳು ತಮ್ಮ ಅಂತರಾಳದಿಂದ ಪಾಲಕರನ್ನು ಗೌರವಿಸುವಂತಹ ವಾತಾವರಣ ನಿರ್ಮಿಸಬೇಕಾದ ಅನಿವಾರ್ಯತೆಯಿದೆ ಎಂದು ಅಗಡಿ ಅಕ್ಕಿಮಠದ ಶ್ರೀ ಗುರುಲಿಂಗಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಬ್ಯಾಡಗಿ: ಪರಸ್ಪರ ಭಾವನಾತ್ಮಕ ಸಂಬಂಧ ಹೊಂದಿರುವ ಭಾರತದಲ್ಲಿ ಮಕ್ಕಳು ತಮ್ಮ ಅಂತರಾಳದಿಂದ ಪಾಲಕರನ್ನು ಗೌರವಿಸುವಂತಹ ವಾತಾವರಣ ನಿರ್ಮಿಸಬೇಕಾದ ಅನಿವಾರ್ಯತೆಯಿದೆ ಎಂದು ಅಗಡಿ ಅಕ್ಕಿಮಠದ ಶ್ರೀ ಗುರುಲಿಂಗಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಮೋಟೆಬೆನ್ನೂರಿನ ನವೋದಯ ವಿದ್ಯಾಸಂಸ್ಥೆಯ ಶ್ರೀಮತಿ ಸಿದ್ದಮ್ಮ ಮೈಲಾರ ಹಿರಿಯ ಪ್ರಾಥಮಿಕ ಶಾಲೆ ಮತ್ತು ವಿ.ಬಿ. ಕಳಸೂರಮಠ ಪ್ರೌಢಶಾಲೆಗಳ ಸರಸ್ವತಿ ಪೂಜಾ ಹಾಗೂ ತಾಯಂದಿರ ಪಾದಪೂಜೆ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಅವರು ಮಾತನಾಡಿದರು.ಪ್ರತಿಯೊಂದು ಸಮಾಜದಲ್ಲಿಯೂ ಪೋಷಕರು ತಮ್ಮ ಮಕ್ಕಳಿಗೆ ನೀಡುವ ಗೌರವ ಅತ್ಯಂತ ಪ್ರಮುಖ ಮೌಲ್ಯಗಳಲ್ಲಿ ಒಂದಾಗಿದೆ, ಹುಟ್ಟಿನಿಂದಲೇ ಮಕ್ಕಳಿಗೆ ಪ್ರೀತಿ, ಕಾಳಜಿ, ಮಾರ್ಗದರ್ಶನ ಮತ್ತು ಬೆಂಬಲವನ್ನು ಪೋಷಕರು ನೀಡುತ್ತಾರೆ ಅದಕ್ಕೆ ಪ್ರತಿಯಾಗಿ, ಮಕ್ಕಳು ಹೆತ್ತವರಿಗೆ ಕೃತಜ್ಞತೆ, ವಿಧೇಯತೆ ಮತ್ತು ದಯೆ ತೋರಿಸುವಂತೆ ಸಲಹೆ ನೀಡಿದರು.
ನಿಮ್ಮ ಅಭಿವೃದ್ಧಿ ಹಿಂದೆ ಪೋಷಕರ ತ್ಯಾಗವಿದೆ: ಮಕ್ಕಳಿಗೆಶಿಕ್ಷಣ, ಆಶ್ರಯ, ಆಹಾರ ಮತ್ತು ನೈತಿಕ ಮಾರ್ಗದರ್ಶನ ಒದಗಿಸಲು ಪೋಷಕರು ಹತ್ತು ಹಲವು ತ್ಯಾಗಗಳನ್ನು ಮಾಡಬೇಕಾಗುತ್ತದೆ, ಮಕ್ಕಳಿಗೆ ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸ ಕಲಿಸದೇ ಹೋದರೆ ಬರುವ ದಿನಗಳು ಅತ್ಯಂತ ದುಸ್ತರವಾಗಲಿದೆ, ಪೋಷಕರನ್ನು ಗೌರವಿಸುವುದು ಎಂದರೆ ಪಾಲಕರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ನಡೆಯುವುದು, ನಯವಾಗಿ ಮಾತನಾಡುವುದು, ಅಗತ್ಯವಿದ್ದಾಗ ಅವರಿಗೆ ಸಹಾಯ ಮಾಡುವುದಾಗಿದೆ ಎಂದರು.ಕುರುಡು ವಿಧೇಯತೆ ಬೇಡ: ಪೋಷಕರ ಮೇಲಿನ ಗೌರವ ಆರೋಗ್ಯಕರ ಸಮಾಜ ನಿರ್ಮಿಸುತ್ತದೆ. ಬಹುತೇಕ ಸಂಸ್ಕೃತಿ ಮತ್ತು ಧರ್ಮಗಳಲ್ಲಿ ಪೋಷಕರನ್ನು ಗೌರವಿಸುವುದು ನೈತಿಕ ಕರ್ತವ್ಯವೆಂದು ಪರಿಭಾವಿಸಲಾಗುತ್ತಿದೆ, ಆದಾಗ್ಯೂ ಗೌರವ ಎಂದರೆ ಕುರುಡು ವಿಧೇಯತೆ ಎಂದರ್ಥವಲ್ಲ ಮಕ್ಕಳು ಬೆಳೆದಂತೆ ವಿಭಿನ್ನ ಅಭಿಪ್ರಾಯ ಹೊಂದಿರಬಹುದು, ಆದರೆ ಸೌಜನ್ಯ ಮತ್ತು ತಿಳುವಳಿಕೆಯೊಂದಿಗೆ ಅವುಗಳನ್ನು ವ್ಯಕ್ತಪಡಿಸಬೇಕು ಅಂದಾಗ ಮಾತ್ರ ಪೋಷಕರು ಮತ್ತು ಮಕ್ಕಳ ನಡುವಿನ ಬಾಂಧವ್ಯ ಬಲಗೊಳ್ಳಲು ಸಾಧ್ಯವೆಂದರು. ಇದಕ್ಕೂ ಮುನ್ನ ಶಿಕ್ಷಕ ಎ.ಟಿ.ಪೀಠದ ಮಕ್ಕಳು ಮತ್ತು ತಾಯಂದಿರಿಗೂ ಪ್ರತಿಜ್ಞಾವಿಧಿ ಬೋಧಿಸಿದರು.
ನವೋದಯ ವಿದ್ಯಾ ಸಂಸ್ಥೆ ಅಧ್ಯಕ್ಷ ಬಿ.ಸಿ. ಹಾವೇರಿಮಠ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಸಂಸ್ಥೆ ನಿರ್ದೇಶಕ ಡಾ.ಪ್ರೇಮಾನಂದ ಲಕ್ಕಣ್ಣನವರ, ಕೋಶ್ಯಾಧ್ಯಕ್ಷ ಅಶೋಕ ಬಣಕಾರ, ಆಡಳಿತಾಧಿಕಾರಿ ವಸಂತ ಕನ್ನಮ್ಮನವರ, ಕಾರ್ಯಕಾರಿ ಮಂಡಳಿ ಸದಸ್ಯರಾದ ಲಿಂಗರಾಜ ಹರಿಯಾಳ, ವಿ.ಸಿ. ಹಾವೇರಿಮಠ, ಮುಖ್ಯಶಿಕ್ಷಕರಾದ ಮಲ್ಲಿಕಾರ್ಜುನ ಮೋರೆ, ಎನ್.ಐ. ಹುಚ್ಚಣ್ಣನವರ ಸೇರಿದಂತೆ ಶಿಕ್ಷಕ ಸಿಬ್ಬಂದಿ ಪಾಲ್ಗೊಂಡಿದ್ದರು. ಪ್ರಶಾಂತ ಗೊರವರ ಸ್ವಾಗತಿಸಿದರು. ಚೇತನಸ್ವಾಮಿ ಹಿರೇಮಠ ವಂದಿಸಿದರು.